ಅಕ್ಕಿಆಲೂರಿನ ಚನ್ನವೀರೇಶ್ವರ ವಿರಕ್ತಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಚಿಂತನಗೋಷ್ಠಿ ನಡೆಯಿತು. ವಿರಕ್ತಮಠದ ಶಿವಬಸವ ಶ್ರೀಗಳು ಮಾತನಾಡಿ, ಜನಪದ ಹಾಗೂ ಅಧ್ಯಾತ್ಮದ ಸಂಬಂಧ ವಿವರಿಸಿದರು.
ಅಕ್ಕಿಆಲೂರು: ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿರುವ ಗ್ರಾಮೀಣ ಸೊಗಡಿನ ಜಾನಪದ ಸಾಹಿತ್ಯದ ಮೂಲಕ ನಮ್ಮ ಪೂರ್ವಜರು ನೆಮ್ಮದಿಯ ಬದುಕು ಕಟ್ಟಿಕೊಂಡು ನಾಡಿನ ಸಿರಿವಂತಿಕೆಯನ್ನು ಹೆಚ್ಚಿಸಿದ್ದಾರೆ ಎಂದು ವಿರಕ್ತಮಠದ ಶಿವಬಸವ ಶ್ರೀಗಳು ಹೇಳಿದರು.
ಪಟ್ಟಣದ ಚನ್ನವೀರೇಶ್ವರ ವಿರಕ್ತಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಶ್ರೀ ದುಂಡಿ ಬಸವೇಶ್ವರ ಜನಪದ ಕಲಾ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಚಿಂತನಗೋಷ್ಠಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಅಂತರಂಗ ಶುದ್ಧಿಗಾಗಿ ಜಾನಪದ ಸಾಹಿತ್ಯವನ್ನು ರಚಿಸಿದ ಪೂರ್ವಜರು, ಜಾನಪದ ಸಾಹಿತ್ಯಕ್ಕೆ ಆಧ್ಯಾತ್ಮಿಕ ಕ್ಷೇತ್ರದಷ್ಟೇ ಮಹತ್ವ ನೀಡುತ್ತಿದ್ದರು. ೧೨ನೇ ಶತಮಾನದಲ್ಲಿ ಶಿವಶರಣರು ನಡೆಸಿದ ವಚನ ಸಾಹಿತ್ಯದ ಕ್ರಾಂತಿಯನ್ನಾಧರಿಸಿ ಆಡುನುಡಿಯ ಜಾನಪದ ಹಾಡುಗಳು, ಜೋಗುಳ ಪದಗಳು, ಸೋಬಾನ ಪದಗಳ ರಚನೆಯಲ್ಲಿ ತೊಡಗಿಕೊಂಡಿದ್ದ ಪೂರ್ವಿಕರು ಪರಮಾತ್ಮನ ಸಾಕ್ಷಾತ್ಕಾರಕ್ಕಾಗಿ ಜಾನಪದ ಸಾಹಿತ್ಯಕ್ಕೆ ಮೊರೆಹೋಗುತ್ತಿದ್ದರು. ಇತ್ತೀಚಿನ ಆಧ್ಯಾತ್ಮಿಕ ರಂಗ ಜಾನಪದ ರಂಗಕ್ಕಿಂತ ವಿಭಿನ್ನವಾಗಿ ಇಲ್ಲ, ಎರಡು ಒಂದೇ ನಾಣ್ಯದ ಮುಖಗಳಿದ್ದಂತೆ ಎಂದರು.
ಸಿ.ಜಿ. ಬೆಲ್ಲದ ಕಾಲೇಜಿನ ಪ್ರಾಧ್ಯಾಪಕಿ ಡಾ. ಯಮುನಾ ಕೋಣೇಸರ ಮಾತನಾಡಿ, ಆಧ್ಯಾತ್ಮಿಕ ಕ್ಷೇತ್ರದಿಂದ ಮನುಕುಲದ ಶಾಶ್ವತ ಮಾನಸಿಕ ನೆಮ್ಮದಿ ಸಾಧ್ಯವಾಗಿದ್ದು, ಶತಮಾನದ ಹಿಂದೆ ಗ್ರಾಮೀಣ ಭಾಗದ ಜನತೆಯ ಭಾವನೆಗಳ ಅನುಭಾವವಾಗಿದ್ದ ಜನಪದ ಸಾಹಿತ್ಯ ಇಂದು ಕಣ್ಮರೆಯಾಗಲು ಆಧುನಿಕ ತಂತ್ರಜ್ಞಾನವೇ ಮೂಲಕಾರಣವಾಗಿದೆ. ಅಧ್ಯಾತ್ಮ ಹೋಲುವ ಜಾನಪದ ಕ್ಷೇತ್ರಕ್ಕೆ ಮರುಜನ್ಮ ನೀಡುವ ದೃಷ್ಟಿಯಿಂದ ಯುವಶಕ್ತಿ ಹತ್ತು ಹಲವು ಕಾಯಕ್ರಮಗಳನ್ನು ರೂಪಿಸಬೇಕಿದೆ ಎಂದರು. ಇದಕ್ಕೂ ಮುನ್ನ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿಶೇಷ ಗೋಪೂಜೆ, ಮಕ್ಕಳಿಗೆ ಶ್ರೀ ಕೃಷ್ಣನ ಛಾಯಾಭಿನಯ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಿಗೆ ವಿಶೇಷ ಬಹುಮಾನ ವಿತರಣೆ ನಡೆಯಿತು. ಷಣ್ಮುಖಪ್ಪ ಮುಚ್ಚಂಡಿ, ಬಸವರಾಜ ಕೋರಿ, ಫಕ್ಕೀರಪ್ಪ ವಿಜಾಪುರ, ಸಂಗಮೇಶ ಕೊಲ್ಲಾವರ, ತೋಟಪ್ಪ ತುಪ್ಪದ, ನಾಗರಾಜ ಸಿಂಗಾಪುರ ಹಾಗೂ ಪ್ರಮುಖರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.