ವಿಜಯಪುರ: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಬಡವರ ಶ್ರೇಯೋಭಿವೃದ್ಧಿಗಾಗಿ ಜಾರಿಗೆ ತಂದಿರುವ ಯೋಜನೆಗಳಾಗಿದ್ದು, ಶ್ರೀಮಂತರು ಇವುಗಳ ಪ್ರಯೋಜನ ಪಡೆಯುವುದನ್ನು ಸ್ವಯಂಪ್ರೇರಿತವಾಗಿ ಬಿಡಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಕರೆ ನೀಡಿದ್ದಾರೆ.
ಗ್ಯಾರಂಟಿ ಯೋಜನೆಗಳು ಅಭಿವೃದ್ಧಿಯ ಒಂದು ಭಾಗ
ಆಲಮಟ್ಟಿಯಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಹೊರೆಯಾಗಿವೆ ಎಂಬ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಗ್ಯಾರಂಟಿ ಯೋಜನೆಗಳು ಅಭಿವೃದ್ಧಿಯ ಒಂದು ಭಾಗ. ಇವು ಬಡವರಿಗಾಗಿ ಇರುವ ಯೋಜನೆಗಳಾಗಿವೆ ಎಂದರು.
ಶ್ರೀಮಂತರು ಇವುಗಳನ್ನು ಪಡೆಯುವುದನ್ನು ಸ್ವಯಂಪ್ರೇರಿತವಾಗಿ ಬಿಡಬೇಕು
ಶ್ರೀಮಂತರೂ ಸಹ ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಪಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಶ್ರೀಮಂತರು ಇವುಗಳನ್ನು ಪಡೆಯುವುದನ್ನು ಸ್ವಯಂಪ್ರೇರಿತವಾಗಿ ಬಿಡಬೇಕು. ಈ ಯೋಜನೆಗಳು ಬಡವರ ಆರ್ಥಿಕ ಸಬಲೀಕರಣಕ್ಕೆ ಅಗತ್ಯವಾಗಿದ್ದು, ಅರ್ಹರು ಮಾತ್ರ ಇದರ ಪ್ರಯೋಜನ ಪಡೆಯಬೇಕು. ಗ್ಯಾರಂಟಿ ಯೋಜನೆಗಳು ಬಡವರ ಪಾಲಿಗೆ ಅಭಿವೃದ್ಧಿಯ ಆಧಾರಸ್ತಂಭಗಳಾಗಿವೆ. ಆರ್ಥಿಕವಾಗಿ ಸದೃಢರಾದವರು, ತೆರಿಗೆ ಪಾವತಿದಾರರು ಈ ಸೌಲಭ್ಯಗಳಿಂದ ದೂರವಿರುವುದು ಉತ್ತಮ ಎಂದು ಸಲಹೆ ನೀಡಿದರು.
ಗ್ಯಾರಂಟಿ ಯೋಜನೆಗಳ ಜೊತೆಗೆ ರಾಜ್ಯ ಸರ್ಕಾರ ಅಭಿವೃದ್ಧಿ ಕೆಲಸಗಳನ್ನೂ ಮಾಡುತ್ತಿದೆ. ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಕೆಲಸಗಳು ಕುಂಠಿತಗೊಳ್ಳುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಣಕಾಸು ತಜ್ಞರಾಗಿದ್ದು, ಹಣಕಾಸಿನ ವ್ಯವಹಾರವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
