ಸುಖ, ಶಾಂತಿ ನೆಲೆಸಲು ಧರ್ಮ ಅನುಸರಿಸಿ: ಬ್ರಹ್ಮಾನಂದ ಸರಸ್ವತಿ ಶ್ರೀ

KannadaprabhaNewsNetwork | Published : May 4, 2025 1:32 AM

ನಮ್ಮ ಆಚಾರ ವಿಚಾರ ಪರಂಪರೆಯನ್ನು ಉಳಿಸಿಕೊಳ್ಳಬೇಕು.

ಭಟ್ಕಳ: ತಾಲೂಕಿನ ಮಾವಿನಕುರ್ವೆಯ ತಲಗೋಡಿನ ದುರ್ಗಾಪರಮೇಶ್ವರಿ ದೇವಸ್ಥಾನದ ನೂತನ ಗರ್ಭಗುಡಿಯ ಶಿಲಾನ್ಯಾಸವನ್ನು ಉಜಿರೆಯ ಕನ್ಯಾಡಿಯ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ನೆರವೇರಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ನಮ್ಮ ಆಚಾರ ವಿಚಾರ ಪರಂಪರೆಯನ್ನು ಉಳಿಸಿಕೊಳ್ಳಬೇಕು. ಸಮಾಜದಲ್ಲಿ ಸುಖ, ಶಾಂತಿ ನೆಲೆಸಬೇಕಾದರೆ ಧರ್ಮವನ್ನು ಅನುಸರಿಸುವುದು ಅಗತ್ಯ. ಋಷಿಮುನಿಗಳು ಸಮಾಜದಲ್ಲಿ ಸುಖ, ನೆಮ್ಮದಿ ಕಾಣಬೇಕೆಂಬ ಆಶಯವನ್ನಿಟ್ಟುಕೊಂಡು ಹಿಂದೆ ಅನೇಕ ದೇವಸ್ಥಾನಗಳನ್ನು ನಿರ್ಮಿಸಿ ಧರ್ಮವನ್ನು ಉಳಿಸುವ ಕೆಲಸ ಮಾಡಿದ್ದಾರೆ. ಆಧ್ಯಾತ್ಮಿಕತೆ, ಧಾರ್ಮಿಕತೆಯನ್ನು ಮೈಗೂಡಿಸಿಕೊಳ್ಳಲು ಸಮಾಜದಲ್ಲಿ ದೇವಾಲಯವನ್ನು ನಿರ್ಮಿಸಬೇಕಾಗಿದೆ. ಭಗವಂತನಲ್ಲಿ ನಾವೆಲ್ಲರೂ ಪೂರ್ತಿ ಶರಣಾದರೆ ದೇವಾಲಯಗಳೂ ತನ್ನಿಂದ ತಾನೆ ನಿರ್ಮಾಣಗೊಳ್ಳುತ್ತದೆ ಎಂದರು.ಭಕ್ತರಿಂದಲೇ ಭಗವಂತನು ತನ್ನ ಸನ್ನಿಧಾನವನ್ನು ನಿರ್ಮಿಸಿಕೊಳ್ಳುತ್ತಾನೆ. ಇಂತಹ ಪುಣ್ಯ ಕಾರ್ಯಕ್ಕೆ ಕಾಲ ಕೂಡಿ ಬರಬೇಕು ಎಂದ ಶ್ರೀಗಳು, ತಲಗೋಡಿನ ಈ ಪುಣ್ಯ ಕ್ಷೇತ್ರದಲ್ಲಿ ದುರ್ಗಾಪರಮೇಶ್ವರಿಯು ನೆಲೆ ನಿಂತು ಭಕ್ತರಿಂದಲೇ ತನ್ನ ಕಾರ್ಯಗಳನ್ನು ಮಾಡಿಕೊಳ್ಳುತ್ತಾಳೆ ಎಂಬ ನಂಬಿಕೆ ಇದೆ. ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಈ ಭಾಗದದಲ್ಲಿ ನಾನು ಹಲವಾರು ಬಾರಿ ಬಂದಿದ್ದು, ಇಲ್ಲಿನ ಶಕ್ತಿ ದೇವತೆಯ ಆಶೀರ್ವಾದದಿಂದ ನನಗೆ ರಾಜಕೀಯವಾಗಿ ಏಳಿಗೆ ಕಂಡಿದ್ದೇನೆ. ಈ ದೇವಸ್ಥಾನದ ನಿರ್ಮಾಣ ಅತಿ ಶೀಘ್ರದಲ್ಲಿ ಆಗುತ್ತದೆ ಎಂಬ ನಂಬಿಕೆ ಇದೆ. ಇದಕ್ಕೆ ಸರ್ಕಾರದಿಂದ ಮತ್ತು ವೈಯಕ್ತಿಕವಾಗಿ ಸಹಕಾರ ಮಾಡುವುದಾಗಿ ಹೇಳಿದರು.

ಮಾಜಿ ಶಾಸಕ ಸುನೀಲ್ ನಾಯ್ಕ ಮಾತನಾಡಿ, ಈ ಕ್ಷೇತ್ರದ ದೇವಿಯ ಶಕ್ತಿಯು ಅಪಾರವಾದದ್ದು. ಈ ಪುಣ್ಯ ಕ್ಷೇತ್ರವನ್ನು ಅಬಿವೃದ್ಧಿ ಮಾಡಬೇಕೆಂದು ಈ ಭಾಗದ ಹಿರಿಯರು ಹಲವು ವರ್ಷಗಳ ಹಿಂದೆಯೇ ಚಿಂತನೆ ನಡೆಸಿದ್ದರು. ಅದಕ್ಕೆ ಈಗ ಕಾಲ ಕೂಡಿಬಂದಿದೆ. ಸಚಿವರು ಈ ದೇವಸ್ಥಾನಕ್ಕೆ ಹೆಚ್ಚಿನ ಸಹಾಯ ಸರ್ಕಾರದಿಂದ ಒದಗಿಸಿಕೊಡಬೇಕು ಎಂದರು. ಅಲ್ಲದೇ ದೇವಸ್ಥಾನದ ಜೀರ್ಣೋದ್ಧಾರಕ್ಕೆ ವೈಯಕ್ತಿಕವಾಗಿ ₹5 ಲಕ್ಷ ನೀಡುವುದಾಗಿ ಭರವಸೆ ನೀಡಿದರು.

ದೇವಸ್ಥಾನದ ಅಭಿವೃದ್ದಿ ಸಮಿತಿಯ ಟ್ರಸ್ಟಿಗಳಾದ ತಿಮ್ಮಯ್ಯ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖರಾದ ವಿಠ್ಠಲ್ ನಾಯ್ಕ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕರಿಯಪ್ಪ ನಾಯ್ಕ ವಹಿಸಿದ್ದರು. ವೇದಿಕೆಯಲ್ಲಿ ದೇವಸ್ಥಾನಕ್ಕೆ ಜಾಗ ನೀಡಿದ ಕುಟುಂಬದವರನ್ನು, ಅರ್ಚಕರನ್ನು ಹಾಗೂ ಶಿಲ್ಪಿಗಳನ್ನು ತಾಂಬೂಲ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಶ್ರೀಗಳಿಗೆ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಪಾದಪೂಜೆ ನೆರವೇರಿಸಲಾಯಿತು. ಕೆ.ಆರ್.ನಾಯ್ಕ ವಂದಿಸಿದರು.

ಭಟ್ಕಳದ ತಲಗೋಡಿನ ದುರ್ಗಾಪರಮೇಶ್ವರಿ ದೇವಸ್ಥಾನದ ನೂತನ ಗರ್ಭಗುಡಿ ಶಿಲಾನ್ಯಾಸ ನೆರವೇರಿಸಿ ಸಭಾ ಕಾರ್ಯಕ್ರಮವನ್ನು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು.