ಮುಂಡಗೋಡ: ಪಟ್ಟಣದ ಶಿವಾಜಿ ಸರ್ಕಲ್ ಸುತ್ತ ರಸ್ತೆ ಪಕ್ಕದ ಅಂಗಡಿಗಳ ತೆರವು ಕಾರ್ಯಾಚರಣೆ ಶನಿವಾರ ನಡೆಯಿತು.
ಸರ್ಕಲ್ ಮಾತ್ರವಲ್ಲದೇ ಪಟ್ಟಣದ ಬಸ್ ನಿಲ್ದಾಣದೆದುರು ಶಿರಸಿ-ಹುಬ್ಬಳ್ಳಿ ರಸ್ತೆ ಹಾಗೂ ಯಲ್ಲಾಪುರ-ಬಂಕಾಪುರ ರಸ್ತೆ ಪಕ್ಕದ ಫುಟ್‌ಪಾತ್ ಮೇಲೆ ಗೂಡಂಗಡಿಗಳು ತಲೆ ಎತ್ತಿದ್ದು, ಸಂಚಾರ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಬಹುತೇಕ ಕಡೆ ವ್ಯಾಪಾರಸ್ಥರು ರಸ್ತೆಯಂಚಿನಲ್ಲೇ ವ್ಯಾಪಾರ ಮಾಡುವುದರಿಂದ ಟ್ರಾಫಿಕ್ ಜಾಮ್ ಆಗುತ್ತಿದೆ. ವಾಹನ ಸಂಚಾರಕ್ಕೆ ಮಾತ್ರವಲ್ಲದೇ ಸಾರ್ವಜನಿಕರಿಗೂ ಸಂಚರಿಸಲು ತೊಂದರೆಯಾಗುತ್ತಿದೆ. ಕೆಲವೆಡೆ ಫುಟ್‌ಪಾತ್ ಮೇಲೆಯೇ ವ್ಯಾಪಾರ ಮಾಡುವುದರಿಂದ ಸಾರ್ವಜನಿಕರು ಅನಿವಾರ್ಯವಾಗಿ ರಸ್ತೆ ಮೇಲೆ ಸಂಚರಿಸಬೇಕಾಗಿದೆ. ಇದರಿಂದ ರಸ್ತೆ ಅಪಘಾತಗಳು ಹೆಚ್ಚಲು ಕಾರಣವಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಸಂಚಾರ ವ್ಯವಸ್ಥೆ ಅಸ್ತವ್ಯಸ್ತ: ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದ್ದು, ಹೇಳುವರು ಕೇಳುವರು ಯಾರು ಇಲ್ಲದಂತಾಗಿದೆ. ಬಸ್ ನಿಲ್ದಾಣ, ಸರ್ಕಲ್ ಸೇರಿದಂತೆ ಯಾವುದೇ ಪ್ರಮುಖ ಸ್ಥಳಗಳಲ್ಲಿ ಕೂಡ ಪೊಲೀಸರನ್ನು ನಿಯೋಜನೆ ಮಾಡದೆ ಇರುವುದರಿಂದ ಸಂಚಾರ ವ್ಯವಸ್ಥೆ ಹದಗೆಟ್ಟು ಹೋಗಿದೆ. ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕಿದ್ದು, ಈ ಬಗ್ಗೆ ಗಮನಹರಿಸಿ ಸೂಕ್ತ ಸ್ಥಳಗಳಲ್ಲಿ ಪೊಲೀಸರನ್ನು ನೇಮಿಸಿ ಸಂಚಾರ ವ್ಯವಸ್ಥೆ ಸರಿಪಡಿಸಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.