ನರಗುಂದ: ಜನಪದ ಈ ನೆಲದ ಸಂಸ್ಕೃತಿಯ ಪ್ರತೀಕ. ಭಾರತೀಯ ಸಂಸ್ಕೃತಿ ಜನಪದ ಸಾಹಿತ್ಯದಲ್ಲಿ ವಿಪುಲವಾಗಿ ಕಾಣ ಸಿಗುತ್ತದೆ. ಸಾಂಪ್ರದಾಯಿಕ ಜ್ಞಾನ, ಬದುಕು ಹಾಗೂ ಸಂಬಂಧ ಕಟ್ಟಲು ಜನಪದ ಸಾಹಿತ್ಯ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಶಾಂತಲಿಂಗ ಶ್ರೀಗಳು ಹೇಳಿದರು.
ಒಂದು ವೈಶಿಷ್ಠ್ಯಪೂರ್ಣ ಜನಪದ ಸಂಸ್ಕೃತಿ ದೇಶಾದ್ಯಂತ ತಮ್ಮ ಕಲೆಯ ಮೂಲಕ ಉಳಿಸಿ ಬೆಳೆಸುತ್ತಿರುವ ಜೈ ಕಿಸಾನ್ ಕಲಾ ತಂಡದ ಜನಪದ ಸೇವೆ ಅಪಾರವಾದುದು. ಅವರು ಇತ್ತೀಚೆಗೆ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಅಲ್ಲಿ ಬಂಡಾಯ ನೆಲದ ಸಂಸ್ಕೃತಿ ಪಸರಿಸಿದ ಕಲಾತಂಡದ ಎಲ್ಲ ಕಲಾವಿದರನ್ನು ಅಭಿನಂದಿಸಿದರು.
ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಚೆನ್ನಪ್ಪ ಕಂಠಿ ಮಾತನಾಡಿ, ಜನಪದ ಉಳಿದರೆ ಮಾತ್ರ ಮಕ್ಕಳಲ್ಲಿ ಮಾನವೀಯ ಮೌಲ್ಯ ಬಿತ್ತಲು ಸಾಧ್ಯ. ನಾವು ಮಕ್ಕಳನ್ನು ರ್‍ಯಾಂಕ್ ಗಾಗಿ ಓದಿಸುವ ಭರದಲ್ಲಿ ಅವರಿಗೆ ಬದುಕಲು ಬೇಕಾಗಿರುವಂತಹ ಮೌಲ್ಯ ಶಿಕ್ಷಣ ನೀಡುವಲ್ಲಿ ಎಡವುತ್ತಿದ್ದೇವೆ ಹೀಗಾಗಿ ಮಕ್ಕಳಲ್ಲಿ ನೈತಿಕ ಶಿಕ್ಷಣ ನೀಡುವ ಅನಿವಾರ್ಯತೆ ನಮ್ಮೆಲ್ಲರಿಗೂ ಇದೆ ಹೇಳಿದರು.ಈ ಸಂದರ್ಭದಲ್ಲಿ ಜೈಕಿಸಾನ್ ಕಲಾ ತಂಡದ ಕಲಾವಿದರನ್ನು ಶ್ರೀಮಠದಿಂದ ಸತ್ಕರಿಸಲಾಯಿತು. ಔಷದ ವ್ಯಾಪಾರಸ್ಥ ಮಹಾಂತೇಶ ಸಾಲಿಮಠ ಪ್ರಾಸ್ತಾವಿಕ ಮಾತನಾಡಿದರು.
ನೀಲಗುಂದದ ಮಂಜುನಾಥ ಶರಣರು, ಡಾ. ವೈ.ಎಂ. ಯಾಕೊಳ್ಳಿ, ಪಿ.ಸಿ. ಕಲಹಾಳ, ನ್ಯಾಯವಾದಿ ಶಿವಕುಮಾರ ಶೆಲ್ಲಿಕೇರಿ, ಸುವರ್ಣ ಶೆಲ್ಲಿಕೇರಿ, ರಮೇಶ ಅಣ್ಣಿಗೇರಿ, ಪ್ರಕಾಶ ಅಣ್ಣಿಗೇರಿ, ಭೀಮಸೇನ್ ಪವಾರ, ಬಿ.ಎಂ. ಗೊಜನೂರ, ವೀರಭದ್ರಪ್ಪ ಅಣ್ಣಿಗೇರಿ, ಪತ್ರಕರ್ತ ರೇವಣಸಿದ್ದಯ್ಯ ಹಿರೇಮಠ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.ರಮೇಶ ಐನಾಪೂರ ನಿರೂಪಿಸಿದರು. ಮಹಾಂತೇಶ ಹಿರೇಮಠ ಸ್ವಾಗತಿಸಿ ವಂದಿಸಿದರು.