ಕನ್ನಡಪ್ರಭ ವಾರ್ತೆ ಮಂಗಳೂರು
ಪ್ರಕೃತಿ ವಿಕೃತಿಯಾದಾಗ ಪ್ರಕೃತಿಯನ್ನು ರಕ್ಷಣೆ ಮಾಡಿದ್ದು ಕೃಷ್ಣ. ಹಾಗಾಗಿ ಕೃಷ್ಣ ಭಗವಾನ್‌ನನ್ನು ಬೇರೇಯೇ ರೀತಿ ಚಿತ್ರಿಸದೆ ಕೃಷ್ಣನ ಪ್ರಕೃತಿಪ್ರಿಯ ಕಾರ್ಯಗಳನ್ನು ಮೆಲುಕು ಹಾಕಿ ಅದೇ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಉಡುಪಿ ಭಂಡಾರಿಕೇರಿ ಮಠಾಧೀಶ ಶ್ರೀವಿದ್ಯೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ. ಮಂಗಳೂರಿನ ಕಾರಣಿಕ ಮುಖ್ಯಪ್ರಾಣ ದೇವಸ್ಥಾನದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯ ವ್ರತಾಚರಣೆ ಸಂದರ್ಭ ಮಂಗಳೂರಿನ ಒಂದು ಸಾವಿರ ಮನೆಗಳಿಗೆ ‘ಮನೆ ಮನೆ ಭಾಗವತ’ ಅಭಿಯಾನಕ್ಕೆ ಮಂಗಳವಾರ ಇಲ್ಲಿನ ಮಂಜುಪ್ರಾಸಾದ ಕಲ್ಕೂರ ನಿವಾಸದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಕಲಿಯುಗ ಎಂಬ ಸಮುದ್ರದಲ್ಲಿ ತಲೆದೋರುವ ವಿಪ್ಲವಗಳನ್ನು ದೂರ ಮಾಡಲು ಭಾಗವತ ಎಂಬ ನೌಕೆಯನ್ನು ಮುನ್ನಡೆಸುವ ನಾವಿಕರು ನಾವೆಲ್ಲ ಆಗಬೇಕು. ಗಾಳಿ, ನೀರು, ಕಾಡು, ಬೆಟ್ಟ, ಯಮುನಾ ನದಿಯೇ ಮೊದಲಾದ ಪ್ರಕೃತಿಯನ್ನು ರಕ್ಷಿಸಿ ಅದರ ಮಹತ್ವವನ್ನು ಜಗತ್ತಿಗೆ ಕೃಷ್ಣ ಸಾರಿದ್ದಾನೆ. ಕೃಷ್ಣನ ದಾರಿಯಲ್ಲಿ ಸಾಗಬೇಕಾದರೆ ಪ್ರಕೃತಿಯನ್ನು ಪೂಜಿಸುವ ಸಜ್ಜನರು ನಾವಾಗಬೇಕು ಎಂದರು.ಪ್ರತಿ ದಿನ 15 ಮನೆ ಭೇಟಿ: ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಪ್ರಾಸ್ತಾವಿಕದಲ್ಲಿ, ಕಳೆದ ಚಾತುರ್ಮಾಸ್ಯ ಅವಧಿಯಲ್ಲಿ ಉಡುಪಿಯಲ್ಲಿ ಭಂಡಾರಕೇರಿ ಮಠಾಧೀಶರು ಒಂದು ಸಾವಿರ ಮನೆಗಳಲ್ಲಿ ಭಾಗವತ ಪಾರಾಯಣ ನಡೆಸಿದ್ದರು. ಈ ಬಾರಿ ಮಂಗಳೂರಿನಲ್ಲಿ ಚಾತುರ್ಮಾಸ್ಯ ಅವಧಿಯಲ್ಲಿ ಪ್ರತಿ ದಿನ ತಲಾ 15 ಮನೆಯಂತೆ ಒಂದು ಸಾವಿರ ಮನೆಗಳಿಗೆ ತೆರಳಿ ಭಾಗವತ ಸಂದೇಶ ನೀಡಲಿದ್ದಾರೆ. ಮನೆಗೆ ಸ್ವಾಮೀಜಿ ಆಗಮಿಸಿದಾಗ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಬೇಕು. ಬಳಿಕ ಮನೆ ದೇವರಿಗೆ ನೈವೇದ್ಯ ನೆರವೇರಿಸಿ ಆರತಿ ಬೆಳಗಿ ಪ್ರವಚನ ನಡೆಸುತ್ತಾರೆ. ಇದು ಅಭಿಯಾನವಾಗಿ ಎಲ್ಲ ಮನೆಗಳಲ್ಲಿ ನಡೆಯಬೇಕು ಎಂಬುದು ಸ್ವಾಮೀಜಿ ಅವರ ಆಪೇಕ್ಷೆ ಎಂದರು. ಈ ಸಂದರ್ಭ ಚಾತುರ್ಮಾಸ್ಯ ಸಮಿತಿ ಪ್ರಮುಖರಾದ ಪ್ರೊ.ಎಂ.ಬಿ.ಪುರಾಣಿಕ್, ಸುಧಾಕರ ರಾವ್ ಪೇಜಾವರ, ಜನಾರ್ದನ ಹಂದೆ ಮತ್ತಿತರರಿದ್ದರು.