ಸಾರಾಂಶ
ಲ್ಲಿ ಹೊಸದಾಗಿ ಮದುವೆಯಾದ ಜೋಡಿಗಳು ಗ್ರಾಮದ ಹೊರವಲಯದ ಜಮೀನಿನಲ್ಲಿರುವ ಉದ್ಭವ ಶಿವಲಿಂಗ ಹಾಗೂ ನಂದಿ ಬಸವ ವಿಗ್ರಹಗಳಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯುವುದು ವಾಡಿಕೆ
ಕನ್ನಡಪ್ರಭ ವಾರ್ತೆ ನಂಜನಗೂಡು
ತಾಲೂಕಿನ ಬಂಕಹಳ್ಳಿ ಗ್ರಾಮದಲ್ಲಿನ ಜಮೀನಿನಲ್ಲಿದ್ದ ಉದ್ಭವ ಶಿವಲಿಂಗ ಹಾಗೂ ನಂದಿಬಸವ ಮೂರ್ತಿಗಳನ್ನು ಕಿಡಿಗೇಡಿಗಳು ಭಗ್ನಗೊಳಿಸಿ, ಗ್ರಾಮಸ್ಥರು ಪೂಜಾ ಕೈಂಕರ್ಯಗಳನ್ನು ನಡೆಸದಂತೆ ದಿಗ್ಬಂಧನ ವಿಧಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಗ್ರಾಮದಲ್ಲಿ ಹೊಸದಾಗಿ ಮದುವೆಯಾದ ಜೋಡಿಗಳು ಗ್ರಾಮದ ಹೊರವಲಯದ ಜಮೀನಿನಲ್ಲಿರುವ ಉದ್ಭವ ಶಿವಲಿಂಗ ಹಾಗೂ ನಂದಿ ಬಸವ ವಿಗ್ರಹಗಳಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯುವುದು ವಾಡಿಕೆಯಾಗಿತ್ತು.
1982-83 ರ ಸಾಲಿನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಅನ್ಯ ಕೋಮಿನ ವ್ಯಕ್ತಿಗೆ ನಿಯಮಬಾಹಿರವಾಗಿ ಖಾತೆ ಮಾಡಿಕೊಟ್ಟಿದ್ದಾರೆ. ಈಗ್ಗೆ ಎರಡು ತಿಂಗಳಿನಿಂದ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಪೂಜಾ ಕೈಂಕರ್ಯಗಳನ್ನು ನಡೆಸದಂತೆ ಅನ್ಯ ಕೋಮಿನ ವ್ಯಕ್ತಿ ಅಡ್ಡಿಪಡಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.ಬುಧವಾರ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಬಿ. ಹರ್ಷವರ್ಧನ್ ಸುದ್ದಿಗಾರರೊಂದಿಗೆ ಮಾತನಾಡಿ, ಶಿವಲಿಂಗದ ಮೇಲೆ ಪೆಟ್ಟು ಬಿದ್ದಿರುವ ಗುರುತುಗಳಿದ್ದು, ಪಕ್ಕದಲ್ಲಿ ನಂದಿ ಬಸವನ ತಲೆ ಭಾಗವು ಮುರಿದು ಬಿದ್ದಿದೆ. ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ದಾಖಲಾತಿಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು, ಸ್ಥಳದಲ್ಲಿ ದೇವಾಲಯ ಇತ್ತು ಎಂಬುದಕ್ಕೆ ಕುರುಹು ಇದೆ. ಹಾಗಾಗಿ ಇದೇ ಸ್ಥಳದಲ್ಲಿ ದೇವಾಲಯವನ್ನು ನಿರ್ಮಾಣ ಮಾಡಬೇಕಾಗಿದೆ, ಬಂಕಹಳ್ಳಿಯ ಗ್ರಾಮಸ್ಥರು ಶಿವಲಿಂಗವನ್ನು ಭಗ್ನಗೊಳಿಸಿರುವ ಕುರಿತು ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಸಂಬಂಧಪಟ್ಟ ಕಂದಾಯ ಇಲಾಖೆ ಮತ್ತು ಪುರಾತತ್ವ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಉಂಟಾಗಿರುವ ಅಶಾಂತಿಯ ವಾತಾವರಣಕ್ಕೆ ತೆರೆ ಎಳೆಯ ಬೇಕಿದೆ, ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಅವರು ಹೇಳಿದರು.