ಸಾರಾಂಶ
ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗಾಗಿ ಕಳೆದೆರಡು ವರ್ಷಗಳಲ್ಲಿ 6.57 ಲಕ್ಷ ಕೋಟಿ ರು. ಬಂಡವಾಳ ಹೂಡಿಕೆಗೆ 115 ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದ್ದು, ಅದರಿಂದ 2.32 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ.
ಬೆಂಗಳೂರು : ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗಾಗಿ ಕಳೆದೆರಡು ವರ್ಷಗಳಲ್ಲಿ 6.57 ಲಕ್ಷ ಕೋಟಿ ರು. ಬಂಡವಾಳ ಹೂಡಿಕೆಗೆ 115 ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದ್ದು, ಅದರಿಂದ 2.32 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಅದರೊಂದಿಗೆ ರಾಜ್ಯದಲ್ಲಿ ವ್ಯವಸ್ಥಿತ ಮತ್ತು ವ್ಯಾಪಕ ಕೈಗಾರಿಕಾ ಬೆಳವಣಿಗೆ ಸಾಧಿಸುವ ನಿಟ್ಟಿನಲ್ಲಿ ರಾಜ್ಯದ 18 ಕೈಗಾರಿಕಾ ಪ್ರದೇಶಗಳನ್ನು ವಿಶೇಷ ಬಂಡವಾಳ ಹೂಡಿಕೆ ಪ್ರದೇಶಗಳಾಗಿ ಘೋಷಿಸಲಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗಳಲ್ಲಿನ 2 ವರ್ಷಗಳ ಸಾಧನೆ ಕುರಿತ ಪ್ರಗತಿ ಪಥದ ಮುಂದಣ ಹೆಜ್ಜೆ ಕೈಪಿಡಿ ಬಿಡುಗಡೆ ಮಾಡಿ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ರಾಜ್ಯದ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ 44 ಸಾವಿರ ಎಕರೆ ವಿಸ್ತೀರ್ಣದ 18 ಕೈಗಾರಿಕಾ ಪ್ರದೇಶಗಳನ್ನು ವಿಶೇಷ ಬಂಡವಾಳ ಹೂಡಿಕೆ ಪ್ರದೇಶಗಳಾಗಿ ಘೋಷಿಸಲಾಗಿದೆ. ಹೊಸ ವ್ಯವಸ್ಥೆ ಮೂಲಕ ಕೈಗಾರಿಕಾ ಪ್ರದೇಶದಲ್ಲಿನ ಕೈಗಾರಿಕೆಗಳಿಂದ ಕೆಐಎಡಿಬಿಯೇ ಆಸ್ತಿ ತೆರಿಗೆ ಸಂಗ್ರಹಿಸಲಿದೆ. ಹೀಗೆ ಸಂಗ್ರಹವಾಗುವ ಶೇ.70ರಷ್ಟು ಹಣವನ್ನು ಸ್ಥಳೀಯ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಮೀಸಲಿಡಲಾಗುವುದು. ಉಳಿದ ಶೇ.30ರಷ್ಟು ಹಣವನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಲಾಗುವುದು ಎಂದು ವಿವರಿಸಿದರು.
6.57 ಲಕ್ಷ ಕೋಟಿ ಬಂಡವಾಳ ಆಕರ್ಷಣೆ
ಕಳೆದೆರಡು ವರ್ಷಗಳಲ್ಲಿ ರಾಜ್ಯದಲ್ಲಿ 6.57 ಲಕ್ಷ ಕೋಟಿ ರು. ಬಂಡವಾಳ ಹೂಡಿಕೆಗೆ 115 ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಆ ಮೂಲಕ 2.32 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಅದರೊಂದಿಗೆ 2025-30ರ ಕೈಗಾರಿಕಾ ನೀತಿಯಂತೆ 5 ವರ್ಷಗಳಲ್ಲಿ 7.50 ಲಕ್ಷ ಕೋಟಿ ರು. ಹೂಡಿಕೆ ಮತ್ತು 20 ಲಕ್ಷ ಉದ್ಯೋಗ ಸೃಷ್ಟಿ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಫಾರ್ಮಾ ಪಾರ್ಕ್, ವಿಜಯಪುರದಲ್ಲಿ ಸೋಲಾರ್ ಸೆಲ್‌ಪಾರ್ಕ್, ಚಿತ್ರದುರ್ಗದಲ್ಲಿ ಡ್ರೋನ್ ಪಾರ್ಕ್, ಡಾಬಸ್‌ಪೇಟೆ ಸಮೀಪದ ಹನುಮಾಪುರದಲ್ಲಿ ಮೆಗಾ ಲಾಜಿಸ್ಟಿಕ್ಸ್ ಪಾರ್ಕ್, ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆಯಲ್ಲಿ ಡೀಪ್‌ಟೆಕ್ ಪಾರ್ಕ್, ಹುಬ್ಬಳ್ಳಿಯಲ್ಲಿ 200 ಎಕರೆ ಪ್ರದೇಶದಲ್ಲಿ ಸ್ಟಾರ್ಟ್‌ಅಪ್ ಪಾರ್ಕ್ ಸ್ಥಾಪಿಸಲಾಗುತ್ತಿದೆ. ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದುವ ಉದ್ದೇಶದೊಂದಿಗೆ ಹಾಗೂ 2 ಮತ್ತು 3ನೇ ಹಂತದ ನಗರಗಳಲ್ಲಿ ಬಂಡವಾಳ ಹೂಡಿಕೆ ಆಕರ್ಷಣೆಗೆ ಹಲವು ಉಪಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಎಂಎಸ್‌ಐಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಮನೋಜ್‌ಕುಮಾರ್, ಕೆಐಎಡಿಬಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಮಹೇಶ್, ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಶಾಂತ್ ಇದ್ದರು.
ಬಲ್ದೋಟಾದಿಂದ ಸಮಸ್ಯೆಯಾದರೆ ಪರ್ಯಾಯ ಕ್ರಮ
ಕೊಪ್ಪಳದಲ್ಲಿ ಬಲ್ದೋಟಾ ಸಂಸ್ಥೆ ಘಟಕ ಸ್ಥಾಪನೆಗೆ ಸಂಬಂಧಿಸಿ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. 54 ಸಾವಿರ ಕೋಟಿ ರು. ವೆಚ್ಚದಲ್ಲಿ ಬಲ್ದೋಡಾ ಉಕ್ಕಿನ ಘಟಕ ಸ್ಥಾಪನೆಗೆ ಕೇಂದ್ರ ಅರಣ್ಯ ಸಚಿವಾಲಯವೂ ಅನುಮತಿಸಿದೆ. ಆದರೆ, ಅದರಿಂದ ಕೊಪ್ಪಳದ ಪರಿಸರ ಹಾನಿಯಾಗುತ್ತಿದೆ ಎಂದು ಗವಿ ಮಠದ ಸ್ವಾಮೀಜಿ ಹಾಗೂ ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಸ್ವಾಮೀಜಿ ಮತ್ತು ಮುಖಂಡರೊಂದಿಗೆ ಮಾತನಾಡಿದ್ದೇನೆ. ಆದರೂ, ಕೊಪ್ಪಳಕ್ಕೆ ಭೇಟಿ ನೀಡಿ ಮತ್ತೊಮ್ಮೆ ಮಾತುಕತೆ ನಡೆಸುತ್ತೇವೆ. ಒಂದು ವೇಳೆ ಬಲ್ದೋಟಾ ಘಟಕ ಸ್ಥಾಪನೆಯಿಂದ ಸಮಸ್ಯೆಯಾಗುವುದಾದರೆ ಪರ್ಯಾಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
2 ವರ್ಷಗಳಲ್ಲಿ ಪ್ರಮುಖ ಹೂಡಿಕೆ:
* ಫಾಕ್ಸ್‌ಕಾನ್ 22 ಸಾವಿರ ಕೋಟಿ ರು, ಎಪ್ಸಿಲಾನ್ ಗ್ರೂಪ್ 15,350 ಕೋಟಿ ರು., ಜಿಂದಾಲ್ ಎನರ್ಜಿ 4,960 ಕೋಟಿ ರು., ಎನ್‌ಎಕ್ಸ್‌ಪಿ ಸೆಮಿಕಂಡಕ್ಟರ್ 1 ಶತಕೋಟಿ ಡಾಲರ್, ಟೊಯೋಟಾ ಕಿರ್ಲೋಸ್ಕರ್ ಮತ್ತು ಸಂವರ್ಧನ ಮದರ್ಸನ್ ಕಂಪನಿ ತಲಾ 3,700 ಕೋಟಿ ರು., ಎಂವಿ ಎನರ್ಜಿ 5 ಸಾವಿರ ಕೋಟಿ ರು., ಸನ್ಸೆರಾ ಕಂಪನಿ 2,150 ಕೋಟಿ ರು.
ಎನ್‌ಜಿಇಎಫ್ ಮರು ಕಾರ್ಯಾರಂಭಕ್ಕೆ ಚಿಂತನೆ
ಬೆಂಗಳೂರಿನ ನ್ಯೂ ಗವರ್ನ್‌ಮೆಂಟ್ ಎಲೆಕ್ಟ್ರಿಕಲ್ ಫ್ಯಾಕ್ಟರಿ (ಎನ್‌ಜಿಇಎಫ್) ಮರು ಕಾರ್ಯಾರಂಭದ ಕುರಿತು ಚರ್ಚೆಗಳನ್ನು ನಡೆಸಲಾಗುತ್ತಿದೆ. ಅದಕ್ಕಾಗಿ ಅಲ್ಲಿನ ಕಟ್ಟಡ ಮತ್ತು ಎಂಜಿನ್‌ಗಳ ಪರಿಶೀಲನೆ ಮಾಡಬೇಕಿದೆ. ಅಧ್ಯಯನ ನಂತರ ಮುಂದೆ ಏನು ಮಾಡಬಹುದು ಎಂಬ ಬಗ್ಗೆ ತೀರ್ಮಾನಿಸಲಾಗುವುದು ಎಂದು ಎಂ.ಬಿ.ಪಾಟೀಲ್ ಹೇಳಿದರು.