- ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿಕೆ । ಅಣಬೇರು ಮಂಜಣ್ಣ ನಿವಾಸದಲ್ಲಿ 25ನೇ ವರ್ಷದ ಅಕ್ಕಿ ಸಮರ್ಪಣೆ ಕಾರ್ಯಕ್ರಮ
- - - ಕನ್ನಡಪ್ರಭ ವಾರ್ತೆ ದಾವಣಗೆರೆ ಅನ್ನದಾನ, ವಿದ್ಯಾದಾನ, ಔಷಧ ದಾನ, ಅಭಯ ದಾನ ಹೀಗೆ ನಾಲ್ಕು ಸೇವೆಗಳನ್ನು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಾಡಿಕೊಂಡು ಬರಲಾಗಿದೆ. ಅಭಯ ದಾನದಲ್ಲಿ ಗ್ರಾಮೀಣಾವೃದ್ಧಿ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ ಎಂದು ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.ನಗರದ ಕೆ.ಬಿ. ಬಡಾವಣೆಯ ಕೆನರಾ ಬ್ಯಾಂಕ್ ಹಿಂಭಾಗದ ಅಣಬೇರು ಮಂಜಣ್ಣ, ಲತಾ ಮಂಜಣ್ಣ ನಿವಾಸದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ 25ನೇ ವರ್ಷದ ಅಕ್ಕಿ ಸಮರ್ಪಣೆ ಮತ್ತು ಶ್ರೀ ಮಂಜುನಾಥ ಸ್ವಾಮಿ ಪೂಜಾ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅನ್ನದಾನಕ್ಕೆ ಪ್ರತ್ಯೇಕ ಮಹತ್ವವೂ ಇದೆ. ದಾನವನ್ನು ಕೊಟ್ಟು ತೃಪ್ತಿಪಡಿಸಲು ಸಾಧ್ಯವಿದ್ದರೆ ಅದು ಅನ್ನದಾನದಿಂದ ಮಾತ್ರವೇ ಸಾಧ್ಯ. ಅಂತಹ ಅನ್ನದಾನದಿಂದ ಶ್ರೀಕ್ಷೇತ್ರ ಭಕ್ತರ ಮನದಲ್ಲಿ ನೆಲೆಯೂರಿದೆ. ಸಾಮಾನ್ಯವಾಗಿ ಯಾರಿಗಾದರೂ ₹10 ಲಕ್ಷ ದುಡ್ಡು ಕೊಟ್ಟು ಕೇಳಿದರೆ, ಇನ್ನೂ ಸ್ವಲ್ಪ ಕೊಡಿ ಸ್ವಾಮಿ ಅನ್ನಬಹುದು. ಆದರೆ, ಊಟ ಮಾಡಿ, ತೃಪ್ತಿಯಾದವರಿಗೆ ಇನ್ನು ಸ್ವಲ್ಪ ಊಟ ಮಾಡಿ ಅಂದರೆ ಹೊಟ್ಟೆ ತುಂಬಿದೆ, ಬಿಟ್ಟು ಬಿಡಿ ಎನ್ನುತ್ತಾರೆ. ಹಾಗೇ, ವ್ಯಕ್ತಿಯನ್ನು ತೃಪ್ತಿಪಡಿಸುವ ಶಕ್ತಿ ಇರುವುದು ಅನ್ನ, ಆಹಾರಕ್ಕೆ ಮಾತ್ರ. ಅಂತಹ ಅನ್ನದಾನಕ್ಕೆ ರಾಜ್ಯ, ರಾಷ್ಟ್ರದ ಮೂಲೆ ಮೂಲೆಯಿಂದ ಭಕ್ತಾದಿಗಳು ಕೈಜೋಡಿಸುತ್ತಿದ್ದಾರೆ ಎಂದು ತಿಳಿಸಿದರು.ಶ್ರೀ ಕ್ಷೇತ್ರದ ಉಗ್ರಾಣದಲ್ಲಿ ಆಹಾರ ಧಾನ್ಯ ಇದೆಯೇ, ಇಲ್ಲವೇ ಎಂಬ ಚಿಂತನೆ ನಮಗೆ ಎಂದಿಗೂ ಇಲ್ಲ. ದಾವಣಗೆರೆ ಸೇರಿದಂತೆ ಕರ್ನಾಟಕದ ಮೂಲೆ ಮೂಲೆಗಳಿಂದ, ಕರ್ನಾಟಕ ವಿವಿಧ ರಾಜ್ಯಗಳಿಂದ ಭಕ್ತರು ಅಕ್ಕಿ, ತರಕಾರಿ ಸೇರಿದಂತೆ ಎಲ್ಲ ಆಹಾರ ಪದಾರ್ಥ, ಧಾನ್ಯಗಳನ್ನು ಕಳಿಸುತ್ತಾರೆ. ತಿರುಪತಿಯಿಂದ ಬಂದು ಶ್ರೀಕ್ಷೇತ್ರದ ಅನ್ನದಾನದ ವ್ಯವಸ್ಥೆ ಕುರಿತು ಸಲಹೆ ಪಡೆದು ಹೋಗಿದ್ದಾರೆ. ಈ ಸ್ವತಂತ್ರ ಯೋಜನೆ ತಿರುಪತಿಯಲ್ಲೂ ಹಾಕಿಕೊಂಡಿದ್ದಾರೆ. ಅದೇ ರೀತಿ ಅನ್ನದಾನದಷ್ಟು ಶ್ರೇಷ್ಠ ದಾನ ಮತ್ತೊಂದಿಲ್ಲ ಎಂಬುದನ್ನು ಕಂಡುಕೊಂಡಿದ್ದರಿಂದಲೇ ಎಲ್ಲ ಕ್ಷೇತ್ರದಲ್ಲೂ ಅನ್ನದಾನ ಶುರುವಾಗಿದೆ ಎಂದು ಹೇಳಿದರು.
ಅಪೂರ್ವ ಹೋಟೆಲ್ ಸಮೂಹಗಳ ಮುಖ್ಯಸ್ಥ, ಹಿರಿಯ ಉದ್ಯಮಿ ಅಣಬೇರು ರಾಜಣ್ಣ, ಧರ್ಮಸ್ಥಳ ಎಸ್‌ಕೆಡಿಆರ್‌ಡಿಪಿ ಮುಖ್ಯ ಕಾರ್ಯ ನಿರ್ವಾಹಕ ನಿರ್ದೇಶಕ ಎಸ್.ಎಸ್. ಅನಿಲಕುಮಾರ, ಹಿರಿಯ ವರ್ತಕ ಎಸ್.ಟಿ. ಕುಸುರ ಶ್ರೇಷ್ಠಿ, ಬಸವರಾಜ, ಬಾಬಣ್ಣ, ಹಿರಿಯ ಪತ್ರಕರ್ತ ಜಿಗಳಿ ಪ್ರಕಾಶ ಇತರರು ಇದ್ದರು.ಕಾರ್ಯಕ್ರಮದಲ್ಲಿ ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ಮಹಿಳೆಯರು ಪೂರ್ಣಕುಂಭ ಮೇಳದೊಂದಿಗೆ ವೇದಿಕೆಗೆ ಕರೆ ತಂದರು. ಅಣಬೇರು ಮಂಜಣ್ಣ ಕುಟುಂಬದಿಂದ ಶ್ರೀಕ್ಷೇತ್ರ ಧರ್ಮಾಧಿಕಾರಿಗಳಿಗೆ ಗೌರವ ಸಮರ್ಪಿಸಿ, ಕಲ್ಪವೃಕ್ಷ ದಿನದರ್ಶಿಕೆ ಬಿಡುಗಡೆ ಮಾಡಲಾಯಿತು. ಇದೇ ವೇಳೆ ಸಾವಿರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.
- - -ಬಾಕ್ಸ್ * ಜಟರಾಗ್ನಿ ಕಾಪಾಡಿಕೊಳ್ಳಲು ಸಲಹೆ ಧರ್ಮಸ್ಥಳದಲ್ಲಿ ಪ್ರಸಾದ ಸ್ವೀಕರಿಸಿದವರು ಹೊಟ್ಟೆ ತುಂಬಿಸಿಕೊಳ್ಳುವ ಜೊತೆಗೆ ಸಂತೋಷವನ್ನೂ ಹೊಂದುತ್ತಾರೆ. ಯಾವುದೇ ದೇವರಿಗೆ ಹೋಮದ ಅಗ್ನಿ ಮೂಲಕವೇ ಭಕ್ತಿ ಸಮರ್ಪಣೆ ಮಾಡುತ್ತೇವೆ. ಅದೇ ರೀತಿ ನಮ್ಮೊಳಗೂ ಒಂದು ಜಟರಾಗ್ನಿ ಇದೆ. ನಾವು ಯಾವುದೇ ಆಹಾರ ತಿಂದರೂ ಅದನ್ನು ಜೀರ್ಣಿಸುವ ಶಕ್ತಿ ಇರುವುದೇ ಆ ಜಟರಾಗ್ನಿಗೆ. ಹಾಗಾಗಿ, ನಾಲಿಕೆಯ ರುಚಿ ನೋಡದೆ, ಜಟರಾಗ್ನಿಯನ್ನು ಸರಿಯಾಗಿ ನಾವು ಕಾಪಾಡಿಕೊಳ್ಳಬೇಕು ಎಂದು ಡಾ.ವೀರೇಂದ್ರ ಹೆಗ್ಗಡೆ ಸಲಹೆ ನೀಡಿದರು.
- - - -25ಕೆಡಿವಿಜಿ6, 7:ಕಾರ್ಯಕ್ರಮಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.