ಸಾರಾಂಶ
ಕ್ನನಡಪ್ರಭ ವಾರ್ತೆ ಐಗಳಿ
ಸ್ವಾತಂತ್ರ‍್ಯ ಬಂದಾಗಿನಿಂದ ರಾಜ್ಯದ ಮುಖ್ಯಮಂತ್ರಿಗಳಲ್ಲಿ ಹೆಚ್ಚು ಸಾಲ ಮಾಡಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಹೇಳಿದರು.ಐಗಳಿ ಗ್ರಾಮದಲ್ಲಿ ಬೆಳೆ ಹಾನಿ ವೀಕ್ಷಿಸಿದ ಬಳಿಕ ಶುಕ್ರವಾರ ರಾತ್ರಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಿಂದೆ ನಮ್ಮ ಸರ್ಕಾರ ಇದ್ದಾಗ ₹೨೫ ಲಕ್ಷ ಸಾವಿರ ಕೋಟಿ ಬೊಕ್ಕಸದಲ್ಲಿ ಬಿಟ್ಟು ಹೋಗಿದ್ದೇವು. ಅಲ್ಲದೆ ಒಂದು ರುಪಾಯಿ ಟ್ಯಾಕ್ಸ್ ಹಾಕಿರಲಿಲ್ಲ. ಈ ಸರ್ಕಾರ ಬಂದ ಮೇಲೆ ಸಾಲವನ್ನೂ ಮಾಡುತ್ತಿದೆ, ಟ್ಯಾಕ್ಸ್ ಅನ್ನು ಹಾಕುತ್ತಿದೆ. ಮುಖ್ಯಮಂತ್ರಿಗಳು ಕೂಡಲೇ ಬಂದು ಮೊದಲು ರೈತರಿಗೆ ಸಾಂತ್ವನ ಹೇಳಬೇಕು. ಎಲ್ಲಿ ಭೇಟಿ ಮಾಡಲು ಸಾಧ್ಯವೋ ಅಲ್ಲಿಗೆ ಭೇಟಿ ಮಾಡಿ ರೈತರಿಗೆ ಪರಿಹಾರ ನೀಡುವ ಭರವಸೆ ನೀಡಿ ಧೈರ್ಯ ತುಂಬಬೇಕು ಎಂದು ಒತ್ತಾಯಿಸಿದರು.
ಸಾಲ ಮಾಡಿಯಾದರೂ ಮೊದಲು ರೈತರಿಗೆ ಪರಿಹಾರ ಒದಗಿಸಬೇಕು. ರೈತರ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ಸರ್ಕಾರ ತಕ್ಷಣ ರೈತರ ಜಮೀನುಗಳಿಗೆ ಭೇಟಿ ನೀಡಿ, ಹಾನಿ ವೀಕ್ಷಿಸಿ ಪರಿಹಾರ ಒದಗಿಸಬೇಕು. ಮೂಗಿಗೆ ತುಪ್ಪ ಒರೆಸುವ ಕೆಲಸ ಮಾಡದೇ ಸಂಪೂರ್ಣ ನಷ್ಟ ಭರಿಸುವ ಕೆಲಸ ಮಾಡಬೇಕು. ತಾಲೂಕಿನಲ್ಲಿ ಮೆಕ್ಕೆಜೋಳ, ಉದ್ದು, ತೊಗರಿ, ದ್ರಾಕ್ಷಿ, ದಾಳಂಬಿ ಸೇರಿದಂತೆ ಅನೇಕ ಬೆಳೆಗಳ ಹಾನಿಯಾಗಿದೆ. ಪ್ರಸಕ್ತ ವರ್ಷದ ರೈತರ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಸಿದ್ದರಾಮಯ್ಯ ಸರ್ಕಾರದಲ್ಲಿ ಹಣವೇ ಇಲ್ಲ. ಹಾಗಾಗೀ ಸರ್ಕಾರ ಎಲ್ಲೂ ಹಾನಿ ವೀಕ್ಷಿಸುತ್ತಿಲ್ಲ. ಯಾವ ಮಂತ್ರಿಯೂ ಹೊರಗಡೆಯೂ ಬರುತ್ತಿಲ್ಲ. ಅದಕ್ಕೆ ಕೇಂದ್ರ ಸರ್ಕಾರದ ಕಡೆ ಬೆರಳು ಮಾಡಿ ಸಮಯ ದೂಡುವ ನಾಟಕ ಮಾಡುತ್ತಿದ್ದಾರೆಂದು ಎಂದು ಆರೋಪಿಸಿದರು.ಇದುವರೆಗೆ ಎಷ್ಟು ಹಾನಿಯಾಗಿದೆ, ಪರಿಹಾರಕ್ಕೆ ಎಷ್ಟು ಹಣ ಬೇಕು ಎಂಬ ವರದಿಯನ್ನು ಮುಖ್ಯಮಂತ್ರಿಗಳು ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಬೇಕಾಗಿತ್ತು ಅದನ್ನೂ ಮಾಡಿಲ್ಲ ಎಂದರು.
ಸೋಯಾಬಿನ್ ಬೆಳೆಗೆ ಎಕರೆಗೆ ₹೨೫ ಸಾವಿರ ಕೊಡಬೇಕು. ಇನ್ನು ಕೆಲವು ಬೆಳೆಗೆ ೩೦ ರಿಂದ ೫೦ ಸಾವಿರ ರು. ಖರ್ಚಾಗುತ್ತದೆ. ತೋಟಗಾರಿಕಾ ಬೆಳೆಗೆ ಇನ್ನೂ ಹೆಚ್ಚು ಖರ್ಚು ಆಗುತ್ತದೆ. ಇಷ್ಟನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ಪರಿಹಾರ ಕೊಡಲೇಬೇಕು. ಎನ್‌ಡಿಆರ್‌ಎಫ್ ನಿಯಮಗಳ ಪ್ರಕಾರ ಹೋದರೆ ಪ್ರತಿ ಹೆಕ್ಟೇರ್‌ಗೆ ₹೧೨ ಸಾವಿರ ಮಾತ್ರ ಸಿಗುತ್ತದೆ. ನಮ್ಮ ಸರ್ಕಾರವಿದ್ದಾಗ ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರು ಅದನ್ನು ಡಬಲ್ ಮಾಡಿ, ತಕ್ಷಣಕ್ಕೆ ಹಣ ಕೊಡುವ ವ್ಯವಸ್ಥೆ ಮಾಡಿದ್ದೇವು. ಈಗಲೂ ನೀವೂ ಅದನ್ನೇ ಮಾಡಬೇಕು. ಕೇಂದ್ರ ಸರ್ಕಾರವು ಪ್ರತಿ ೪ ತಿಂಗಳಿಗೆ ಪ್ರವಾಹ ಆಗಲಿ, ಆಗದೇ ಇರಲಿ ಎನ್‌ಡಿಆರ್‌ಎಫ್ ಹಣ ರಾಜ್ಯಕ್ಕೆ ಕೊಟ್ಟು ಬಿಡುತ್ತಾರೆ. ಮೊದಲು ಅದನ್ನು ರೈತರಿಗೆ ಕೊಟ್ಟು ಬಿಡಿ. ಇಲ್ಲದಿದ್ದರೆ ರಾಜ್ಯಾದ್ಯಂತ ಬಾಜಪಾ ಹೋರಾಡ ಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ತೆಲಸಂಗ ಗ್ರಾಮದ ಸಮಸ್ಯೆಗಳ ಬಗ್ಗೆ ಮುಂಬರುವ ಅಧಿವೇಶನದಲ್ಲಿ ಮಾತನಾಡುವ ಭರವಸೆ ನೀಡಿದರು.ರೈತ ಮುಖಂಡನ ಪ್ರಶ್ನೆಗಳಿಂದ ಗೊಂದಲ:
ಬೆಳೆಹಾನಿ ವೀಕ್ಷಣೆಯ ಸಂದರ್ಭದಲ್ಲಿ, ಸ್ಥಳೀಯ ರೈತ ಮುಖಂಡ ಮುರಿಗೆಪ್ಪ ಅರ್ಜುನಗಿ ಅವರು ದಿಢೀರನೇ ಕೇಂದ್ರದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಮೋದಿ ಮತ್ತು ಅಮಿತ್ ಶಾ ಅವರು ಅದಾನಿ ಹಾಗೂ ಅಂಬಾನಿಗೆ ಎಲ್ಲವನ್ನು ಮಾಡುತ್ತಿದ್ದಾರೆ. ಆದರೆ ರೈತರ ಸಮಸ್ಯೆಗಳನ್ನು ಏಕೆ ಪರಿಹರಿಸುತ್ತಿಲ್ಲ ಎಂದು ಅವರು ನೇರವಾಗಿ ಬಿಜೆಪಿ ನಾಯಕರ ಎದುರು ಪ್ರಶ್ನಿಸಿದರು.ರೈತ ಮುಖಂಡರ ಈ ಪ್ರಶ್ನೆಯಿಂದ ಕೆರಳಿದ ಸಿ.ಟಿ.ರವಿ, ಆರ್.ಅಶೋಕ ಅವರು ತಕ್ಷಣವೇ ಮಧ್ಯಪ್ರವೇಶಿಸಿ, ನಾವು ಸಜ್ಜನಿಕೆಯಿಂದ ಬೆಳೆ ವೀಕ್ಷಿಸಲು ಬಂದಿದ್ದೇವೆ. ಅದಕ್ಕೆ ಬೇರೆ ವೇದಿಕೆ ಸಿದ್ಧಪಡಿಸಿ ಉತ್ತರ ಕೊಡುತ್ತೇವೆ. ದಯವಿಟ್ಟು ನಿಮ್ಮ ಅರ್ಥವಿಲ್ಲದ ವಾದವನ್ನು ನಿಲ್ಲಿಸಿ ಎಂದು ಮುಖಂಡನಿಗೆ ತಿಳಿಸಿದರು.
ಈ ವೇಳೆ ನೆರೆದಿದ್ದ ಜನರಲ್ಲಿ ಕೆಲವರು ರೈತ ಮುಖಂಡನಿಗೆ ಮಾತನಾಡಲು ಅವಕಾಶ ಕೊಡಿ ಎಂದು ಹೇಳಿದರೆ, ಇನ್ನು ಕೆಲವರು ಅವರ ವರ್ತನೆ ಖಂಡಿಸಿದರು. ಗೊಂದಲ ಸೃಷ್ಟಿಸಿದ ರೈತ ಮುಖಂಡನ ವರ್ತನೆಯಿಂದಾಗಿ, ವಿರೋಧ ಪಕ್ಷದ ನಾಯಕರು ಸಭೆಯನ್ನು ಮೊಟಕುಗೊಳಿಸಿ ಸ್ಥಳದಿಂದ ನಿರ್ಗಮಿಸಿದರು. ರೈತ ಮುಖಂಡನ ಈ ನಡೆ ಸಭೆಯಲ್ಲಿ ಮುಜುಗರದ ವಾತಾವರಣ ನಿರ್ಮಾಣ ಮಾಡಿತ್ತು.ವಿಪ ಸದಸ್ಯ ಸಿ.ಟಿ.ರವಿ, ಸಂಸದ ರಮೇಶ್ ಜಿಗಜಿಣಗಿ, ವಿಪ ಸದಸ್ಯ ಎನ್.ರವಿಕುಮಾರ, ಮಾಜಿ ಶಾಸಕ ಮಹೇಶ ಕುಮಠಳ್ಳಿ, ಉಮೇಶರಾವ ಬೊಂಟೋಡಕರ, ಬಾಜಪಾ ತಾಲೂಕು ಅಧ್ಯಕ್ಷ ಗಿರೀಶ ಬುಟಾಳೆ, ಉಪಾಧ್ಯಕ್ಷ ಮಲ್ಲಪ್ಪಾ ಹಂಚನಾಳ, ಡಾ.ರವಿ ಸಂಖ, ಸಿದ್ದಪ್ಪಾ ಮುದಕಣ್ಣವರ, ಪ್ರಭಾಕರ ಚವ್ಹಾಣ, ಶಿವು ಸಿಂಧೂರ, ಅಪ್ಪಾಸಾಬ ಅವತಾಡ ಸೇರಿದಂತೆ ಸ್ಥಳಿಯ ಮುಂಡರು, ಸುತ್ತಲಿನ ಗ್ರಾಮಗಳ ರೈತರು ಇದ್ದರು.