ತೀರ್ಥಹಳ್ಳಿ: ಸಾಮಾಜಿಕವಾಗಿ ಧಾರ್ಮಿಕ ಮತ್ತು ಆಧ್ಯಾತ್ಮಿಕವಾಗಿಯೂ ಜೈನ ಪರಂಪರೆ ಈ ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಅಸಾಧಾರಣವಾದುದು. ಪಶ್ಚಿಮಘಟ್ಟದ ಎತ್ತರದ ಸ್ಥಾನದಲ್ಲಿರುವ ಈ ಕ್ಷೇತ್ರವೂ ಜ್ಞಾನದ ಸಂಕೇತದಂತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ಮಕರ ಸಂಕ್ರಾಂತಿಯ ಅಂಗವಾಗಿ ಅತಿಶಯ ಶ್ರೀ ಕ್ಷೇತ್ರ ಹೊಂಬುಜ ಮಹಾಸಂಸ್ಥಾನದ ಶಾಖಾ ಕ್ಷೇತ್ರವಾದ ಕುಂದಾದ್ರಿ ಬೆಟ್ಟದಲ್ಲಿ ಜರುಗಿದ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಅತಿಶಯ ಶ್ರೀ ಕ್ಷೇತ್ರ ಹೊಂಬುಜ ಮಹಾಸಂಸ್ಥಾನದ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಶ್ರೀಗಳು ಆಶೀರ್ವಚನ ನೀಡಿ, ಮಕರ ಸಂಕ್ರಾಂತಿ ನಿರ್ದಿಷ್ಟವಾಗಿ ಯಾವುದೇ ದೇವರನ್ನು ಆರಾಧಿಸುವ ದಿನವಾಗಿರದೇ ಪ್ರಕೃತಿಯನ್ನು ಸ್ವಾಗತಿಸುವ ದಿನವಾಗಿದೆ. ಸೂರ್ಯ ದೇವರು ತನ್ನ ಪಥವನ್ನು ಬದಲಿಸುವ ದಿನವಾದ ಅತ್ಯಂತ ಶ್ರೇಷ್ಠವಾದ ಕ್ಷಣವಾಗಿದ್ದು ಈ ಅವಧಿಯಲ್ಲಿ ಭೂಮಿ ಮೇಲೆ ಬಹಳಷ್ಟು ವ್ಯತ್ಯಾಸಗಳೂ ನಡೆಯುತ್ತವೆ. ಜಗತ್ತಿಗೆ ಆವರಿಸಿರುವ ಕತ್ತಲು ದೂರವಾಗಿ ಹೆಚ್ಚು ಕಾಲ ಬೆಳಕನ್ನು ನೀಡುವ ಪುಣ್ಯಕಾಲವಾಗಿದೆ. ಜಗತ್ತಿನ ಸಕಲ ಜೀವಿಗಳಿಗೆ ಭಗವಂತ ಸುಖ ಶಾಂತಿ ನೆಮ್ಮದಿಯನ್ನು ನೀಡುವಂತಾಗಲಿ ಎಂದೂ ಹಾರೈಸಿದರು.ಉಡುಪಿಯ ಪರಿಸರಾಸಕ್ತರಾದ ಪ್ರೊ.ಎಸ್.ಎ.ಕೃಷ್ಣಯ್ಯರವರು ತಾಳೆಗಿಡದ ಮಹತ್ವವನ್ನು ವಿವರಿಸಿ ಮಾತನಾಡಿ ತಾಳೆಗಿಡದ ಬೀಜ ಸಸಿಗಳನ್ನು ಹಾಗೂ ತಾಳೆಗರಿಗಳನ್ನು ಶ್ರೀಗಳಿಗೆ ನೀಡಿದರಲ್ಲದೇ ಶಾಸಕ ಆರಗ ಜ್ಞಾನೇಂದ್ರರಿಗೂ ವಿತರಿಸಿದರು.
ಬೇರೆ ಊರುಗಳಿಂದ ಆಗಮಿಸಿದ್ದ ಭಕ್ತರು ಶ್ರೀಗಳಿಗೆ ಫಲಪುಷ್ಪ ಸಮರ್ಪಿಸಿದರು. ಧಾರ್ಮಿಕ ಮುಖಂಡ ಡಾ.ಜೀವಂಧರ ಜೈನ್ ಇದ್ದರು.