3 ವರ್ಷ ಶಿಕ್ಷೆಯ ಕ್ರೈಂಗೆ 3 ವರ್ಷದೊಳಗೆ ದೂರು ನೀಡ್ಬೇಕು

KannadaprabhaNewsNetwork |  
Published : Nov 30, 2026, 03:00 AM IST
ಹೈಕೋರ್ಟ್‌ | Kannada Prabha

ಸಾರಾಂಶ

3 ವರ್ಷ ಶಿಕ್ಷೆಯ ಕ್ರೈಂಗೆ 3 ವರ್ಷದೊಳಗೆ ದೂರು ನೀಡ್ಬೇಕು ಎಂದು ಹೈಕೋರ್ಟ್‌ ಹೇಳಿದೆ.

ವೆಂಕಟೇಶ್‌ ಕಲಿಪಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ಗರಿಷ್ಠ ಮೂರು ವರ್ಷ ಶಿಕ್ಷೆ ವಿಧಿಸಬಹುದಾದ ಅಪರಾಧ ಸಂಬಂಧ ಕೃತ್ಯ ನಡೆದ ದಿನದಿಂದ ಮೂರು ವರ್ಷದೊಳಗೆ ದಾಖಲಿಸದ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಬಾರದು ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್‌, ಪ್ರತ್ಯೇಕ ವಾಸ ಆರಂಭಿಸಿದ 12 ವರ್ಷ ನಂತರ ಪತ್ನಿ ದಾಖಲಿಸಿದ್ದ ಭಾರತೀಯ ದಂಡ ಸಂಹಿತೆ ಸೆಕ್ಷನ್ 498ಎ ಅಡಿ (ಪತಿ ಅಥವಾ ಪತಿಯ ಸಂಬಂಧಿಕರಿಂದ ಮಹಿಳೆ ಮೇಲಿನ ದೈಹಿಕ ಅಥವಾ ಮಾನಸಿಕ ಕ್ರೌರ್ಯ) ಅಪರಾಧದಲ್ಲಿ ಪತಿ, ಮತ್ತವರ ಪೋಷಕರನ್ನು ದೋಷಿಗಳಾಗಿ ತೀರ್ಮಾನಿಸಿ ಎರಡು ವರ್ಷ ಸಾಧಾರಣಾ ಜೈಲು ಶಿಕ್ಷೆ ಮತ್ತು 10 ಸಾವಿರ ರು. ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.

ಹಾಸನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ 2026ರ ಫೆ.5ರಂದು ಹೊರಡಿಸಿರುವ ತೀರ್ಪು ರದ್ದು ಕೋರಿ ಹಾಸನ ತಾಲೂಕಿನ ಬಂಡಿಹಳ್ಳಿ ಗ್ರಾಮದ ನಿವಾಸಿಗಳಾದ ರಘು (52), ಅವರ ತಂದೆ ಶಿವೇಗೌಡ (70) ಮತ್ತು ತಾಯಿ ಚಿಕ್ಕಮ್ಮ (64) ಸಲ್ಲಿಸಿದ್ದ ಕ್ರಿಮಿನಲ್‌ ಮರು ಪರಿಶೀಲನಾ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಕೆ.ಬಿ. ಗೀತಾ ಅವರ ಪೀಠ ಈ ಆದೇಶ ಮಾಡಿದೆ.

2000ರಲ್ಲಿ ಆರೋಪಿ ರಘು ಮತ್ತು ಪತ್ನಿ ಕಲ್ಪನಾ ಮದುವೆಯಾಗಿದೆ. ಎರಡು ವರ್ಷ ಕಾಲ ಸಂತೋಷದಿಂದ ಸಂಸಾರ ನಡೆಸಲಾಗಿತ್ತು ಎಂದು ಪತ್ನಿಯೇ ಸಾಕ್ಷ್ಯ ನುಡಿದ್ದಾರೆ. ಸೌಹಾರ್ದಯುತ ಸಂಬಂಧವಿಲ್ಲದ್ದಕ್ಕೆ 2002ರ ನಂತರ ಪತ್ನಿ ಪ್ರತ್ಯೇಕವಾಗಿ ವಾಸವಿದ್ದರು. ಸಾಕ್ಷ್ಯ ಮತ್ತು ದೋಷಾರೋಪ ಪಟ್ಟಿ ಪ್ರಕಾರ ಪ್ರತ್ಯೇಕವಾಗಿ ವಾಸ ಆರಂಭಿಸಿದ ನಂತರ ಪತಿ ಮತ್ತು ಪತ್ನಿ ಮಧ್ಯೆ ಮಾತುಕತೆ ಅಥವಾ ಯಾವುದೇ ಹಣಕಾಸಿನ ವ್ಯವಹಾರವೇ ನಡೆದಿಲ್ಲ. ಇನ್ನೂ ಆರೋಪಿಗಳು (ಪತಿ ಹಾಗೂ ಪೋಷಕರು) ಯಾವ ದಿನಾಂಕದಂದು ವರದಕ್ಷಿಣೆಗೆ ಬೇಡಿಕೆಯಿಟ್ಟರು ಮತ್ತು ಆ ಬೇಡಿಕೆಗಾಗಿ ಆಕೆಯನ್ನು ಹೇಗೆ ಕಿರುಕುಳ ನೀಡಿದರು ಎಂಬ ಬಗ್ಗೆ ಯಾವುದೇ ನಿರ್ದಿಷ್ಟ ಆರೋಪ ಮಾಡಿಲ್ಲ. ಆದ್ದರಿಂದ, ದೂರು ದಾಖಲಿಸುವ ಹಿಂದಿನ ಮೂರು ವರ್ಷಗಳ ಅವಧಿಯಲ್ಲಿ ಆರೋಪಿಗಳು ವರದಕ್ಷಿಣೆಗಾಗಿ ಯಾವುದೇ ಕಾನೂನುಬಾಹಿರ ಬೇಡಿಕೆ ಇಟ್ಟಿರಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಆರೋಪಿಗಳ ವಿರುದ್ಧ ಹೊರಿಸಲಾದ ಐಪಿಸಿ ಸೆಕ್ಷನ್‌ 498ಎ ಅಡಿ ಅಪರಾಧಕ್ಕೆ ಗರಿಷ್ಠ ಮೂರು ಶಿಕ್ಷೆ ವಿಧಿಸಬಹುದಾಗಿದೆ. ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 468(2)(ಸಿ) ಪ್ರಕಾರ ಗರಿಷ್ಠ ಮೂರು ಶಿಕ್ಷೆ ವಿಧಿಸಬಹುದಾದ ಅಪರಾಧ ನಡೆದ ದಿನದಿಂದ ಮೂರು ವರ್ಷಗಳ ನಂತರ ದೂರು ದಾಖಲಾಗಿದ್ದರೆ, ಆ ಪ್ರಕರಣವನ್ನು ವಿಚಾರಣೆಗೆ (ಸಂಜ್ಞೆ ತೆಗೆದುಕೊಳ್ಳಬಾರದು) ಪರಿಗಣಿಸಬಾರದು. ಪ್ರಕರಣದಲ್ಲಿ ವರದಕ್ಷಿಣೆ ಬೇಡಿಕೆಯು 2002 ಅಥವಾ ಅದಕ್ಕೂ ಮುಂಚೆ ನಡೆದಿದ್ದರೆ, 2014ರಲ್ಲಿ ದೂರು ದಾಖಲಿಸಲಾಗಿದೆ. ಅದರೆ, 12 ವರ್ಷಗಳ ಕಾಲ ಅತಿಯಾದ ವಿಳಂಬದ ನಂತರ ದೂರು ದಾಖಲಿಸಲಾಗಿದೆ. ಈ ಕಾಲಮಿತಿ ಎಫ್‌ಐಆರ್‌ ದಾಖಲಿಸಲು ನಿಷೇಧಿಸುತ್ತದೆ ಹಾಗೂ ಪ್ರಕರಣವನ್ನು ವಿಚಾರಣಾ ನ್ಯಾಯಾಲಯ ವಿಚಾರಣೆಗೆ ಪರಿಗಣಿಸುವುದನ್ನು ನಿಷೇಧಿಸುತ್ತದೆ. ಈ ಅಂಶ ಪರಿಗಣಿಸದೆ ವಿಚಾರಣಾ ನ್ಯಾಯಾಲಯ ಆರೋಪಿಗಳನ್ನು ದೋಷಿಯಾಗಿ ಪರಿಗಣಿಸಿ ಶಿಕ್ಷೆ ವಿಧಿಸಿ ತೀರ್ಪು ನೀಡಿರುವುದು ದೋಷಪೂರಿತವಾಗಿದ್ದು, ಅದನ್ನು ರದ್ದುಪಡಿಸಲಾಗುತ್ತಿದೆ ಎಂದು ಆದೇಶಿಸಿದೆ.

ಪ್ರಕರಣದ ವಿವರ:

ಕಲ್ಪನಾ ಎಂಬುವರು2014ರಲ್ಲಿ ಶಾಂತಿಗ್ರಾಮ ಪೊಲೀಸ್‌ ಠಾಣೆಗೆ ದೂರು ನೀಡಿ, 2000ರ ಏ.2ರಂದು ನನ್ನ ಮತ್ತು ರಘು ಮದುವೆಯಾಗಿತ್ತು. ವಿವಾಹದ ವೇಳೆ ವರದಕ್ಷಿಣೆಯಾಗಿ 40 ಗ್ರಾಂ ಚಿನ್ನ ಮತ್ತು 50 ಸಾವಿರ ನಗದು ನೀಡಲಾಗಿತ್ತು. ಒಂದು ವರ್ಷದ ನಂತರ ಗಂಡು ಮಗು ಜನಿಸಿದರೂ, ಅದು ಕೂಡಲೇ ಅದು ಸಾವಿಗೀಡಾಗಿತ್ತು. ತರುವಾಯ ರಘು ಮತ್ತು ಫೋಷಕರು ನನಗೆ ನೀವು ಯಾವೊಂದು ಮಗುವಿಗೂ ಜನ್ಮ ನೀಡುತ್ತಿಲ್ಲ ಎಂದು ಬೈಯುತ್ತಿದ್ದರು. ತವರಿನಿಂದ ಹೆಚ್ಚಿನ ಹಣ ತೆಗೆದುಕೊಂಡು ಬಾ ಎಂದು ಬೇಡಿಕೆಯಿಡುತ್ತಿದ್ದರು. ಅದಕ್ಕಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದರು. ಹಣ ತರದಕ್ಕೆ ಮನೆಯಿಂದ ಹೊರಹಾಕಿದ್ದರು ಎಂದು ಆರೋಪಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಂಪಿಯ ಕಲ್ಲಿನ ರಥದ ಮೂಲ ಗೋಪುರ ಮರಸೃಷ್ಟಿ
ಆಂಧ್ರದ 4 ಟಿಎಂಸಿ ನೀರು ರಾಜ್ಯದ ಬೆಳೆಗಳಿಗೆ ಒದಗಿಸಲು ಎಚ್ಡಿಕೆಗೆ ಮನವಿ