ಹೆಲ್ಮೆಟ್ ಬಳಕೆ, ಸೀಟ್ ಬೆಲ್ಟ್ ಧಾರಣೆ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡದಿರುವುದು ಮತ್ತು ವೇಗ ನಿಯಂತ್ರಣದಂತಹ ಕ್ರಮಗಳು ಅಪಘಾತ ತಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ
ಕೊಪ್ಪಳ: ರಸ್ತೆ ನಿಯಮ ದಂಡದ ಭಯದಿಂದ ಪಾಲಿಸುವುದಲ್ಲ.ನಮ್ಮ ಜೀವ ರಕ್ಷಣೆಗಾಗಿ ಜವಾಬ್ದಾರಿಯಿಂದ ರಸ್ತೆ ನಿಯಮ ಪಾಲಿಸಬೇಕು ಡಾ.ಬಸವರಾಜ ಕ್ಯಾವಟರ್ ಹೇಳಿದರು.
ರಸ್ತೆ ಸುರಕ್ಷತಾ ಸಪ್ತಾಹದ ಹಿನ್ನೆಲೆಯಲ್ಲಿ ನಗರದ ಕೆ.ಎಸ್. ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆಲ್ಮೆಟ್ ಬಳಕೆ, ಸೀಟ್ ಬೆಲ್ಟ್ ಧಾರಣೆ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡದಿರುವುದು ಮತ್ತು ವೇಗ ನಿಯಂತ್ರಣದಂತಹ ಕ್ರಮಗಳು ಅಪಘಾತ ತಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಪ್ರತಿ ವರ್ಷ ಜನವರಿ ತಿಂಗಳನ್ನು ರಸ್ತೆ ಸುರಕ್ಷತಾ ತಿಂಗಳಾಗಿ ಆಚರಿಸಲಾಗುತ್ತದೆ. ಆದರೂ ಇದರ ಮಹತ್ವ ಇನ್ನೂ ಅನೇಕ ಜನರಿಗೆ ಸಂಪೂರ್ಣವಾಗಿ ತಿಳಿದಿಲ್ಲ. ರಸ್ತೆ ಅಪಘಾತಗಳಿಂದಾಗುವ ಸಾವು ಮತ್ತು ಗಂಭೀರ ಗಾಯ ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಕೆ.ಎಸ್. ಆಸ್ಪತ್ರೆಯು ಶಾಲಾ,ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗಾಗಿ ರಸ್ತೆ ಸುರಕ್ಷತೆ ವಿಷಯದ ಮೇಲೆ ಪ್ರಬಂಧ ಸ್ಪರ್ಧೆ ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ಸುಮಾರು 250 ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿ ರಸ್ತೆ ಸುರಕ್ಷತೆಯ ಮಹತ್ವ,ನಿಯಮಗಳ ಪಾಲನೆಯ ಅಗತ್ಯತೆ ಮತ್ತು ತಮ್ಮ ವೈಯಕ್ತಿಕ ಅನುಭವ ಪ್ರಬಂಧಗಳ ಮೂಲಕ ವ್ಯಕ್ತಪಡಿಸಿದರು.
ರಸ್ತೆ ಅಪಘಾತಗಳು ಭಾರತದಲ್ಲಿ ಇನ್ನೂ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿವೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 1.7ಲಕ್ಷಕ್ಕಿಂತ ಹೆಚ್ಚು ಜನರು ರಸ್ತೆ ಅಪಘಾತಗಳಿಂದ ಪ್ರಾಣ ಕಳೆದುಕೊಳ್ಳುತ್ತಾರೆ. ಅಂದರೆ ಪ್ರತಿದಿನ ಸರಾಸರಿ 475 ಸಾವು ಸಂಭವಿಸುತ್ತಿವೆ. ಕರ್ನಾಟಕದಲ್ಲಿ ಮಾತ್ರವೇ ವರ್ಷಕ್ಕೆ ಸುಮಾರು 12,000 ಜನರು ರಸ್ತೆ ಅಪಘಾತಗಳಿಂದ ಸಾವನ್ನಪ್ಪುತ್ತಿದ್ದು ನಿರಂತರ ಜಾಗೃತಿ ಮತ್ತು ತಡೆ ಕ್ರಮಗಳ ಅಗತ್ಯತೆ ಇದು ಸ್ಪಷ್ಟಪಡಿಸುತ್ತದೆ. ಪ್ರಬಂಧ ಸ್ಪರ್ಧೆ ಮಾತ್ರವಲ್ಲದೇ ಮುಂದಿನ ದಿನಗಳಲ್ಲಿ ರಸ್ತೆ ಸುರಕ್ಷತಾ ಬೀದಿ ನಾಟಕ, ಬೈಕ್ ರ‍್ಯಾಲಿ ಮೂಲಕ ಹೆಲ್ಮೆಟ್ ವಿತರಣೆಯಂತಹ ಜನ ಜಾಗೃತಿ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಅರಿನವು ಮೂಡಿಸಲು ಸಜ್ಜಾಗಿದೆ. ರಸ್ತೆ ಅಪಘಾತಗಳಿಂದಾಗುವ ಸಾವು ನೋವುಗಳನ್ನು ತಡೆಯುವುದು ಕೆ.ಎಸ್.ಆಸ್ಪತ್ರೆಯ ಮುಖ್ಯ ಉದ್ದೇಶವಾಗಿದೆ. ಶಾಲಾ ಮತ್ತು ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರು, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.