ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಭಾರತೀಯ ಆಯುರ್ವೇದ ವೈದ್ಯ ಪದ್ಧತಿ ಅನುಸರಿಸಿ ಭಾರತದ ಅಂತಶಕ್ತಿಯನ್ನು ಬಲಗೊಳಿಸುವಂತೆ ಯೋಗ ಗುರು ಲಕ್ಷ್ಮಣ್ ಜೀ ಕರೆ ನೀಡಿದರು.ಪಟ್ಟಣದ ಹೌಸಿಂಗ್ ಬೋರ್ಡ್ ನಲ್ಲಿ ಬುದ್ಧ, ಬಸವ ಅಂಬೇಡ್ಕರ್ ಯೋಗ ಕೇಂದ್ರದಲ್ಲಿ ನಡೆದ ಆರೋಗ್ಯ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತೀಯ ಜೀವನ ಪದ್ಧತಿಯಲ್ಲಿ ಮನುಕುಲದ ಒಳಿತು ಅಡಗಿದೆ. ಸರ್ವರೋಗಗಳಿಗೂ ನಮ್ಮ ಆಹಾರ ಪದ್ಧತಿಯಲ್ಲಿ ಪರಿಹಾರವಿದೆ ಎಂದರು.
ನಾವು ಆರೋಗ್ಯವಂತರಾಗಿರಬೇಕಾದರೆ ನಾವು ಬಳಸುವ ನೀರು ಆಹಾರ ಪದ್ಧತಿ ಬದಲಾಗಬೇಕು. ಗಿಡಮೂಲಿಕೆಗಳಲ್ಲಿ ಸಿಗುವ ಆರೋಗ್ಯ ಸಂಜೀವಿನಿಯನ್ನು ಪ್ರಾಚೀನ ಖುಷಿ ಮುನಿಗಳು ಕಂಡು ಹಿಡಿದು ಜಗತ್ತಿಗೆ ಪರಿಚಯಿಸುವ ಮೂಲಕ ಒಳಿತು ಮಾಡಿದ್ದಾರೆ. ನಾವು ನಮ್ಮ ಪ್ರಾಚೀನ ಋಷಿಮುನಿಗಳ ಜೀವನ ಪದ್ಧತಿಯಿಂದ ದೂರ ಸರಿದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.ನೈಸರ್ಗಿಕವಾದ ಶುದ್ಧ ನೀರು ತ್ಯಜಿಸಿ ನೀರಿನ ಸಾರವನ್ನು ಹಿಂಡಿ ತೆಗೆಯುವ ಬಾಟಲ್ ನೀರಿಗೆ ಮರುಳಾಗಿದ್ದೇವೆ. ಎಣ್ಣೆ ಸ್ನಾನ ಬಿಟ್ಟು, ಎಣ್ಣೆ ಪಾನಕ್ಕೆ ಪ್ರಾರಂಭವಾಗಿದೆ ಎಂದು ವಿಷಾದಿಸಿದರು.
ಭಾರತೀಯರು ನಮ್ಮ ಸಂಸ್ಕೃತಿ, ಸಂಸ್ಕಾರ ಬೆಳೆಸಿಕೊಳ್ಳಬೇಕು ಮತ್ತು ಆಯುರ್ವೇದ ವೈದ್ಯ ಪದ್ಧತಿ ಸಂಪೂರ್ಣವಾಗಿ ಅನುಸರಿಸಬೇಕು. ಸಾವಯವ ಗೊಬ್ಬರ ಬೆಲ್ಲ ಮತ್ತು ಸಿರಿಧಾನ್ಯಗಳ ಬೆನ್ನು ಹತ್ತಿ ಬದುಕು ಸುಖಮಯವಾಗಿ ಹಸನು ಮಾಡಿ ಕೊಳ್ಳಿ ಎಂದು ನುಡಿದರು.ಕಾರ್ಯಕ್ರಮದಲ್ಲಿ ಯೋಗ ಕೇಂದ್ರದ ಮುಖ್ಯಸ್ಥ ಅಲ್ಲಮಪ್ರಭು ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಮಂಜು, ಕೊಡಗಹಳ್ಳಿ ಪ್ರಕಾಶ್, ನಿವೃತ್ತ ಶಿಕ್ಷಕರಾದ ಕುಳ್ಳೇಗೌಡ, ಲಕ್ಷ್ಮಮ್ಮ, ಕನ್ನಡ ಉಪನ್ಯಾಸಕ ಶ್ರೀಧರ್, ತಾಲೂಕು ಕಸಾಪ ಪ್ರತಿನಿಧಿ ಚಾ.ಶಿ.ಜಯಕುಮಾರ್, ಮುಖಂಡರಾದ ಚಿಕ್ಕಣ್ಣ, ಫಿಶ್ ಕುಮಾರ್, ಪೋಲೀಸ್ ಇಲಾಖೆ ಮೈತ್ರಿ ಜಯರಾಂ, ನೇತ್ರಾಪ್ರಮೋದ್, ಕುಮಾರಿ ಸ್ಪಂದನ, ಯೋಗ ಗುರು ವಿನೋದ್ ರಾಜ್ ಮುಂತಾದವರು ಉಪಸ್ಥಿತರಿದ್ದರು.ವಿದ್ಯುತ್ ತಂತಿ ಸ್ಪರ್ಶಿಸಿ ಚಿರತೆ ಸಾವು
ಕೆ.ಆರ್.ಪೇಟೆ:ವಿದ್ಯುತ್ ತಂತಿ ಸ್ಪರ್ಶಿಸಿ ಚಿರತೆ ಮೃತಪಟ್ಟಿರುವ ಘಟನೆ ತಾಲೂಕಿನ ಬಂಡಿಹೊಳೆ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.ಗ್ರಾಮದ ರಾಘು ದೇವರಸೇಗೌಡರ ಜಮೀನಿನಲ್ಲಿ ಬಳಿ ವಿದ್ಯುತ್ ತಂತಿ ಹಾದುಹೋಗಿರುವ ಸಮೀಪದ ಮರವನ್ನು ಏರುವಾಗ ವಿದ್ಯುತ್ ಪ್ರವಹಿಸಿ ಚಿರತೆ ಮೃತಪಟ್ಟಿದೆ ಎಂದು ಶಂಕಿಸಲಾಗಿದೆ.ಈ ಸಮಯದಲ್ಲಿ ಮೋಟಾರ್ ಲೈನ್ ಚಾಲನೆಯಲ್ಲಿತ್ತು ಎಂದು ತಿಳಿದುಬಂದಿದೆ. ಭಾನುವಾರ ಬೆಳಗ್ಗೆ ಜಮೀನಿನ ಮಾಲೀಕರು ತಮ್ಮ ಗದ್ದೆ ತೆರಳಿ ನೋಡಿದಾಗ ಚಿರತೆ ಮಲಗಿರುವ ರೀತಿ ಕಂಡು ಭಯಭೀತರಾಗಿದ್ದಾರೆ.
ನಂತರ ಸ್ಥಳೀಯರನ್ನು ಕರೆದು ಕೂಗಾಟ ನಡೆಸಿದಾಗ ಚಿರತೆ ಸಾವನ್ನಪ್ಪಿರುವುದು ಧೃಢಪಟ್ಟಿದೆ. ನಂತರ ಗ್ರಾಮಸ್ಥರು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಅಧಿಕಾರಿಗಳು ಪರಿಶೀಲಿನೆ ನಡೆಸಿದ್ದಾರೆ.