ನಾಳೆಯಿಂದ ಕಾಲುಬಾಯಿ ರೋಗ ಲಸಿಕಾ ಅಭಿಯಾನ: ಎಸ್.ಜೆ.ಸೋಮಶೇಖರ್

KannadaprabhaNewsNetwork |  
Published : Apr 22, 2026, 02:45 AM IST
ಚಿತ್ರ : 21ಎಂಡಿಕೆ5 : ಕಾಲುಬಾಯಿ ರೋಗದ ಲಸಿಕಾ ಅಭಿಯಾನದ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು.  | Kannada Prabha

ಸಾರಾಂಶ

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 9ನೇ ಸುತ್ತಿನ ಕಾಲುಬಾಯಿ ರೋಗದ ಲಸಿಕಾ ಅಭಿಯಾನವು 23 ರಿಂದ ಮೇ 22 ರವರೆಗೆ ನಡೆಯಲಿದ್ದು, ಯಾವುದೇ ಜಾನುವಾರು ಲಸಿಕೆಯಿಂದ ಬಿಟ್ಟು ಹೋಗದಂತೆ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 9ನೇ ಸುತ್ತಿನ ಕಾಲುಬಾಯಿ ರೋಗದ ಲಸಿಕಾ ಅಭಿಯಾನವು 23 ರಿಂದ ಮೇ, 22 ರವರೆಗೆ ನಡೆಯಲಿದ್ದು, ಯಾವುದೇ ಜಾನುವಾರು ಲಸಿಕೆಯಿಂದ ಬಿಟ್ಟು ಹೋಗದಂತೆ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ ಸಂಬಂಧ ಮಂಗಳವಾರ ಭಿತ್ತಿಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು. ಜಾನುವಾರುಗಳು ರೈತರ ಹಾಗೂ ರಾಷ್ಟ್ರದ ಆಸ್ತಿಯಾಗಿದ್ದು, ಅವುಗಳ ಸಂರಕ್ಷಣೆ ಮತ್ತು ಜವಾಬ್ದಾರಿ ಎಲ್ಲರದ್ದಾಗಿದೆ. ಹೈನುಗಾರಿಕೆ ರೈತರ ಆರ್ಥಿಕ ಸಂಕಷ್ಟವನ್ನು ನಿವಾರಿಸಲು ಸಹಕಾರಿಯಾಗಿದೆ. ಆ ನಿಟ್ಟಿನಲ್ಲಿ ಜಾನುವಾರುಗಳ ಆರೋಗ್ಯ ಕಾಪಾಡುವುದು ಅತೀ ಮುಖ್ಯವಾಗಿದೆ ಎಂದರು.

ಪಶುಪಾಲನೆ ಇಲಾಖೆ ಉಪ ನಿರ್ದೇಶಕರಾದ ಲಿಂಗರಾಜ ದೊಡ್ಡಮನಿ ಮಾತನಾಡಿ ಜಾನುವಾರುಗಳಿಗೆ ಕಾಲುಬಾಯಿ ರೋಗವು ವೈರಾಣುವಿನಿಂದ ಬರುವ ಅಂಟು ಜಾಢ್ಯವಾಗಿದ್ದು, ಲಸಿಕೆ ಹಾಕಿಸುವುದೊಂದೇ ರೋಗ ನಿಯಂತ್ರಿಸಲು ಸಾಧ್ಯವಾಗಲಿದೆ ಎಂದರು. ವರ್ಷದಲ್ಲಿ ಎರಡು ಬಾರಿ ಜಾನುವಾರುಗಳಿಗೆ ಲಸಿಕೆ ಹಾಕುವುದರಿಂದ ರೋಗ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು. ಮೂರು ತಿಂಗಳ ಮೇಲ್ಪಟ್ಟ ಎಲ್ಲ ಕರುಗಳಿಗೆ ತಪ್ಪದೆ ಒಮ್ಮೆ ಲಸಿಕೆ ಹಾಕಿಸಿದ ನಂತರ ಮತ್ತೊಮ್ಮೆ 3 ರಿಂದ 5 ವಾರದೊಳಗೆ ದನ ಹಾಗೂ ಎಮ್ಮೆಗಳಿಗೆ ಬೂಸ್ಟರ್ ಲಸಿಕೆ ಹಾಕಿಸಬೇಕು ಎಂದು ವಿವರಿಸಿದರು.

ಗರ್ಭಧರಿಸಿದ ಹಸು ಹಾಗೂ ಎಮ್ಮೆಗಳಿಗೂ ತಪ್ಪದೇ ಲಸಿಕೆ ಹಾಕಿಸಬೇಕು. ಈ ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದರೂ ಸಹ ಪ್ರತೀ ಆರು ತಿಂಗಳಿಗೊಮ್ಮೆ ಕೈಗೊಳ್ಳುವ ಲಸಿಕೆ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಲಸಿಕೆ ಹಾಕಿಸುವುದು ಅತೀ ಮುಖ್ಯವಾಗಿದೆ ಎಂದು ಅವರು ಹೇಳಿದರು. ಜಿಲ್ಲೆಯಲ್ಲಿ ಸದ್ಯ 9ನೇ ಸುತ್ತಿನ ಕಾಲುಬಾಯಿ ರೋಗದ ಲಸಿಕಾ ಅಭಿಯಾನ ಸಂದರ್ಭದಲ್ಲಿ ದನ ಹಾಗೂ ಎಮ್ಮೆಗಳಿಗೆ ಲಸಿಕೆ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ 52,985 ದನ ಹಾಗೂ 2,136 ಎಮ್ಮೆಗಳಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಲಿಂಗರಾಜ ದೊಡ್ಡಮನಿ ಅವರು ಹೇಳಿದರು. ಜಿಲ್ಲೆಯ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನ ನಾಲ್ಕನೇಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವರು ನಡೆಸಿದರು. ಈ ಕುರಿತು ಮಾಹಿತಿ ನೀಡಿದ ಪಶುಪಾಲನಾ ಇಲಾಖೆ ಉಪ ನಿರ್ದೇಶಕರು ಜಿಲ್ಲೆಯಲ್ಲಿ 5 ಸಂಚಾರಿ ವಾಹನಗಳು ಕಾರ್ಯನಿರ್ವಹಿಸುತ್ತಿದ್ದು, ಜಾನುವಾರುಗಳಿಗೆ ರೈತರ ಮನೆ ಬಾಗಿಲಿಗೆ ತೆರಳಿ ಉಚಿತವಾಗಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಪಾಲಿ ಕ್ಲಿನಿಕ್‌ನ ಉಪ ನಿರ್ದೇಶಕರಾದ ಡಾ.ತಿಮ್ಮಯ್ಯ, ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ಪ್ರಸನ್ನ, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ, ಪ್ರಾದೇಶಿಕ ಸಾರಿಗೆ ಅಧಿಕಾರಿ ಸತೀಶ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಾಜಶೇಖರ್(ಸೋಮವಾರಪೇಟೆ), ಡಾ.ಲತಾ ಪ್ರಸನ್ನ (ಮಡಿಕೇರಿ), ಡಾ.ನವೀನ್ (ವಿರಾಜಪೇಟೆ), ಡಾ.ಶಿಂಧೆ (ಕುಶಾಲನಗರ), ಡಾ.ಚಂದ್ರಶೇಖರ್ (ಪೊನ್ನಂಪೇಟೆ), ಡಾ.ವಿವೇಕ್ (ಜಿಲ್ಲಾ ಪ್ರತಿನಿದಿ, ಸಂಚಾರಿ ಪಶು ಚಿಕಿತ್ಸಾ ಘಟಕ) ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭರತನಾಟ್ಯ ಕರಗತ ಮಾಡಿಕೊಳ್ಳುವುದೇ ಕಲೆ: ಡಾ. ಮೋಹನ್ ಆಳ್ವ
ಮಾಹೆ: ವೈರೋಗ್ಲೋಬಲ್ 2026’ ಸಮ್ಮೇಳನ ಸಂಪನ್ನ