ಸಾರಾಂಶ
ರಾಜ್ಯ ಸಚಿವ ಸಂಪುಟ ಪುನಾರಚನೆ ಮಾಡುವ ಇಂಗಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿದೆ ಎಂಬ ಸುದ್ದಿ ಸ್ಫೋಟವಾಗುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದ್ದು, ಈ ನಿರ್ಧಾರದ ಹಿಂದಿನ ಕಾರ್ಯತಂತ್ರದ ಕುರಿತು ನಾನಾ ವ್ಯಾಖ್ಯಾನ ಕೇಳಿ ಬರತೊಡಗಿದೆ.
ಬೆಂಗಳೂರು : ಬಿಹಾರ ಚುನಾವಣೆ ಸಂಪನ್ನವಾದ ನಂತರ ರಾಜ್ಯ ಸಚಿವ ಸಂಪುಟ ಪುನಾರಚನೆ ಮಾಡುವ ಇಂಗಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿದೆ ಎಂಬ ಸುದ್ದಿ ಸ್ಫೋಟವಾಗುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದ್ದು, ಈ ನಿರ್ಧಾರದ ಹಿಂದಿನ ಕಾರ್ಯತಂತ್ರದ ಕುರಿತು ನಾನಾ ವ್ಯಾಖ್ಯಾನ ಕೇಳಿ ಬರತೊಡಗಿದೆ.
ಅಸಮರ್ಥ, ಆರೋಪಗಳ ಸುಳಿಗೆ ಸಿಲುಕಿ ಹೈಕಮಾಂಡ್ ಅವಕೃಪೆಗೆ ಸಿಲುಕಿರುವ ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಪಕ್ಷದ ಹೊಣೆಗಾರಿಕೆ ನೆಪದಲ್ಲಿ ಗೌರವಯುತವಾಗಿ ಕೊಕ್ ನೀಡುವ ಹಾಗೂ ಪಕ್ಷಕ್ಕಾಗಿ ಶ್ರಮಿಸಿದ ಇತರೆ ಶಾಸಕರು ಮತ್ತು ನಾಯಕರಿಗೆ ಅಧಿಕಾರ ಪ್ರದಾನ ಮಾಡುವ ಉದ್ದೇಶ ಈ ಸಂಪುಟ ಪುನಾರಚನೆ ಹಿಂದಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿರುವ ತಥ್ಯ.
ಆದರೆ, ಸಂಪುಟ ಪುನಾರಚನೆಗಾಗಿ ಹೈಕಮಾಂಡ್ ಭೇಟಿಗೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ನಡೆ ಇಷ್ಟಕ್ಕೇ ಸೀಮಿತವಲ್ಲ. ಬದಲಾಗಿ, ಆಗಾಗ ಭುಗಿಲೇಳುವ ಹಾಗೂ ಈಗಲೂ ಬೂದಿ ಮುಚ್ಚಿದ ಕೆಂಡದಂತಿರುವ ಅಧಿಕಾರ ಹಸ್ತಾಂತರ ಎಂಬ ಜೀನಿಯನ್ನು ದೀಪದೊಳಗೆ ಬಂಧಿಸಿಡುವ ತಂತ್ರಗಾರಿಕೆ ಎಂದೇ ವಿರೋಧಿ ಬಣ ವ್ಯಾಖ್ಯಾನಿಸುತ್ತಿದೆ.
ಅಧಿಕಾರ ಹಸ್ತಾಂತರ ಎಂಬ ಒಪ್ಪಂದ ನಡೆದಿದೆಯೇ ಎಂಬ ಬಗ್ಗೆ ಅಧಿಕೃತವಾಗಿ ಯಾವ ನಾಯಕರು ಹೇಳಿಕೆ ನೀಡದಿದ್ದರೂ ಇಂತಹದೊಂದು ಅಗ್ನಿಗೆ ತುಪ್ಪ ಸುರಿದು ಜೀವಂತವಿಡುವ ಪ್ರಯತ್ನವನ್ನು ಕಾಂಗ್ರೆಸ್‌ನ ಬಣವೊಂದು ಸತತವಾಗಿ ನಡೆಸುತ್ತಿದೆ. ಈ ಬಣವು, ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರ್ಣಗೊಳ್ಳುವ ನವೆಂಬರ್ ಮಾಸದಲ್ಲಿ ಈ ಜೀನಿ ಹೈಕಮಾಂಡ್ ತೀಡುವಿಕೆಯಿಂದಾಗಿ ದೀಪದಿಂದ ಹೊರ ಬರಲಿದ್ದು, ತಮ್ಮ ಬಯಕೆ ಈಡೇರಿಸುತ್ತಾನೆ ಎಂದೇ ನಂಬಿದೆ.
ಆದರೆ, ಇಂತಹ ಬೆಳವಣಿಗೆಯೊಂದಕ್ಕೆ ಆಸ್ಪದ ನೀಡಲೇಬಾರದು ಎಂಬ ದೃಢ ನಿಶ್ಚಯ ಹೊಂದಿರುವ ಆಪ್ತರ ಬಣವೊಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ನಿರ್ಮಾಣ ಮಾಡಿ ಸಚಿವ ಸಂಪುಟ ಪುನಾರಚನೆ ಕಸರತ್ತಿಗೆ ಕೈಹಾಕುವಂತೆ ಮಾಡಿದೆ ಎಂದು ವಿರೋಧಿ ಬಣ ಆರೋಪಿಸುತ್ತದೆ.
ಈ ಬಣದ ಪ್ರಕಾರ, ಸಚಿವ ಸಂಪುಟ ಪುನಾರಚನೆ ವಿಚಾರ ಪ್ರಸ್ತಾಪಿಸುತ್ತಿದ್ದಂತೆಯೇ ಸಚಿವ ಸ್ಥಾನಾಕಾಂಕ್ಷಿಗಳಲ್ಲಿ ಚಟುವಟಿಕೆ ಗರಿಗೆದರುತ್ತದೆ. ಸಹಜವಾಗಿಯೇ ಸಂಪುಟ ಸೇರುವ ಬಯಕೆ ಇರುವವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶ್ವಾಸ ಗಳಿಸಲು ಸಕಲ ಶಕ್ತಿ ವಿನಿಯೋಗಿಸುತ್ತಾರೆ. ಇದೇ ವೇಳೆ ಸಂಪುಟದಲ್ಲಿ ಉಳಿಯ ಬಯಸುವ ಸಚಿವರು ಸಹ ಮುಖ್ಯಮಂತ್ರಿಯವರ ಅವಕೃಪೆಗೆ ಪಾತ್ರರಾಗದಿರಲು ಶತ ಪ್ರಯತ್ನ ನಡೆಸಲಿದ್ದಾರೆ.
ಇಷ್ಟಾದರೆ ಇಡೀ ಕಾಂಗ್ರೆಸ್ ಶಾಸಕ ಹಾಗೂ ಸಚಿವ ಪಡೆ ತಮ್ಮ ಸುತ್ತ ನೆರೆಯುತ್ತದೆ. ಅದು ಅಧಿಕಾರ ಹಸ್ತಾಂತರವೆಂಬ ಗುಮ್ಮ ಬಯಲಿಗೆ ಬರುತ್ತದೆ ಎನ್ನಲಾಗುತ್ತಿರುವ ನವೆಂಬರ್ ಮಾಸದಲ್ಲೇ ಸಚಿವ ಸಂಪುಟ ವಿಸ್ತರಣೆ ವಿಚಾರವೂ ಪ್ರಬಲವಾಗುವ ಮೂಲಕ ಹೈಕಮಾಂಡ್ ಇಬ್ಬಂದಿಗೆ ಸಿಲುಕುವಂತಾಗುತ್ತದೆ. ಹೀಗಾದಾಗ ಒಂದು ವೇಳೆ ಹೈಕಮಾಂಡ್ ನಿರ್ದಿಷ್ಟ ಸೂಚನೆಯನ್ನೇನಾದರೂ ನೀಡಿದರೆ ಆಗ ಶಾಸಕರ ಅಭಿಪ್ರಾಯ ಕೇಳಬೇಕು ಎಂಬ ಅಸ್ತ್ರ ಪ್ರಯೋಗಿಸಲು ಈ ತಂತ್ರಗಾರಿಕೆ ಪ್ರಯೋಗಿಸಲಾಗಿದೆ ಎಂದು ವಿರೋಧಿ ಬಣ ಆರೋಪಿಸುತ್ತಿದೆ.
ಈ ಬಣದ ಪ್ರಕಾರ, ರಸ್ತೆ ಗುಂಡಿ ನೆಪದಲ್ಲಿ ನಡೆದ ಮುಖ್ಯಮಂತ್ರಿಯವರ ಸರಣಿ ಸಭೆಗಳು, ಸಿಟಿ ರೌಂಡ್ಸ್‌ನಂತಹ ಪ್ರಯತ್ನಗಳು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಟು ಪ್ರತಿಕ್ರಿಯೆ ನೀಡುವಂತೆ ಮಾಡುವ ಪ್ರಯತ್ನ. ಆದರೆ, ಹೈಕಮಾಂಡ್ ಬಲ ನಂಬಿರುವ ಡಿಕೆಶಿ ಈ ಬಗ್ಗೆ ಹೆಚ್ಚೇನೂ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಸಚಿವ ಸಂಪುಟ ಪುನಾರಚನೆಯೆಂಬ ಪ್ರಬಲ ಅಸ್ತ್ರ ಪ್ರಯೋಗವಾಗಿದೆ. ಇದಕ್ಕೆ ಡಿಕೆಶಿ ಬಣದಿಂದ ಯಾವ ಪ್ರತ್ಯಾಸ್ತ್ರ ಪ್ರಯೋಗವಾಗಲಿದೆ ಎಂಬುದನ್ನು ಕಾದು ನೋಡಬೇಕು.
ಏನಿದು ಲೆಕ್ಕಾಚಾರ? ಕಾಂಗ್ರೆಸ್‌ನಲ್ಲಿ ಅಧಿಕಾರ ಹಸ್ತಾಂತರ ಒಪ್ಪಂದವಾಗಿದೆ ಎಂಬ ಚರ್ಚೆಗಳಿವೆ. ಆದರೆ ಅದನ್ನು ಯಾವ ನಾಯಕರೂ ಹೇಳುತ್ತಿಲ್ಲ
- ಸರ್ಕಾರಕ್ಕೆ 2.5 ವರ್ಷ ತುಂಬಿದಾಗ ಆ ವಿಚಾರ ಮತ್ತೆ ಚರ್ಚೆಗೆ ಬರುತ್ತದೆ, ಅಧಿಕಾರ ಸಿಗುತ್ತದೆ ಎಂದು ಒಂದು ಬಣ ನಂಬಿದೆ
ಇದಕ್ಕೆ ಆಸ್ಪದ ನೀಡಲೇಬಾರದು ಎಂದು ಮತ್ತೊಂದು ಬಣ ಸಿಎಂ ಮೇಲೆ ಒತ್ತಡ ಹೇರಿ ಸಂಪುಟ ಪುನಾರಚನೆಗೆ ಯತ್ನಿಸಿದೆ- ಇದರಿಂದ ಸಚಿವ ಸ್ಥಾನಾಕಾಂಕ್ಷಿಗಳಲ್ಲಿ ಚಟುವಟಿಕೆ ಗರಿಗೆದರುತ್ತದೆ. ಸಿಎಂ ವಿಶ್ವಾಸವನ್ನು ಗಳಿಸಲು ಅವರು ಯತ್ನಿಸುತ್ತಾರೆ
-ಸಂಪುಟದಲ್ಲಿ ಸ್ಥಾನ ಉಳಿಸಿಕೊಳ್ಳಲು ಬಯಸುವವರೂ ಸಹ ಸಿಎಂ ಅವಕೃಪೆಗೆ ಪಾತ್ರರಾಗದಿರಲು ಪ್ರಯತ್ನ ನಡೆಸುತ್ತಾರೆ- ಆಗ ಕಾಂಗ್ರೆಸ್ಸಿನ ಇಡೀ ಶಾಸಕ, ಸಚಿವ ಪಡೆ ಸಿಎಂ ಸುತ್ತ ನೆರೆಯುತ್ತದೆ. ಹೈಕಮಾಂಡ್ ಅಡಕತ್ತರಿಯೊಳಗೆ ಸಿಲುಕುತ್ತದೆ
- ಅಂತಹ ಸಂದರ್ಭದಲ್ಲಿ ಹೈಕಮಾಂಡ್ ಸೂಚನೆ ಕೊಟ್ಟರೂ ಶಾಸಕರ ಅಭಿಪ್ರಾಯ ಕೇಳಬೇಕು ಎಂಬ ಅಸ್ತ್ರ ಪ್ರಯೋಗ ಸಂಭವ