ಕುಪ್ಪೆ ಮಹದೇವಸ್ವಾಮಿ
ಬಿಳಿಕೆರೆಯಿಂದ ಬೇಲೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಪಟ್ಟಣದ ಮೂಲಕ ಹಾದು ಹೋಗಿದ್ದು, ಇಲ್ಲಿ ರಸ್ತೆಯ ತುಂಬೆಲ್ಲ ಅಡಿಗಳಷ್ಟು ಆಳದ ಗುಂಡಿ ಬಿದ್ದಿದ್ದು, ಜನ ಮತ್ತು ವಾಹನಗಳ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ.
ಪಟ್ಟಣದ ಹೊರವಲಯದಲ್ಲಿರುವ ರೇಲ್ವೆ ಸೇತುವೆಯ ಮೇಲೆ ಮತ್ತು ಅದರ ಹಿಂದೆ ಮುಂದೆ ದೊಡ್ಡ ಹೊಂಡಗಳೆ ನಿರ್ಮಾಣವಾಗಿದ್ದು, ನಿತ್ಯ ಈ ಮಾರ್ಗದಲ್ಲಿ ಹೋಗುವವರು ಪ್ರಾಣ ಭಯದಿಂದ ಸಂಚರಿಸಬೇಕಿದೆ.ಹಲವು ತಿಂಗಳುಗಳಿಂದ ಈ ಭಾಗದಲ್ಲಿ ನೂರಾರು ಗುಂಡಿಗಳು ಬಿದ್ದಿದ್ದರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇದಕ್ಕೂ ತಮಗೂ ಸಂಬಂಧ ಇಲ್ಲದವರಂತೆ ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದು, ಇವರ ವರ್ತನೆಯನ್ನು ಸಾರ್ವಜನಿಕರು ಖಂಡಿಸಿದ್ದಾರೆ.
ಪ್ರಾಧಿಕಾರದ ಕಚೇರಿ ಹೊಳೆನರಸೀಪುರದಲ್ಲಿ ಇರುವುದರಿಂದ ರಸ್ತೆ ಗುಂಡಿ ಬಿದ್ದು ಸವಾರರಿಗೆ ಆಗುತ್ತಿರುವ ಅನಾನುಕೂಲ ಹಾಗೂ ತೊಂದರೆಯ ಬಗ್ಗೆ ಹೇಳಿಕೊಳ್ಳಲು ಅಧಿಕಾರಿಗಳು ಯಾರ ಸಂಪರ್ಕಕಕ್ಕೂ ಸಿಗುತ್ತಿಲ್ಲ.
ಈಗಲಾದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತುರ್ತು ಗಮನ ಹರಿಸಿ ಕೆ.ಆರ್. ನಗರ ಪಟ್ಟಣದ ವ್ಯಾಪ್ತಿಯಲ್ಲಿ ಗುಂಡಿ ಬಿದ್ದಿರುವ ರಸ್ತೆಗಳನ್ನು ಸರಿಪಡಿಸಿ ರೇಲ್ವೆ ಸೇತುವೆಯ ಮೇಲೆ ಶಾಶ್ವತ ಕಾಮಗಾರಿ ಮಾಡಿಸಬೇಕೆಂದು ಪಟ್ಟಣದ ಜನತೆ ಆಗ್ರಹಿಸಿದ್ದಾರೆ.ರಸ್ತೆಯಲ್ಲಿ ಅಡಿಗಳಷ್ಟು ಆಳದ ಗುಂಡಿ ಬಿದ್ದು ಸಂಚಾರಕ್ಕೆ ತೊಂದರೆಯಾಗಿದ್ದು, ಅಧಿಕಾರಿಗಳು ಈ ಬಗ್ಗೆ ಗಮಗ ಹರಿಸದೆ ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ನಿತ್ಯ ಹತ್ತಾರು ಮಂದಿ ವಾಹನಗಳಿಂದ ಬಿದ್ದು, ಗಾಯಗೊಳ್ಳುತ್ತಿದ್ದು, ಈಗಲಾದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ತ್ವರಿತವಾಗಿ ರಸ್ತೆ ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಿದೆ.