ಹಿರೇಕೆರೂರು: ಇಂದಿನ ದಿನಗಳಲ್ಲಿ ಜಾನಪದ ಉತ್ಸವ ಕಾರ್ಯಕ್ರಮಗಳು ಯುವಜನತೆಯಲ್ಲಿ ನಾಡಿನ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಹಾಯ ಮಾಡುತ್ತದೆ ಎಂದು ಸಿಇಎಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ತಿಳಿಸಿದರು.ಪಟ್ಟಣದ ತರಳಬಾಳು ಜಗದ್ಗುರು ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಜಾನಪದ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಾಡಿನ ಜಾನಪದ ಕಲೆಗಳು, ಭವ್ಯ ಪರಂಪರೆಗಳು ನಮ್ಮ ಸಂಸ್ಕೃತಿಯ ಇತಿಹಾಸದ ಸಂದೇಶವನ್ನು ಸಾರುತ್ತವೆ. ಇಂದಿನ ಯಾಂತ್ರಿಕೃತ ಹಾಗೂ ಅನುಕರಣೀಯ ಜೀವನ ಶೈಲಿಯಲ್ಲಿ ಎಲ್ಲ ನಮ್ಮ ಪರಂಪರೆಗಳು ಮಾಯವಾಗುತ್ತಿವೆ. ಮುಂಬರುವ ಪೀಳಿಗೆಗೆ ಅವುಗಳನ್ನು ತಿಳಿಸಿ ಬೆಳೆಸುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು.ಸಿಇಎಸ್ ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ ಮಾತನಾಡಿ, ವಿದ್ಯಾರ್ಥಿಜೀವನ ಬಹು ಅಮೂಲ್ಯವಾದದ್ದು, ಅದರಲ್ಲೂ ಬಿಇಡಿ ಪ್ರಶಿಕ್ಷಣಾರ್ಥಿಗಳು ಭವಿಷ್ಯದಲ್ಲಿ ಭವ್ಯ ಭಾರತಕ್ಕೆ ಸತ್ ಪ್ರಜೆಗಳನ್ನು ನೀಡುವ ಗುರುತರವಾದ ಜವಾಬ್ದಾರಿ ನಿಮ್ಮ ಮೇಲಿದ್ದು, ನಮ್ಮ ನಾಡಿನ ಕಲೆ, ಸಂಸ್ಕೃತಿ, ಆಚಾರಗಳು ಹಾಗೂ ಸಾಮಾಜಿಕ ವ್ಯವಸ್ಥೆ, ಜವಾಬ್ದಾರಿಗಳನ್ನು ಅರಿತು ಸುಭದ್ರ ಹಾಗೂ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದರು.ಸಿಇಎಸ್ ಸಂಸ್ಥೆಯ ಆಡಳಿತಾಧಿಕಾರಿ ಎಸ್. ವೀರಭದ್ರಯ್ಯ, ಕವಿ ಡಾ. ನಿಂಗಪ್ಪ ಚಳಗೇರಿ, ಪ್ರಾಚಾರ್ಯ ಬಿ.ಪಿ. ಹಳ್ಳೇರ ಸೇರಿದಂತೆ ಉಪನ್ಯಾಸಕರು, ಪ್ರಶಿಕ್ಷಣಾರ್ಥಿಗಳು ಇದ್ದರು.ವಿವಿಧೆಡೆ ಕಿಸಾನ್ ಡ್ರೋನ್ ಪ್ರಾತ್ಯಕ್ಷಿಕೆ
ಶಿಗ್ಗಾಂವಿ: ಕೃಷಿ ಇಲಾಖೆ ಹಾಗೂ ಐಎಫ್‌ಎಫ್‌ಸಿಒ ಸಹಯೋಗದಡಿ ಗಂಜಿಗಟ್ಟಿ, ಚಾಕಾಪುರ ಹಾಗೂ ಬಂಕಾಪುರ ಗ್ರಾಮದ ಜಮೀನಿನಲ್ಲಿ ಕಿಸಾನ್ ಡ್ರೋನ್ ಮೂಲಕ ನ್ಯಾನೋ ಯೂರಿಯಾ ಮತ್ತು ನ್ಯಾನೊ ಡಿಎಪಿಯನ್ನು ಮೆಕ್ಕೆಜೋಳ ಬೆಳೆಗೆ ಶನಿವಾರ ಸಿಂಪಡಿಸುವ ಪ್ರಾತ್ಯಕ್ಷಿಕೆ ನಡೆಯಿತು.ಕಿಸಾನ್ ಡ್ರೋನ್ ಮೂಲಕ ೧ ಎಕರೆ ಜಮೀನಿನನ್ನು ೧೫ ನಿಮಿಷಗಳಲ್ಲಿ ಹಾಗೂ ೧೫ ಲೀಟರ್ ನೀರಿನಲ್ಲಿ ಔಷಧಗಳ ಸಿಂಪಡಣೆ ಸಾಮರ್ಥ್ಯ ಪ್ರದರ್ಶಿಸಲಾಯಿತು. ನಿಗದಿತ ಅಳತೆಯಲ್ಲಿ ನ್ಯಾನೋ ಯೂರಿಯಾ, ನ್ಯಾನೋ ಡಿಎಪಿ, ಕೀಟನಾಶಕ ಹಾಗೂ ಲಘು ಪೋಷಕಾಂಶಗಳನ್ನು ಏಕಕಾಲಕ್ಕೆ ಸಿಂಪಡಿಸಬಹುದು.ನ್ಯಾನೊ ಯೂರಿಯಾ ಶೇ. ೨೦ ಸಾರಜನಕವನ್ನು ಹೊಂದಿದ್ದು, ಬೆಳೆಗಳಿಗೆ ಅವಶ್ಯವಾಗಿರುವ ಸಾರಜನಕವನ್ನು ಒದಗಿಸುವ ಮೂಲಕ ಹೆಚ್ಚಿನ ಇಳುವರಿಗಾಗಿ ಪ್ರಮುಖ ಬೆಳವಣಿಗೆಯ ಹಾರ್ಮೋನುಗಳನ್ನು ಉತ್ತೇಜಿಸುತ್ತದೆ. ನ್ಯಾನೋ ಡಿಎಪಿ ಶೇ. ೮ ಸಾರಜನಕ ಮತ್ತು ಶೇ. ೧೬ ರಂಜಕ ಹೊಂದಿದ್ದು, ಬೆಳೆಯ ಬೆಳವಣಿಗೆಗೆ ಮತ್ತು ಅಭಿವೃದ್ದಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಿ ಇಳುವರಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ೨೫ರಿಂದ ೩೦ ದಿನಗಳ ಬೆಳೆಗೆ ನ್ಯಾನೋ ಯೂರಿಯಾ ದ್ರಾವಣವನ್ನು ಪ್ರತಿ ಲೀಟರ್ ನೀರಿಗೆ ೪ ಮಿಲೀ ಮಿಶ್ರಣ ಮಾಡಿ ಬೆಳೆಯ ಎಲೆಗಳ ಮೇಲೆ ಸಿಂಪಡಿಸುವ ಮೂಲಕ ಹರಳು ರೂಪದ ಯೂರಿಯಾ ಬಳಕೆ ಕಡಿಮೆ ಮಾಡಬಹುದು.ಈ ಪ್ರಾತ್ಯಕ್ಷಿಕೆಯಲ್ಲಿ ಗಂಜಿಗಟ್ಟಿ, ಚಾಕಾಪುರ, ಬಂಕಾಪುರ ಗ್ರಾಮದ ಗ್ರಾಮಸ್ಥರು, ಐಎಫ್‌ಎಫ್‌ಸಿಒ ಸಂಸ್ಥೆಯ ಅಧಿಕಾರಿಗಳು ಹಾಗೂ ಕೃಷಿ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.