ಸಂಚಾರಿ ನಿಯಮ ಪಾಲಿಸಿ, ಅಮೂಲ್ಯ ಜೀವ ಉಳಿಸಿ

KannadaprabhaNewsNetwork |  
Published : Jan 29, 2025, 01:35 AM IST
ಪೋಟೋ೨೮ಸಿಎಲ್‌ಕೆ೦೨ ಚಳ್ಳಕೆರೆ ನಗರದ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಜಾಗೃತಿ ಜಾಥದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. | Kannada Prabha

ಸಾರಾಂಶ

ಚಳ್ಳಕೆರೆ ನಗರದ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ರಸ್ತೆ ಸುರಕ್ಷಿತ ಮಾಸ ಅಂಗವಾಗಿ ಹಮ್ಮಿಕೊಂಡಿದ್ದ ಸಡಕ್ ಸುರಕ್ಷ-ಜೀವನ್‌ರಕ್ಷ ಜಾಥಕ್ಕೆ ಡಿವೈಎಸ್‌ಪಿ ಟಿ.ಬಿ.ರಾಜಣ್ಣ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ:

ಸಂಚಾರಿ ನಿಯಮ ಪಾಲಿಸುವಲ್ಲಿ ಮುಂಜಾಗ್ರತೆ ವಹಿಸಿದರೆ ಮಾತ್ರ ಅಪಘಾತ ಮತ್ತು ಪ್ರಾಣಾಪಾಯಗಳನ್ನು ತಪ್ಪಿಸಬಹುದು. ಸಂಚಾರಿ ನಿಯಂತ್ರಣ ಉಲ್ಲಂಘನೆಯಿಂದ ಹೆಚ್ಚು ಅಪಘಾತ ನಡೆಯುತ್ತಿದ್ದು, ಅಪಘಾತದ ಸಂದರ್ಭದಲ್ಲಿ ಮೃತಪಟ್ಟ ಕುಟುಂಬದ ಸದಸ್ಯರು ಅತಂತ್ರ ಬದುಕು ಸಾಗಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ವಾಹನ ಸವಾರರು ಮುಂಜಾಗ್ರತೆ ವಹಿಸುವ ಮೂಲಕ ಜನರ ಪ್ರಾಣ ರಕ್ಷಣೆಯ ಜೊತೆಗೆ ತಮ್ಮ ಕುಟುಂಬ ರಕ್ಷಿಸಿಕೊಳ್ಳಿ ಎಂದು ಉಪವಿಭಾಗದ ಡಿವೈಎಸ್‌ಪಿ ಟಿ.ಬಿ.ರಾಜಣ್ಣ ತಿಳಿಸಿದರು.ಮಂಗಳವಾರ ನಗರದ ಬಿ.ಎಂ.ಸರ್ಕಾರಿ ಪ್ರೌಢಶಾಲಾ ಮುಂಭಾಗದಲ್ಲಿ ಹೆಗ್ಗೆರೆ ತಾಯಮ್ಮ, ಬಿ.ಎಂ.ಪ್ರೌಢಶಾಲೆ ವಿದ್ಯಾರ್ಥಿಗಳ ಸಹಯೋಗದೊಂದಿಗೆ ರಾಷ್ಟ್ರೀಯ ರಸ್ತೆ ಸುರಕ್ಷಿತ ಮಾಸ ಅಂಗವಾಗಿ ಹಮ್ಮಿಕೊಂಡಿದ್ದ ಸಡಕ್ ಸುರಕ್ಷ-ಜೀವನ್‌ ರಕ್ಷ ಜಾಥಕ್ಕೆ ಹಸಿರು ಬಾವುಟ ತೋರಿಸಿ ಚಾಲನೆ ನೀಡಿ ಮಾತನಾಡಿದರು.

ಚಳ್ಳಕೆರೆ ಉಪವಿಭಾಗ ವ್ಯಾಪ್ತಿಯಲ್ಲಿ ಮೂರು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿವೆ. ವಾಹನ ಸಂಚಾರ ಸದಾಕಾಲ ಹೆಚ್ಚಿರುತ್ತದೆ. ಈ ನಿಟ್ಟಿನಲ್ಲಿ ಸಂಚಾರಿ ನಿಯಮ ಪಾಲನೆ ಅತ್ಯಗತ್ಯ ಎಂದರು.

ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನ ಅಪಘಾತದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ಬೈಕ್ ಸವಾರರು ಹೆಲ್ಮೇಟ್ ಇಲ್ಲದೆ ಸಂಚಾರ ಮಾಡುವ ಮೂಲಕ ಅಪಾಯವನ್ನು ಅವರೇ ಆಹ್ವಾನಿಸುತ್ತಿದ್ದಾರೆ. ಪ್ರತಿವರ್ಷ ನೂರಾರು ಅಪಘಾತಗಳು, ಸಾವಿರಾರು ಗಾಯಾಳುಗಳು, ನೂರಾರು ಸಂಖ್ಯೆಯ ಸಾವುಗಳು ನಮ್ಮ ಕಣ್ಣಮುಂದೆ ಸಂಭವಿಸುತ್ತಿದ್ದರೂ ಅವುಗಳ ನಿಯಂತ್ರಣದ ಬಗ್ಗೆ ಪೊಲೀಸ್ ಇಲಾಖೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಸಹಕಾರ ನೀಡುವುದಲ್ಲದೆ, ಸಂಚಾರಿ ನಿಯಮಗಳನ್ನು ಅಳವಡಿಸಿಕೊಳ್ಳುವತ್ತ ಹೆಚ್ಚು ಗಮನ ನೀಡಬೇಕು ಎಂದರು.

ವೃತ್ತ ನಿರೀಕ್ಷಕ ರಾಜಫಕೃದ್ದೀನ್ ದೇಸಾಯಿ ಮಾತನಾಡಿ, ಎಲ್ಲೆ ಅಪಘಾತ ಸಂಭವಿಸಲಿ ಕೂಡಲೇ ಸಾರ್ವಜನಿಕರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲು ಮುಂದಾಗಬೇಕು. ಪೊಲೀಸ್ ಇಲಾಖೆಯೂ ಸಹ ಅಪಘಾತದ ಸಂದರ್ಭದಲ್ಲಿ ಕೂಡಲೇ ಕಾರ್ಯೋನ್ಮುಖವಾಗುತ್ತದೆ. ವಿಶೇಷವಾಗಿ ಮುಂಜಾನೆಯ ನಿದ್ದೆಮೊಂಪರಿನಲ್ಲಿ ಅಪಘಾತಗಳು ಸ್ವಾಭಾವಿಕ. ಆದ್ದರಿಂದ ಚಾಲಕರು ಸದಾ ಜಾಗ್ರತೆಯಿಂದ ವಾಹನ ಚಾಲನೆ ಮಾಡಬೇಕು ಎಂದು ತಿಳಿಸಿದರು.

2024 ರಲ್ಲಿ ಚಳ್ಳಕೆರೆ ಉಪವಿಭಾಗ ವ್ಯಾಪ್ತಿಯಲ್ಲಿ 1740 ಅಪಘಾತವಾಗಿದ್ದು, 488 ಜನ ಮೃತಪಟ್ಟಿದ್ದು, 2020 ಜನ ಗಾಯಗೊಂಡಿದ್ದಾರೆ ಎಂದರು.

ಪಿಎಸ್‌ಐ ಜೆ.ಶಿವರಾಜ್, ಧರೆಪ್ಪ ಬಾಳಪ್ಪ ದೊಡ್ಡಮನಿ, ಎಎಸ್‌ಐ ರವಿಕುಮಾರ್, ಮಂಜುನಾಥ, ಗೋವಿಂದರಾಜು, ಹೆಗ್ಗೆರೆ ತಾಯಮ್ಮ ಶಾಲೆಯ ಪ್ರಭಾರಮುಖ್ಯ ಶಿಕ್ಷಕಿ ವೇಣಿ, ಶಿಕ್ಷಕರಾದ ಬಿ.ರಾಜ್‌ಕುಮಾರ್, ಪ್ರಾಣೇಶ್, ಸುಜಾತ, ಪ್ರದೀಪ್, ಮುಖ್ಯಪೇದೆ ಗಂಗಮ್ಮ, ಗಿರಿಯಮ್ಮ, ಕವಿತಾ, ತಿಲಕ್‌ರಾಜ್, ಶಂಕರಣ್ಣ, ಬಸವರಾಜು, ಜಗದೀಶ್ ಮುಂತಾದವರು ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ