ಹೊನ್ನಾವರ: ತಾಲೂಕಿನ ಎಸ್.ಡಿಎಂ ಕಾಲೇಜಿನ ನಿವೃತ್ತ ಪ್ರಾಚಾರ್ಯ, ಜನಪದ ವಿದ್ವಾಂಸ, ಸಾಹಿತಿ, ವಿಚಾರವಾದಿ ಡಾ.ಎನ್.ಆರ್. ನಾಯಕ (೯೧) ನಿಧನರಾದರು.
ಅವರ ಮರಣಾನಂತರ ತಮ್ಮ ಕಣ್ಣನ್ನು ದಾನ ಮಾಡಿದ್ದು, ಕುಮಟಾದ ರೇವಣಕರ್ ಕಣ್ಣಿನ ಆಸ್ಪತ್ರೆಗೆ ತಮ್ಮ ಕಣ್ಣನ್ನು ನೀಡಿದ್ದಾರೆ. ಇವರ ಮಡದಿ ಡಾ.ಶಾಂತಿ ನಾಯಕ್ ಅಸುನೀಗಿದ ಸರಿಯಾಗಿ ಒಂದು ತಿಂಗಳಿಗೆ ಡಾ.ಎನ್.ಆರ್.ನಾಯಕ ನಿಧನರಾದರು.
ಡಾ.ಎನ್.ಆರ್. ನಾಯಕ ಉತ್ತರಕನ್ನಡದ ಅಂಕೋಲಾ ತಾಲೂಕಿನ ಭಾವಿಕೇರಿಯಲ್ಲಿ ೨೮-೬-೧೯೩೫ರಲ್ಲಿ ಜನಿಸಿದ್ದ ಇವರು ಜಿಲ್ಲೆಯ ಜನಜೀವನದ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದರು. ಕಳೆದ ೪೫ ವರ್ಷಕ್ಕೂ ಅಧಿಕ ಕಾಲದಿಂದ ಜನಪದ ಕ್ಷೇತ್ರದಲ್ಲಿ ದುಡಿದಿದ್ದ ವಿದ್ವಾಂಸರಾಗಿದ್ದರು. ಉತ್ತರಕನ್ನಡ ಜಿಲ್ಲೆಯ ಹಾಲಕ್ಕಿ, ಗ್ರಾಮ ಒಕ್ಕಲು, ಸಿದ್ದಿ ಜನಾಂಗದ ಬಗ್ಗೆ ಅಧ್ಯಯನ ನಡೆಸಿ ಅವರ ಬಗ್ಗೆ ಪುಸ್ತಕಗಳನ್ನು ಬರೆದಿದ್ದರು. ಜಾನಪದ ಕಲೆಗಳು ಮತ್ತು ಆಟಗಳಿಂದ ಹಿಡಿದು ಆಚರಣೆಗಳು ಮತ್ತು ಔಷಧೀಯ ಸಸ್ಯಗಳವರೆಗೆ ಕನ್ನಡದಲ್ಲಿ 80ಕ್ಕೂ ಹೆಚ್ಚು ಪುಸ್ತಕಗಳನ್ನು ಅವರು ಬರೆದಿದ್ದಾರೆ ಅಥವಾ ಸಹ-ಲೇಖಕರಾಗಿದ್ದಾರೆ. ಅವರ ಅನೇಕ ಪುಸ್ತಕಗಳನ್ನು ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಕುವೆಂಪು ವಿಶ್ವವಿದ್ಯಾಲಯದಲ್ಲಿ ಪಠ್ಯಪುಸ್ತಕಗಳಾಗಿ ಹೊರಹೊಮ್ಮಿದೆ. ಕಥೆ, ಸಂಶೋಧನಾ ಗ್ರಂಥ , ಅನುಭವ ಗ್ರಂಥ , ಜಾನಪದ ಸಂಶೋಧನೆ ಮುಂತಾದ ಬರಹಗಳನ್ನು ಬರೆದಿದ್ದಾರೆ.ಕರ್ನಾಟಕ ರಾಜ್ಯೋತ್ಸವ, ಗೌರೀಶ ಕಾಯ್ಕಿಣಿ ಪ್ರತಿಷ್ಠಾನ ಪ್ರಶಸ್ತಿ, ಜಾನಪದ ವಿಶೇಷ ಪ್ರಶಸ್ತಿ, ಗೊರೂಚ ಜಾನಪದ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗೆ ಭಾಜನರಾಗಿದ್ದರು.
ಎನ್.ಆರ್.ನಾಯಕ್ ಇಚ್ಛೆಯಂತೆ ಅಂತ್ಯಸಂಸ್ಕಾರ ಸೋಮವಾರ ಬೆಳಿಗ್ಗೆ 10.30ಕ್ಕೆ ಹೊನ್ನಾವರದ ಮುಕ್ತಿಧಾಮದಲ್ಲಿ ನೆರವೇರಿಸಲಾಗುವುದು. ಹೊನ್ನಾವರದ ಸ್ವಗೃಹ ಸುಹಾಸದಲ್ಲಿ ಮುಂಜಾನೆ 10 ಗಂಟೆವರೆಗೆ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದೆ.