ತಿಪಟೂರು: ವಾಹನ ಚಾಲನೆ ಮಾಡುವಾಗ ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಲ್ಲದೆ ಅತಿವೇಗದ ಚಾಲನೆ ಅಪಾಯಕ್ಕೆ ಕಾರಣವಾಗಲಿದೆ. ರಸ್ತೆ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಅಪಘಾತಗಳನ್ನು ತಪ್ಪಿಸಬೇಕೆಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಅಧೀಕ್ಷಕ ಚೇತನ್ ತಿಳಿಸಿದರು.
ಹದಿನೆಂಟು ವರ್ಷ ತುಂಬಿದ ನಂತರ ವಾಹನ ಪರವಾನಗಿ ಪಡೆದು ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಓಡಿಸುವುದರಿಂದ ಅಮೂಲ್ಯವಾದ ಜೀವವನ್ನು ಉಳಿಸಬಹುದು. ಸಂಚಾರಿ ನಿಯಮ ಪಾಲನೆ ಮಾಡಿದರೆ ರಸ್ತೆ ಸುರಕ್ಷತೆಯನ್ನು ಅನುಸರಿಸಿದಂತೆ. ದೇಶದ ಆಸ್ತಿಯಾಗಿರುವ ನೀವು ಕಾನೂನುಗಳ ವಿರುದ್ದವಾಗಿ ನಡೆಯಬೇಡಿ. ಒಂದು ದ್ವಿಚಕ್ರ ವಾಹನದಲ್ಲಿ ೩-೪ಜನರು ಕಾನೂನು ಬಾಹಿರವಾಗಿ ಓಡಾಡುತ್ತಿದ್ದು ಈ ಸಂದರ್ಭದಲ್ಲಿ ರಸ್ತೆ ಗುಂಡಿ ಅಥವಾ ಡಿವೈಡರ್‌ಗೆ ಡಿಕ್ಕಿ ಹೊಡೆದರೆ ಎಲ್ಲರೂ ಒಟ್ಟಿಗೆ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ರಸ್ತೆ ಸುರಕ್ಷಿತ ಚಾಲನೆ ಮಾಡುವ ಬಗ್ಗೆ ಅರಿವು ಮೂಡಿಸಲಾಗುತ್ತಿದ್ದು ಬೇರೆಯವರಿಗೆ ಜಾಗೃತಿ ಮೂಡಿಸಬೇಕೆಂದರು.
ಪ್ರಾಂಶುಪಾಲ ಎಂ.ಡಿ. ಶಿವಕುಮಾರ್ ಮಾತನಾಡಿ, ಅತಿ ವೇಗ ಹಾಗೂ ಅಜಾಗರೂಕ ಚಾಲನೆಯಿಂದ ರಸ್ತೆ ಅಪಘಾತಗಳಾಗುತ್ತಿದು ಅಪಾರವಾದ ಸಾವು ನೋವಿಗೆ ಕಾರಣವಾಗಿದೆ. ಯುವ ಸಮೂಹ ರಸ್ತೆ ಸುರಕ್ಷತಾ ನಿಯಮಗಳನ್ನು ಅನುಸರಿಸುವುದರಿಂದ ಸಾಧ್ಯವಾದಷ್ಟು ರಸ್ತೆ ಅಪಘಾತಗಳನ್ನು ತಡೆಗಟ್ಟಬಹುದು ಎಂದರು.ಈ ಸಂದರ್ಭದಲ್ಲಿ ರಸ್ತೆ ಸುರಕ್ಷತೆಯ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆಯ ಗುರುರಾಜ್, ಉಪನ್ಯಾಸಕರಾದ ಪ್ರಶಾಂತ್, ಷಡಕ್ಷರಪ್ಪ, ಸೋಮಶೇಖರ್, ದೀಪಕ್, ಲಿಖಿತ್ ಮತ್ತಿತರಿದ್ದರು.