ಹೆಲ್ಮೆಟ್‌ ಧರಿಸಬೇಕೆಂಬ ಸುಪ್ರೀಂ ಕೋರ್ಟ್‌ ಆದೇಶ ಪಾಲಿಸಿ

KannadaprabhaNewsNetwork | Published : Jan 18, 2024 2:00 AM

ಸಾರಾಂಶ

ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಬೇಕು. ಇದು ಸುಪ್ರೀಂ ಕೋರ್ಟ್ ಆದೇಶವಾಗಿದೆ. ಸಂಚಾರಿ ನಿಯಮಗಳನ್ನು ಅರಿತು, ವರ್ತಿಸಬೇಕು. ಅಲ್ಲದೇ, ನಿಮ್ಮನ್ನು ನಂಬಿಕೊಂಡಿರುವ ಕುಟುಂಬದ ಸದಸ್ಯರ ಕಾಳಜಿಯಿಂದ ತಪ್ಪದೇ ಹೆಲ್ಮೆಟ್‌ ಮಹತ್ವ ಅರಿತು ಬಳಸಬೇಕು ಎಂದು ಪೊಲೀಸ್ ವೃತ್ತ ನಿರೀಕ್ಷಕ ಎಲ್.ರಾಜಶೇಖರ್ ಸೊರಬದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸೊರಬ

"ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಿ ", ಮದ್ಯ ಸೇವಿಸಿ ವಾಹನ ಚಲಾಯಿಸಬಾರದು, ಅತಿ ವೇಗ- ತಿಥಿ ಬೇಗ, ಅತಿಯಾದ ವೇಗ ಸಾವಿಗೆ ಆಹ್ವಾನ, ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಿ ಪ್ರಾಣ ಉಳಿಸಿ.. ಹೀಗೆ ವಿವಿಧ ಘೋಷಣೆಗಳೊಂದಿಗೆ ಪೊಲೀಸ್ ಇಲಾಖೆ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬುಧವಾರ ಬೈಕ್ ಜಾಥಾ ನಡೆಸುವ ಮೂಲಕ ಜಾಗೃತಿ ಮೂಡಿಸಲಾಯಿತು.

ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಮುಂಭಾಗದಿಂದ ಆರಂಭವಾದ ಬೈಕ್ ಜಾಥಾ ಮುಖ್ಯ ರಸ್ತೆ ಮಾರ್ಗವಾಗಿ ಪುರಸಭೆ ಮುಂಭಾಗದ ವೃತ್ತದವರೆಗೆ ನಡೆಸಲಾಯಿತು. ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಕುರಿತು ಪೊಲೀಸರು ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ಬೈಕ್ ಜಾಥಾಕ್ಕೆ ಚಾಲನೆ ನೀಡಿದ ಪೊಲೀಸ್ ವೃತ್ತ ನಿರೀಕ್ಷಕ ಎಲ್.ರಾಜಶೇಖರ್ ಮಾತನಾಡಿ, ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಕುರಿತು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಅನೇಕ ಅಪಘಾತಗಳ ಸಂದರ್ಭದಲ್ಲಿ ಹೆಲ್ಮೆಟ್ ಧರಿಸದೇ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾವು-ನೋವು ಸಂಭವಿಸಿವೆ. ಜನರ ಜೀವದ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯ ಹೆಲ್ಮೆಟ್ ಕಡ್ಡಾಯಗೊಳಿಸಿದೆ. ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುವುದು ಕಾನೂನು ಪ್ರಕಾರ ದಂಡ ಶಿಕ್ಷೆಗೆ ಗುರಿ ಆಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪೋಷಕರು ಸಹ ತಮ್ಮ ಮಕ್ಕಳಿಗೆ ಬೈಕ್‌ಗಳನ್ನು ನೀಡುವುದನ್ನು ನಿಲ್ಲಿಸಬೇಕು. ಅಪ್ರಾಪ್ತರು ಅಪಘಾತಕ್ಕೆ ಕಾರಣರಾದರೆ ಅದಕ್ಕೆ ಪೋಷಕರೇ ನೇರ ಹೊಣೆ ಆಗಬೇಕಾಗುತ್ತದೆ. 18 ವರ್ಷ ಮೇಲ್ಪಟ್ಟವರು ವಾಹನ ಚಾಲನಾ ಪರವಾನಗಿ ಪಡೆದ ನಂತರವೇ ಬೈಕ್‌ಗಳನ್ನು ಚಲಾಯಿಸಬೇಕು. ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದರಿಂದ ಅಪಘಾತದ ವೇಳೆ ಪ್ರಾಣಾಪಾಯದಿಂದ ಪಾರಾಗಬಹುದಾದ ಅನೇಕ ನಿದರ್ಶನಗಳಿವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಜೊತೆಗೆ ವಾಹನಗಳೊಂದಿಗೆ ಅಗತ್ಯವಾದ ದಾಖಲೆಗಳನ್ನು ಹೊಂದಬೇಕು ಎಂದು ಮಾಹಿತಿ ನೀಡಿದರು.

ಬೈಕ್ ಜಾಥಾದಲ್ಲಿ ಪಿಎಸ್‌ಐ ಎಚ್.ಎನ್. ನಾಗರಾಜ್, ಹೆಡ್ ಕಾನ್‌ಸ್ಟೇಬಲ್‌ಗಳಾದ ನಾಗೇಶ್, ಗಿರೀಶ್ ಡೋಂಗ್ರೆ, ಕೊಟ್ರೇಶಪ್ಪ, ಪೊಲೀಸ್ ಸಿಬ್ಬಂದಿ, ಗೃಹರಕ್ಷಕ ದಳದ ಸಿಬ್ಬಂದಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಧ್ಯಾಪಕರು, ಎನ್‌ಸಿಸಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

- - - -17ಕೆಪಿಸೊರಬ01:

ಸೊರಬ ಪಟ್ಟಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ನಿಮಿತ್ತ ಬೈಕ್ ಜಾಥಾ ನಡೆಸಲಾಯಿತು.

Share this article