ಸಾರಾಂಶ
ಕೊಟ್ಟೂರು: ಎನ್‌ಡಿಎ ಸರ್ಕಾರ 2014ರಲ್ಲಿ ಆಡಳಿತದಲ್ಲಿದ್ದರೂ ಜಾತಿ ಮತ್ತು ಜನಗಣತಿ ಮಾಡಿರಲಿಲ್ಲ. ಇದೀಗ ನಮ್ಮ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಒತ್ತಾಯಕ್ಕೆ ಮಣಿದು ಕೇಂದ್ರ ಸರ್ಕಾರ ಗಣತಿಗೆ ನಿರ್ಧರಿಸಿದೆ ಎಂದು ಬೃಹತ್ ಮತ್ತು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ತಾಲೂಕಿನ ಉಜ್ಜಯಿನಿಯಲ್ಲಿ ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಂಡು ಆನಂತರ ಸುದ್ದಿಗಾರರೊಂದಿಗೆ ಅವರು ಶುಕ್ರವಾರ ಮಾತನಾಡಿದರು.ಕೇಂದ್ರ ಸರ್ಕಾರ ಘೋಷಿಸಿರುವ ಜಾತಿಗಣತಿಗೆ ನಮ್ಮ ಸ್ವಾಗತವಿದೆ. ಆದರೆ ಅದು ಮೇಲ್ನೋಟಕ್ಕೆ ಬಿಹಾರ ಚುನಾವಣೆ ದೃಷ್ಟಿಯಲ್ಲಿರಿಸಿಕೊಂಡು ಮತ್ತು ಸ್ವಾರ್ಥಕ್ಕಾಗಿ ಎಂಬುದು ಗೊತ್ತಾಗುತ್ತದೆ. ಜಾತಿ ಮತ್ತು ಜನಗಣತಿ ಕಾರ್ಯವನ್ನು ವಿಳಂಬ ಮಾಡದೇ ಆರು ತಿಂಗಳಿಂದ ವರ್ಷದೊಳಗೆ ಪೂರ್ಣಗೊಳಿಸಬೇಕು ಎಂದರು.
ರಾಜ್ಯ ಸರ್ಕಾರದ ಜಾತಿಗಣತಿ ಜಾರಿಯಲ್ಲಿ ಇರುವ ಎಲ್ಲ ಮಠಾಧೀಶರ, ಸಮಾಜದವರ ಗೊಂದಲವನ್ನು ಪರಿಹರಿಸದ ನಂತರವೇ ಜಾರಿ ಮಾಡಲಾಗುವುದು. ಈ ಕುರಿತು ವೀರಶೈವ ಸಚಿವರೆಲ್ಲ ಸಭೆ ಮಾಡಿದ್ದೇವೆ. ಮೇ 9ರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಅಭಿಪ್ರಾಯ ತಿಳಿಸಲಾಗುವುದು. ಜಾತಿ ಗಣತಿ ಜಾರಿಯಿಂದ ಯಾವುದೇ ಸಮಾಜಕ್ಕೆ ಅನ್ಯಾಯವಾಗುವುದಿಲ್ಲ ಎಂದು ಹೇಳಿದರು.ಪಹಲ್ಗಾಮ್‌ನಲ್ಲಿ ಹಿಂದೂಗಳ ಮೇಲೆ ನಡೆದ ನರಮೇಧ ಖಂಡನೀಯ. ಈಗಾಗಲೇ ನಮ್ಮ ಕಾಂಗ್ರೆಸ್ ಭಯೋತ್ಪಾದಕರನ್ನು ಮಟ್ಟಹಾಕಲು ಕೇಂದ್ರ ಸರ್ಕಾರ ಕೈಗೊಳ್ಳುವ ಕಾರ್ಯಗಳಿಗೆ ಸಂಪೂರ್ಣ ಬೆಂಬಲ ನೀಡಿದೆ. ಭಯೋತ್ಪಾದನೆ ಮತ್ತು ಅದನ್ನು ಪೋಷಿಸುವವರ ವಿರುದ್ಧ ಕಠಿಣ ಕ್ರಮಗಳು ಅಗತ್ಯವಿದೆ. ಇದರಲ್ಲಿ ನಮ್ಮ ಕಾಂಗ್ರೆಸ್‌ನಿಂದ ಯಾವುದೇ ಗೊಂದಲವಿಲ್ಲ. ಕೇಂದ್ರಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ನಮ್ಮ ನಾಯಕರು ಘೋಷಿಸಿದ್ದಾರೆ. ಇದಕ್ಕಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾಕಿಸ್ತಾನ ವಿರುದ್ಧ ಕೈಗೊಂಡಿದ್ದ ಯುದ್ಧದ ರೀತಿಯಲ್ಲಿ ಈಗಿನ ಪ್ರಧಾನಿ ನರೇಂದ್ರ ಮೋದಿ ನಡೆಸಬೇಕು. ಇದೇ ಸಂದರ್ಭದಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ವಶಪಡಿಸಿಕೊಳ್ಳುವುದು ಮುಖ್ಯವಾಗಿದೆ ಹಾಗೂ ಸರಿಯಾದ ಸಮಯವೂ ಆಗಿದೆ ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆ ಇಲ್ಲ. ಈ ವಿಚಾರವೂ ನಮ್ಮಲ್ಲಿ ಇಲ್ಲ. ಪೂರ್ಣಾವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದರು. ಬದಲಾವಣೆ ಸಾದ್ಯತೆಗಳಿದ್ದರೆ ನೀವು ಮುಖ್ಯಮಂತ್ರಿ ಆಕಾಂಕ್ಷಿಗಳೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಉಜ್ಜಯಿನಿ ಮರುಳಸಿದ್ಧೇಶ್ವರ ಕೃಪೆ ಇದ್ದರೆ ಆಗಲಿ ಎಂದಷ್ಟೆ ಹೇಳಿದರು.ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ, ಜಗಳೂರು ಶಾಸಕ ದೇವೇಂದ್ರಪ್ಪ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ. ದಾರುಕೇಶ, ಕಾಂಗ್ರೆಸ್ ಮುಖಂಡರಾದ ಎಂ. ಗುರುಸಿದ್ದನಗೌಡ, ಗುಳಿಗೆ ಮಲ್ಲಿಕಾರ್ಜುನ, ಮಹಾಂತೇಶ ಇತರರು ಇದ್ದರು.