ಬದುಕಿನಲ್ಲಿ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸಿ

KannadaprabhaNewsNetwork |  
Published : Jan 16, 2025, 12:48 AM IST
ಶೈಕ್ಷಣಿಕ ಪ್ರಗತಿ ಸಾಧಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ | Kannada Prabha

ಸಾರಾಂಶ

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಸಮಾಜದಲ್ಲಿ ಸಂಸ್ಕಾರ ‌ಮತ್ತು ನಾಗರಿಕತೆಯನ್ನು ಕಲಿಸಲು ಶಿಕ್ಷಕರೊಂದಿಗೆ ಪೋಷಕರು ಹೆಚ್ಚಿನ ಸಹಕಾರ ‌ನೀಡುವುದು ಅವಶ್ಯಕವಾಗಿದೆ ಎಂದು ಡಿವೈಎಸ್ ಪಿ ಕೆ.ಎನ್.ರಮೇಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಸಮಾಜದಲ್ಲಿ ಸಂಸ್ಕಾರ ‌ಮತ್ತು ನಾಗರಿಕತೆಯನ್ನು ಕಲಿಸಲು ಶಿಕ್ಷಕರೊಂದಿಗೆ ಪೋಷಕರು ಹೆಚ್ಚಿನ ಸಹಕಾರ ‌ನೀಡುವುದು ಅವಶ್ಯಕವಾಗಿದೆ ಎಂದು ಡಿವೈಎಸ್ ಪಿ ಕೆ.ಎನ್.ರಮೇಶ್ ತಿಳಿಸಿದರು.

ನಗರದ ಹೊರವಲಯದಲ್ಲಿರುವ ಲೀಡರ್ ಇಂಟರ್ ನ್ಯಾಷನಲ್ ಶಾಲೆಯ17ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಕಳೆದ 16 ವರ್ಷಗಳಿಂದ ಲೀಡರ್ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳ ಬದುಕಿಗೆ ಆಸರೆಯಾಗಿದೆ. ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣದಿಂದ ಮಾತ್ರ ಬದುಕನ್ನು ರೂಪಿಸಲು ಸಾಧ್ಯವಿಲ್ಲ. ಅದಕ್ಕೆ ಪೂರಕವಾಗಿ ಕಲೆ, ಸಾಹಿತ್ಯ, ನೃತ್ಯ, ಭಾಷೆ, ಸಂಸ್ಕೃತಿ, ಸಂಸ್ಕಾರ ಮತ್ತು ನಾಗರಿಕತೆ ಸೇರಿದಂತೆ ಎಲ್ಲವೂ ಅಗತ್ಯವಾಗಿವೆ. ಇವೆಲ್ಲವುಗಳನ್ನು ಒಳಗೊಂಡ ಗುಣಮಟ್ಟದ ಶಿಕ್ಷಣವನ್ನು ಈ ಸಂಸ್ಥೆ ಪಾರದರ್ಶಕವಾಗಿ ನೀಡುತ್ತಿದೆ. ಮಕ್ಕಳಲ್ಲಿನ ಪ್ರತಿಭೆಯ ಅನಾವರಣಕ್ಕೆ ಇಂತಹ ವಾರ್ಷಿಕೋತ್ಸವ ಸಂಭ್ರಮಾಚರಣೆಗಳು ಉತ್ತಮ ವೇದಿಕೆಗಳಾಗಿವೆ. ಪ್ರತಿ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯ ಸಾಧನೆಯೇ ಈ ಸಂಭ್ರಮಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

‌ವಿಶ್ವಕಂಡ ಶ್ರೇಷ್ಠ ಸಂತ, ಜ್ಞಾನಿ, ಸರಳ ವ್ಯಕ್ತಿತ್ವದ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಅರ್ಥಪೂರ್ಣವಾಗಿ ಶಾಲಾ ವಾರ್ಷಿಕೋತ್ಸವವನ್ನು ಆಚರಣೆ ಮಾಡುತ್ತಿರುವುದು ನಿಜಕ್ಕೂ ಅದ್ಭುತವಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ವಿವೇಕಾನಂದ, ಅಬ್ದುಲ್ ಕಲಾಂರಂತಹ ಸಾಧಕರ ಜೀವನ‌ ಚರಿತ್ರೆ ಬಗ್ಗೆ ತಿಳಿಸಿ, ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳುವಂತೆ ಮಾಡಬೇಕಿದೆ. ಶಾಲಾ ಶಿಕ್ಷಣದ ಜೊತೆಗೆ ಬದುಕು ಕಟ್ಟಿಕೊಳ್ಳುವ ಕಲೆಯನ್ನು ವಿದ್ಯಾರ್ಥಿಗಳಲ್ಲಿ ಕಲಿಸಿ ಬೆಳೆಸುವುದು ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಎಲ್.ಶಿವರಾಮರೆಡ್ಡಿ ಮಾತನಾಡಿ, ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಭವಿಷ್ಯದಲ್ಲಿ ಫಲ ನೀಡಲಿದೆ ಎಂಬಂತೆ ಲೀಡರ್ ಶಾಲೆಯ 17 ವರ್ಷಗಳ ಶೈಕ್ಷಣಿಕ ಪ್ರಗತಿಯು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಾಕ್ಷಿಯಾಗಿದೆ. ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ದೇಶದ ವಿವಿಧೆಡೆ ಪ್ರಜ್ವಲಿಸುತ್ತಿದ್ದಾರೆ. ಪೋಷಕರು ಮತ್ತು ಶಿಕ್ಷಕರು ಮಾನಸಿಕ ಸ್ಥಿರತೆಯನ್ನು ಹೊಂದಿದ್ದರೆ ಮಾತ್ರ ಮಕ್ಕಳ ಬದುಕು ಹಸನಾಗುತ್ತದೆ ಎಂದು ಹೇಳಿದರು.

ಶಾಲಾ ಆಡಳಿತ ಮಂಡಳಿಯ ಆಡಳಿತಾಧಿಕಾರಿ ಚಂದನ್ ಮಾತನಾಡಿ, ಶಿಕ್ಷಕರು ಮತ್ತು ಪೋಷಕರು ಶಾಲೆಯ ಮೇಲಿಟ್ಟಿರುವ ದೃಢ ವಿಶ್ವಾಸ ಮತ್ತು ನಂಬಿಕೆಯೇ 17 ವರ್ಷಗಳ ಶೈಕ್ಷಣಿಕ ಪ್ರಗತಿಗೆ ಕಾರಣವಾಗಿದೆ. ಶಾಲೆಯಲ್ಲಿನ ಪ್ರತಿ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯೇ ನಮ್ಮ ಸಂಸ್ಥೆಯ ಪ್ರಮುಖ ಧ್ಯೇಯವಾಗಿದೆ. ಪೋಷಕರ ಆಶಯದಂತೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ, ಪರೀಕ್ಷೆಗಳಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶ ಪಡೆಯಲು ಪಾರದರ್ಶಕವಾಗಿ ಶ್ರಮಿಸೋಣ ಎಂದು ಹೇಳಿದರು.

ಶಾಲಾ ವಾರ್ಷಿಕೋತ್ಸವ ಸಂಭ್ರಮದ ವೇದಿಕೆಯಲ್ಲಿ ಗಣ್ಯರು ಮತ್ತು ಶಾಲಾ ಆಡಳಿತ ಮಂಡಳಿಯ ನಿರ್ದೇಶಕರು ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಪ್ರಶಸ್ತಿ(ಎಕ್ಸೆಲೆನ್ಸಿ ಅವಾರ್ಡ್)ನೀಡಿ ಅಭಿನಂದಿಸಿದರು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಗೀತೆಗಳಿಗೆ ಅದ್ಭುತವಾಗಿ ನೃತ್ಯಪ್ರದರ್ಶನ ಮಾಡುವ ಮೂಲಕ ವಾರ್ಷಿಕೋತ್ಸವಕ್ಕೆ ಮೆರುಗು ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಡಿವೈಎಸ್ಪಿ ಕೆ.ಎನ್.ರಮೇಶ್ ರವರನ್ನು ಶಾಲಾ ಆಡಳಿತ ‌ಮಂಡಳಿಯ ನಿರ್ದೇಶಕರು ಆತ್ಮೀಯವಾಗಿ ಅಭಿನಂದಿಸಿ, ಗೌರವಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ಎನ್.ನರಸಿಂಹಮೂರ್ತಿ, ಟ್ರಸ್ಟಿ ಆಶಾರೆಡ್ಡಿ, ತೇಜಸ್ವಿನಿ, ರಕ್ಷಿತಾ ಸೇರಿದಂತೆ ಶಾಲಾ ಶಿಕ್ಷಕರು, ಸಿಬ್ಬಂದಿ ಮತ್ತು ಪೋಷಕರು ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ