ಹಿಂದೂ ಧರ್ಮ ಒಗ್ಗಟ್ಟಿಗೆ ಸ್ವಧರ್ಮಿಯರೇ ಅಡ್ಡಿ: ಮಠಾಧೀಶರ ಕಳವಳ

KannadaprabhaNewsNetwork |  
Published : Jul 10, 2026, 12:30 AM IST
ಮೂಲ್ಕಿಯಲ್ಲಿ ಪತ್ರಿಕಾ ದಿನಾಚರಣೆ  | Kannada Prabha

ಸಾರಾಂಶ

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಬೀದರ್‌ ಜಿಲ್ಲಾ ಘಟಕದಿಂದ ಶಿವನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಬ್ರಹ್ಮಾನಂದ ಭವನದಲ್ಲಿ ಬುಧವಾರ ಸಂತರ ಚಿಂತನಾ ಗೋಷ್ಠಿ ಜರುಗಿತು.

ಕನ್ನಡಪ್ರಭ ವಾರ್ತೆ ಬೀದರ್

ಹಿಂದೂ ಸಮಾಜದ ಒಗ್ಗಟ್ಟಿಗೆ ಸ್ವಧರ್ಮಿಯರಲ್ಲಿಯೇ ಭಿನ್ನಾಭಿಪ್ರಾಯಗಳು ಅಡ್ಡಿಯಾಗುತ್ತಿವೆ ಎಂಬ ಆತಂಕವನ್ನು ಸಂತರ ಚಿಂತನಾ ಗೋಷ್ಠಿಯಲ್ಲಿ ಮಠಾಧೀಶರು ವ್ಯಕ್ತಪಡಿಸಿದರು.

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಬೀದರ್‌ ಜಿಲ್ಲಾ ಘಟಕದ ವತಿಯಿಂದ ನಗರದ ಶಿವನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಬ್ರಹ್ಮಾನಂದ ಭವನದಲ್ಲಿ ಬುಧವಾರ ಆಯೋಜಿಸಿದ್ದ ಸಂತರ ಚಿಂತನಾ ಗೋಷ್ಠಿಯಲ್ಲಿ ಹಿಂದೂ ಸಮಾಜ ಎದುರಿಸುತ್ತಿರುವ ವಿವಿಧ ಸವಾಲುಗಳ ಕುರಿತು ವ್ಯಾಪಕ ಚರ್ಚೆ ನಡೆಯಿತು.

ಜಿಲ್ಲಾ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ಮೆಹಕರ್-ತಡೋಳಾ ಸಂಸ್ಥಾನದ ಡಾ. ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಗೋಷ್ಠಿ ಉದ್ಘಾಟಿಸಿ ಮಾತನಾಡಿ, ಭಾಷಣ ಮತ್ತು ಪ್ರಚಾರಕ್ಕೆ ಸೀಮಿತವಾಗದೆ ಸಮಾಜದ ಸಮಸ್ಯೆಗಳ ಮೂಲಕ್ಕೆ ಹೋಗಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಅಹಂಕಾರ, ಪ್ರತಿಷ್ಠೆ ಹಾಗೂ ಒಳಜಗಳಗಳಿಂದ ಧರ್ಮ ಮತ್ತು ಸಮಾಜ ವಿಭಜನೆಯಾಗುತ್ತಿದ್ದು, ಎಲ್ಲರನ್ನು ಒಗ್ಗೂಡಿಸುವ ಸನಾತನ ಸಂಸ್ಕೃತಿಯನ್ನು ಉಳಿಸಬೇಕೆಂದು ಕರೆ ನೀಡಿದರು.

ಭಾತಂಬ್ರಾದ ಶಿವಯೋಗೇಶ್ವರ ಸ್ವಾಮೀಜಿ ಮಾತನಾಡಿ, ಹಿಂದೂ ಸಮಾಜ ಸಂಘಟಿತರಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಸಮಾಜದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಒಗ್ಗಟ್ಟಿನಿಂದ ಸವಾಲುಗಳನ್ನು ಎದುರಿಸಬೇಕೆಂದರು.

ಮುಚಳಂಬದ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ಜಾತಿ-ಉಪಜಾತಿಗಳ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಪ್ರವೃತ್ತಿ ಹಿಂದೂ ಸಮಾಜದ ದುರ್ಬಲತೆಗೆ ಕಾರಣವಾಗಿದೆ. ‘ನಾವೆಲ್ಲರೂ ಹಿಂದೂ’ಎಂಬ ವಿಶಾಲ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ವಿಎಚ್‌ಪಿ ಕ್ಷೇತ್ರ ಧಾರ್ಮಿಕ ಪುಂಜ ಪ್ರಮುಖ ಬಸವರಾಜ ಹಿರೇಮಠ ಮಾತನಾಡಿ, ಮತಾಂತರ, ಲವ್ ಜಿಹಾದ್, ಗೋಹತ್ಯೆ ಸೇರಿದಂತೆ ವಿವಿಧ ಸಾಮಾಜಿಕ ಸವಾಲುಗಳ ಕುರಿತು ಸಂತರು ಸಮಾಜಕ್ಕೆ ಮಾರ್ಗದರ್ಶನ ನೀಡಬೇಕಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಮತಾಂತರ, ಲವ್ ಜಿಹಾದ್, ಗೋಹತ್ಯೆ, ಕುಟುಂಬ ವ್ಯವಸ್ಥೆಯ ಕುಸಿತ, ಸಂಸ್ಕೃತಿ ಮತ್ತು ಪರಂಪರೆಯಿಂದ ವಿಮುಖತೆ, ಜನಸಂಖ್ಯೆಯ ಏರುಪೇರು, ಜಾತಿ ಆಧಾರಿತ ವಿಭಜನೆ ಸೇರಿದಂತೆ ಹಲವು ಸಮಕಾಲೀನ ವಿಷಯಗಳ ಕುರಿತು ಚರ್ಚೆ ನಡೆಯಿತು. ಸಮಾಜದಲ್ಲಿ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಉಳಿಸುವಲ್ಲಿ ಸಂತರ ಪಾತ್ರ ಮಹತ್ವದ್ದಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ, ಹಲಬರ್ಗಾದ ಹಾವಗಿಲಿಂಗೇಶ್ವರ ಶಿವಾಚಾರ್ಯ, ಸೇವಾನಗರದ ರಾಮಚೈತನ್ಯ ಮಹಾರಾಜ, ಗಡಿಗೌಡಗಾಂವದ ಶಾಂತಲಿಂಗ ಶಿವಾಚಾರ್ಯ ಸೇರಿದಂತೆ ಹಲವು ಸಂತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ವಿಎಚ್‌ಪಿ ಜಿಲ್ಲಾ ಅಧ್ಯಕ್ಷ ವೀರಶೆಟ್ಟಿ ಖ್ಯಾಮಾ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ಪ್ರಮುಖರಾದ ರಾಮಕೃಷ್ಣ ಸಾಳೆ, ಜೈಕಿಶನ್ ಬಿಯಾನಿ, ಅಂಬರೀಶ ಸುಲೇಗಾವ್, ಸತೀಶ ನೌಬಾದೆ, ಬಸವರಾಜ ಯದ್ಲಾಪುರ, ಶ್ರೀಶೈಲ ವಾತಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

100 ತರುಣರ ಕ್ಷಿಪ್ರ ಪಡೆ ರಚಿಸಿ:

ಪ್ರಸ್ತುತ ಸಮಸ್ಯೆ, ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾ, ತಾಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿ ಸಶಕ್ತ, ಸದೃಢ 100 ಯುವಕರುಳ್ಳ ತರುಣ ಕ್ಷಿಪ್ರ ಪಡೆ ರಚಿಸಬೇಕು ಅವರಿಗೆ ಎಲ್ಲಾ ರೀತಿಯ ಆರ್ಥಿಕ ನೆರವು ನೀಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಲಾಯಿತು.

35ಕ್ಕೂ ಹೆಚ್ಚು ಪೂಜ್ಯರು ಭಾಗಿ:

ಚಿಂತನಾ ಗೋಷ್ಠಿಯಲ್ಲಿ ಹೆಡಗಾಪುರದ ಶತಾಯುಷಿ ಶಿವಲಿಂಗ ಶಿವಾಚಾರ್ಯ ಸೇರಿದಂತೆ ಜಿಲ್ಲೆಯ 35ಕ್ಕೂ ಹೆಚ್ಚು ಪೂಜ್ಯರು ಭಾಗವಹಿಸಿ ಹಿಂದೂ ಸಮಾಜದ ಸಂಘಟನೆ, ಸಾಮಾಜಿಕ ಸಾಮರಸ್ಯ ಹಾಗೂ ಧಾರ್ಮಿಕ ಜಾಗೃತಿಗೆ ಸಂಬಂಧಿಸಿದಂತೆ ಸಲಹೆ-ಸೂಚನೆಗಳನ್ನು ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರು ಬೆಳೆದ ಕಬ್ಬನ್ನು ಹೇಮಗಿರಿ ಷುಗರ್ಸ್ ಗೆ ಸರಬರಾಜು ಮಾಡಿ ಕಾರ್ಖಾನೆ ಉಳಿಸಿ
ಹೇಮಾವತಿ ನದಿಯಿಂದ ಒಂದು ಕಂತು ನೀರು ಹರಿಸಲು ರೈತರಿಂದ ಮನವಿ