ದೇವನಹಳ್ಳಿಯಲ್ಲಿ ಮುಖ್ಯಮಂತ್ರಿಗಳ ನಿವಾಸಕ್ಕೆ ಅನ್ನದಾತರ ಪಾದಯಾತ್ರೆ

KannadaprabhaNewsNetwork |  
Published : Jul 24, 2024, 12:16 AM IST
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ರೈತರು ಮುಖ್ಯಮಂತ್ರಿಗಳ ಮನೆಗೆ ಬಸ್‌ಗಳಲ್ಲಿ ಹೊರಟರು | Kannada Prabha

ಸಾರಾಂಶ

ದೇವನಹಳ್ಳಿಯಲ್ಲಿ ಕೃಷಿ ಜಮೀನು ಭೂಸ್ವಾಧೀನವನ್ನು ಖಂಡಿಸಿ 832 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟಕ್ಕೆ ಸ್ಪಂದಿಸದ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಮಟ್ಟದ ಮುಖಂಡರೊಂದಿಗೆ ಮಂಗಳವಾರ ಪ್ರತಿಭಟನೆ ನಡೆಸಿದ ಬಳಿಕ ಮುಖ್ಯಮಂತ್ರಿಗಳ ನಿವಾಸ ಪಾದಯಾತ್ರೆ ಕೈಗೊಂಡಿದ್ದಾರೆ.

-2 ಬಸ್‌ಗಳಲ್ಲಿ ತೆರಳಿದ ರೈತರು -ಚನ್ನರಾಯಪಟ್ಟಣದ ಸುತ್ತಮುತ್ತಲ ರೈತರು ಭೂಸ್ವಾಧೀನ ಖಂಡಿಸಿ 832 ದಿನಗಳಿಂದ ಪ್ರತಿಭಟನೆ ಕನ್ನಡಪ್ರಭ ವಾರ್ತೆ ದೇವನಹಳ್ಳಿ

ಕೃಷಿ ಜಮೀನು ಭೂಸ್ವಾಧೀನವನ್ನು ಖಂಡಿಸಿ 832 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟಕ್ಕೆ ಸ್ಪಂದಿಸದ ರಾಜ್ಯ ಸರ್ಕಾರದ ವಿರುದ್ಧ ರೊಚ್ಚಿಗೆದ್ದ ರೈತರು, ಇದಕ್ಕೊಂದು ತಾರ್ಕಿಕ ಅಂತ್ಯ ಕಂಡುಕೊಳ್ಳಬೇಕೆಂದು ವಿವಿಧ ಸಂಘಟನೆಗಳ ರಾಜ್ಯಮಟ್ಟದ ಮುಖಂಡರೊಂದಿಗೆ ಮಂಗಳವಾರ ಪ್ರತಿಭಟನೆ ನಡೆಸಿದ ಬಳಿಕ ಮುಖ್ಯಮಂತ್ರಿಗಳ ನಿವಾಸ ಪಾದಯಾತ್ರೆ ಕೈಗೊಂಡಿದ್ದಾರೆ.

ತಾಲೂಕಿನ ಚನ್ನರಾಯಪಟ್ಟಣದ 9 ಗ್ರಾಮಗಳಿಗೆ ಸೇರಿದ 1,777 ಎಕರೆ ಜಮೀನನ್ನು ರಾಜ್ಯ ಸರ್ಕಾರ ಭೂಸ್ವಾಧೀನಪಡಿಸಿಕೊಳ್ಳಲು ಹುನ್ನಾರ ನಡೆಸಿದೆ ಎಂದು ಆರೋಪಿಸಿ ಆ ಭಾಗದ ರೈತರು ಭೂ ಸ್ವಾಧೀನ ಹೋರಾಟ ಸಮಿತಿ ರಚಿಸಿಕೊಂಡು 832 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ, ಜನಪ್ರತಿನಿಧಿಗಳು ಕೇವಲ ಭರವಸೆಗಳು ಕೊಟ್ಟು ಹೋಗುತ್ತಾರೆಯೇ ಹೊರತು, ಯಾರೊಬ್ಬರೂ ಸಮಸ್ಯೆಗೆ ಪರಿಹಾರ ಸೂಚಿಸದ ಕಾರಣ ಪಾದಯಾತ್ರೆ ಕೈಗೊಂಡಿರುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.

ಪ್ರತಿಭಟನೆ ಬಳಿಕ ಮುಖ್ಯಮಂತ್ರಿಗಳ ನಿವಾಸಕ್ಕೆ ಪಾದಯಾತ್ರೆಗೆ ತೆರಳುತ್ತಿದ್ದ ರೈತರ ಮುಖಂಡರು, ರೈತರನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದರು. ಅಲ್ಲದೆ, ಪ್ರತಿಭಟನಾಕಾರರ ಜತೆ ಸಂಧಾನಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಶಾಸಕ ವಿ.ಆರ್‌.ಪಾಟೀಲ್‌ ಆಗಮಿಸಿ ಬಂಧಿಸಿರುವ ಎಲ್ಲ ರೈತರನ್ನು ಮತ್ತದೇ ಸ್ಥಳಕ್ಕೆ ಕರೆತಂದು ಬಿಡಬೇಕೆಂದು ಸೂಚಿಸಿದರು.

ಕೆಲವೇ ನಿಮಿಷಗಳಲ್ಲಿ ಬಂಧಿತ ರೈತರು, ಮುಖಂಡರು ಅದೇ ಬಸ್‌ಗಳಲ್ಲಿ ವಾಪಸಾದರು. ಕಾರಹಳ್ಳಿ ಶ್ರೀನಿವಾಸ್‌ ಪರಿಸ್ಥಿತಿಯನ್ನು ಪಾಟೀಲರಿಗೆ ವಿವರಿಸಿದರು. ರೈತರ ಮುಖ್ಯ ಬೇಡಿಕೆಯಾದ ಡಿ ನೋಟಿಫಿಕೇಷನ್‌ ಬಗ್ಗೆ ಮುಖ್ಯಮಂತ್ರಿಗಳಲ್ಲಿ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು. ತಮ್ಮನ್ನು ಬಂಧಿಸಿ ಕರೆತಂದಿದ್ದ ಬಸ್‌ಗಳಲ್ಲೇ ಮತ್ತೆ ಮುಖ್ಯಮಂತ್ರಿಗಳ ಮನೆಗೆ ರೈತರು ಹೊರಟರು.

ಪ್ರತಿಭಟನೆಯಲ್ಲಿ ಮುಖಂಡರಾದ ಯಶವಂತ್‌, ಚಂದ್ರತೇಜಸ್ವಿ, ಚಿಕ್ಕಬಳ್ಳಾಪುರದ ಆಂಜನೇಯರೆಡ್ಡಿ, ಸಿರಿಮನೆ ನಾಗರಾಜ್‌, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್‌.ಕೃಷ್ಣಪ್ಪ, ಜಿಜೆ ಹಳ್ಳಿಯ ನಾರಾಯಣಸ್ವಾಮಿ ಇತರರು ಪಾಲ್ಗೊಂಡು ಮಾತನಾಡಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ