ಜಾನುವಾರುಗಳಿಗೆ ಕಾಲುಬಾಯಿ ರೋಗ ನಿಯಂತ್ರಣ ಲಸಿಕೆ

KannadaprabhaNewsNetwork |  
Published : Apr 06, 2026, 01:30 AM IST
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದಿಂದ ಜಾನುವಾರುಗಳಿಗೆ ಕಾಲುಬಾಯಿ ರೋಗ ನಿಯಂತ್ರಣ ಲಸಿಕೆ ಅಭಿಯಾನದ ಭಿತ್ತಿಪತ್ರವನ್ನು ಅನಾವರಣಗೊಳಿಸಲಾಯಿತು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾದ್ಯಂತ ಜಾನುವಾರುಗಳಿಗೆ ಉಚಿತ ಕಾಲು ಬಾಯಿ ಲಸಿಕೆ ಹಾಕುವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ರೈತರು ತಪ್ಪದೇ ತಮ್ಮ ಜಾನುವಾರುಗಳಿಗೆ ಉಚಿತ ಕಾಲುಬಾಯಿ ಲಸಿಕೆ ಹಾಕಿಸುವಂತೆ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಹೇಳಿದರು

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾದ್ಯಂತ ಜಾನುವಾರುಗಳಿಗೆ ಉಚಿತ ಕಾಲು ಬಾಯಿ ಲಸಿಕೆ ಹಾಕುವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ರೈತರು ತಪ್ಪದೇ ತಮ್ಮ ಜಾನುವಾರುಗಳಿಗೆ ಉಚಿತ ಕಾಲುಬಾಯಿ ಲಸಿಕೆ ಹಾಕಿಸುವಂತೆ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಹೇಳಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 9ನೇ ಸುತ್ತಿನ ಕಾಲುಬಾಯಿ ಲಸಿಕಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಸ್ತುತ ಜಾನುವಾರು ಗಣತಿಯಂತೆ ಒಟ್ಟು 1,31,986 ದನ. 9,090 ಎಮ್ಮೆಗಳಿದ್ದು, ಒಟ್ಟು 1,41,076 ಜಾನುವಾರುಗಳಿಗೆ ಏ.23 ರಿಂದ ಮೇ.22 ರವೆರೆಗೆ 9ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವನ್ನು ಬಮೂಲ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ. ಶೇ.100ರಷ್ಟು ಗುರಿ ಸಾಧಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 1687 ಬ್ಯಾಕ್‌ಗಳು:

ಜಿಲ್ಲೆಯಲ್ಲಿ ಒಟ್ಟು 1687 ಬ್ಲಾಕ್‌ಗಳನ್ನು ವಿಂಗಡಿಸಿದ್ದು, ಒಟ್ಟು 199 ತಂಡಗಳಲ್ಲಿ ಇಲಾಖಾ ಅಧಿಕಾರಿ, ಸಿಬ್ಬಂದಿ ಮತ್ತು ಬಮೂಲ್ ಸಿಬ್ಬಂದಿ ಸೇರಿ ಒಟ್ಟು 333 ಲಸಿಕೆದಾರರು ಪ್ರತಿದಿನ ಬೆಳಿಗ್ಗೆ 5.30 ಯಿಂದ 11 ಗಂಟೆಯವರೆಗೆ ನಿಗಧಿತ ವೇಳಾಪಟ್ಟಿಯಂತೆ ಗ್ರಾಮಗಳಿಗೆ ಭೇಟಿ ನೀಡಿ, ಜಾನುವಾರುಗಳಿಗೆ ಕಾಲು ಬಾಯಿ ಜ್ವರದ ಲಸಿಕೆಯನ್ನು ಉಚಿತವಾಗಿ ನೀಡಲಿದ್ದಾರೆ. ಈಗಾಗಲೇ ಪ್ರತೀ ಗ್ರಾಮವಾರು ಮೈಕೋಪ್ಲಾನ್ ಮಾಡಲಾಗಿದ್ದು, ಅದರನ್ವಯ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಮತ್ತು ಈ ಲಸಿಕಾ ಕಾರ್ಯಕ್ರಮದ ಕುರಿತು ರೈತರಿಗೆ ಮನವರಿಕೆ ಮಾಡಿ ಕೊಡುವ ಸಲುವಾಗಿ ಬ್ಯಾನರ್ಸ್, ಪೊಸ್ಟರ್ ತ್ತು ಕರಪತ್ರಗಳನ್ನು ಮುದ್ರಿಸಿ, ಜಿಲ್ಲೆಯ ಪ್ರತಿ ವಶುವೈದ್ಯಕೀಯ ಸಂಸ್ಥೆ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳ ಆವರಣದಲ್ಲಿ ಪ್ರದರ್ಶಿಸಲಾಗಿದೆ ಎಂದರು.

ಜಿಲ್ಲೆಗೆ 1.53 ಲಕ್ಷ ಡೋಸ್‌ ಲಸಿಕೆ:

ಜಿಲ್ಲಾ ಪಶುವೈದ್ಯಕೀಯ ಮತ್ತು ಸೇವಾ ಇಲಾಖೆ ಉಪನಿರ್ದೇಶಕ ಡಾ.ಜಗದೀಶ್‌ ಕುಮಾರ್‌ ಮಾತನಾಡಿ, ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 1,53,500 ಡೋಸಸ್ ಕಾಲುಬಾಯಿ ರೋಗ ಲಸಿಕೆ ಲಭ್ಯವಿರುತ್ತದೆ ಹಾಗೂ ಲಸಿಕಾ ಕಾರ್ಯಕ್ರಮಕ್ಕೆ ಅಗತ್ಯವಿರುವ ಸಿರಿಂಜುಗಳು ಸರಬರಾಜಾಗಿವೆ. ಬಮೂಲ್ ವತಿಯಿಂದ ಈ ಲಸಿಕಾ ಕಾರ್ಯಕ್ರಮಕ್ಕೆ 38 ಲಸಿಕೆದಾರರನ್ನು ಒದಗಿಸಲಾಗುತ್ತಿದೆ. ಪ್ರತಿ ರಾಸಿಗೆ 1 ರಂತೆ ಸಿರಿಂಜ್ ಮತ್ತು ಸೂಜಿಗಳನ್ನು ಬಳಸಿ ಲಸಿಕೆ ಹಾಕಲಾಗುವುದು. ರೈತರು ತಮ್ಮ 03 ತಿಂಗಳ ಮೇಲ್ಪಟ್ಟ ಎಲ್ಲಾ ಜಾನುವಾರುಗಳಿಗೆ ತಪ್ಪದೇ ಕಾಲುಬಾಯಿ ರೋಗ ಲಸಿಕೆ ಹಾಕಿಸಬೇಕು. ಕರುಗಳಿಗೆ 21 ದಿನಗಳ ನಂತರ ಬೂಸ್ಟರ್ ಡೋಸ್ ಲಸಿಕೆ ಹಾಕಿಸಬೇಕು. ಈ ಮೂಲಕ ಈ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಿಳಿಸಲಾಗಿದೆ ಎಂದರು.

ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್, ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸದಸ್ಯ ಕಾರ್ಯದರ್ಶಿ, ಮುಖ್ಯಪಶುವೈದ್ಯಾಧಿಕಾರಿ ಡಾ.ನಾರಾಯಣಸ್ವಾಮಿ, ಡಾ.ಸದಾಶಿವಮೂರ್ತಿ, ಡಾ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

5ಕೆಡಿಬಿಪಿ1-

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದಿಂದ ಜಾನುವಾರುಗಳಿಗೆ ಕಾಲುಬಾಯಿ ರೋಗ ನಿಯಂತ್ರಣ ಲಸಿಕೆ ಅಭಿಯಾನದ ಭಿತ್ತಿಪತ್ರವನ್ನು ಅನಾವರಣಗೊಳಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂದೆ-ತಾಯಿಯನ್ನು ಮಕ್ಕಳು ಕಡೆಗಣಿಸುವುದು ಸಲ್ಲ: ನ್ಯಾ. ಇ.ಎಸ್.ಇಂದ್ರೇಶ್
ಒಳ ಮೀಸಲಾತಿಯಿಂದ ಭೋವಿ ಸಮುದಾಯಕ್ಕೆ ಅನ್ಯಾಯ