ಸಾರಾಂಶ
ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಬೀದರ್-ಬೆಂಗಳೂರು ವಿಮಾನ ಸೇವೆ ಪುನರಾರಂಭಿಸಲಾಗುತ್ತಿದ್ದು, ಸ್ಟಾರ್ ಏರ್ ವಿಮಾನಯಾನ ಸಂಸ್ಥೆ ಏ.15ರಿಂದ ಬೀದರ್-ಬೆಂಗಳೂರು ನಡುವೆ ವಿಮಾನಯಾನ ಸೇವೆ ಮತ್ತೆ ಆರಂಭಿಸಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರು : ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಬೀದರ್-ಬೆಂಗಳೂರು ವಿಮಾನ ಸೇವೆ ಪುನರಾರಂಭಿಸಲಾಗುತ್ತಿದ್ದು, ಸ್ಟಾರ್ ಏರ್ ವಿಮಾನಯಾನ ಸಂಸ್ಥೆ ಏ.15ರಿಂದ ಬೀದರ್-ಬೆಂಗಳೂರು ನಡುವೆ ವಿಮಾನಯಾನ ಸೇವೆ ಮತ್ತೆ ಆರಂಭಿಸಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ರಾಜ್ಯದ 2ನೇ ಹಂತದ ನಗರಗಳ ವಿಮಾನಯಾನ ಸೇವೆ ಮೇಲ್ದರ್ಜೆಗೇರಿಸುವ ಸಂಬಂಧ ಮಂಗಳವಾರ ಖನಿಜ ಭವನದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಮತ್ತು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ರಾಜ್ಯದ ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಬೇಕಾದ ಅಗತ್ಯವಿದ್ದು, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಈ ಎರಡೂ ವಿಮಾನ ನಿಲ್ದಾಣಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಾಗುವ ಅರ್ಹತೆಯಿದ್ದು, ಪ್ರಯಾಣಿಕರ ದಟ್ಟಣೆಯೂ ಹೆಚ್ಚಿದೆ. ಹೀಗಾಗಿ ಅವುಗಳನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿಸಲು ಕ್ರಮ ಕೈಗೊಳ್ಳುವಂತೆ ಅಂಕಿ-ಅಂಶ ಸಹಿತ ಕೇಂದ್ರಕ್ಕೆ ಪತ್ರ ಬರೆಯಲು ನಿರ್ಧರಿಸಲಾಯಿತು.
ಇದೇ ವೇಳೆ ಕಲಬುರಗಿ, ಮೈಸೂರು, ಬೀದರ್ ಸೇರಿ ಇನ್ನಿತರ ವಿಮಾನನಿಲ್ದಾಣಗಳಿಂದ ವಿಮಾನ ಸೇವೆ ಹೆಚ್ಚಿಸಬೇಕು. ಈ ವಿಮಾನನಿಲ್ದಾಣಗಳನ್ನು ವಿಮಾನ ನಿರ್ವಹಣೆ ಮತ್ತು ದುರಸ್ತಿ (ಎಂಆರ್‌ಒ) ಕೇಂದ್ರಗಳಾಗಿಯೂ ಬಳಸಬಹುದು. ಈ ಕುರಿತು ಸೂಕ್ತ ಯೋಜನೆ ರೂಪಿಸುವಂತೆ ಸಚಿವರಿಬ್ಬರು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಇಂಡಿಗೋ, ಏರ್ ಇಂಡಿಯಾ ಸೇರಿ ವಿವಿಧ ವಿಮಾನಯಾನ ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸಿದ್ದರು. ಮೂಲಸೌಕರ್ಯ ಇಲಾಖೆ ಕಾರ್ಯದರ್ಶಿ ಎನ್.ಮಂಜುಳಾ, ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬು ಗೋಯಲ್ ಇತರರಿದ್ದರು.