ಕನ್ನಡಪ್ರಭ ವಾರ್ತೆ ನಾಗಮಂಗಲ
ಪೋಷಕರಿಗೆ ತಮ್ಮ ಮಕ್ಕಳು ಮಾಡುವ ಸಾಧನೆ ಎದುರು ಪ್ರಪಂಚದ ಎಲ್ಲಾ ವೈಭೋಗಗಳು ಶೂನ್ಯವಾಗಿ ಕಾಣುತ್ತವೆ. ಹಾಗಾಗಿ ವಿದ್ಯಾರ್ಥಿಗಳು ಸಾಧನೆಯ ಗುರಿಯೊಂದಿಗೆ ವಿದ್ಯೆ ಕಲಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಮಂಡ್ಯ ಡಯಟ್‌ನ ಉಪ ನಿರ್ದೇಶಕ ಕೆ.ಯೋಗೇಶ್ ತಿಳಿಸಿದರು.ತಾಲೂಕಿನ ದೇವಲಾಪುರದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ದಾನಿಗಳ ನೆರವಿನಿಂದ ನಿರ್ಮಿಸಿರುವ ನೂತನ ಭೋಜನಾಲಯ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.
ಈ ಶಾಲೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಯಾವುದೇ ಕೊರತೆಯಿಲ್ಲ. ಉತ್ತಮ ಶಿಕ್ಷಕರನ್ನೊಳಗೊಂಡ ಸುಸಜ್ಜಿತ ಕಟ್ಟಡ, ಶುದ್ಧ ಕುಡಿಯುವ ನೀರು, ಡಿಜಿಟಲ್ ಉಪಕರಣ, ಪ್ರಯೋಗಾಲಯ, ಶೌಚಾಲಯ ಸೇರಿದಂತೆ ಎಲ್ಲಾ ಸೌಲಭ್ಯಗಳಿವೆ. ಅನೇಕ ದಾನಿಗಳ ನೆರವು ಪಡೆದು ಸುಸಜ್ಜಿತವಾಗಿ ಭೋಜನಾಲಯ ನಿರ್ಮಿಸಲಾಗಿದೆ. ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಮನ್ಮುಲ್ ನಿರ್ದೇಶಕ ಎನ್.ಅಪ್ಪಾಜಿಗೌಡ ಮಾತನಾಡಿ, ಈ ಶಾಲೆ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ತಾಣವಾಗಿದೆ. ವಿದ್ಯಾರ್ಥಿಗಳು ಪದವಿ ಶಿಕ್ಷಣ ಮುಗಿಯುವವರೆಗೆ ಶ್ರದ್ಧೆ ಮತ್ತು ಏಕಾಗ್ರತೆಯಿಂದ ಓದಿದರೆ ಮುಂದಿನ ಐವತ್ತು ವರ್ಷದ ನಿಮ್ಮ ಜೀವನ ಸುಖಕರವಾಗಿರುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಲೋಕೇಶ್ ಮಾತನಾಡಿದರು. ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಡಿ.ಕೆ.ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಶಿಕ್ಷಕ ಎನ್.ಸಿ.ಶಿವಕುಮಾರ್ ಪ್ರಸ್ತಾವಿಕವಾಗಿ ನುಡಿದರು. ಭೋಜನಾಲಯ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ ಲೇಟ್ ಡಾ.ಡಿ.ಎಸ್.ವೆಂಕಟೇಶ್ ಡಾ.ಶಶಿಕಲಾ ಸೇರಿದಂತೆ ಎಲ್ಲ ದಾನಿಗಳನ್ನು ಸ್ಮರಿಸಿದರು.ಇದೇ ವೇಳೆ ಉದ್ಯಮಿ ಹರೀಶ್ ಅವರು ವೈಯುಕ್ತಿಕವಾಗಿ ಶಾಲೆ ಎಲ್ಲ ವಿದ್ಯಾರ್ಥಿಗಳಿಗೆ ಟ್ರ್ಯಾಕ್‌ಶೂಟ್ ವಿತರಿಸಿದರು.
ಡಾ.ಡಿ.ಎಸ್.ವೆಂಕಟೇಶ್ ಡಾ.ಶಶಿಕಲಾ ದಂಪತಿಯ ಪುತ್ರಿ ಡಾ.ಲಾಸ್ಯ, ಕ್ಷೇತ್ರ ಸಮನ್ವಯಾಧಿಕಾರಿ ಕೆ.ರವೀಶ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮಂಜುನಾಥ್, ಎಸ್‌ಎಸ್‌ಎ ಡಿವೈಪಿಸಿ ಲಕ್ಷ್ಮಿ, ಡಯಟ್‌ನ ಉಪನ್ಯಾಸಕರಾದ ಲೋಕೇಶ್, ನಾಗರಾಜು, ಬೆಂಗಳೂರಿನ ಟೆಕ್ಸ್‌ಟೈಲ್ ಡಿಸೈನರ್ ವೆಂಕಟೇಶ್, ಶಾಲೆ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಿ.ಕೆ.ವಾಸು, ವಿನಾಯಕ ವಿದ್ಯಾಸಂಸ್ಥೆ ಕಾರ್ಯದರ್ಶಿ ಡಿ.ಕೆ.ಕೋದಂಡರಾಮು, ಉಪ ನೋಂದಣಾಧಿಕಾರಿ ಕಚೇರಿಯ ಮಹೇಶ್, ಎಸ್ಡಿಎಂಸಿ ಸದಸ್ಯರಾದ ಜವರೇಗೌಡ, ಪುಟ್ಟಸ್ವಾಮಿ, ಬೋರೇಗೌಡ, ಶಶಿಕಲ, ಭವ್ಯ, ದಿವಾಕರ್, ಶಿವಣ್ಣ, ಪಂಚಾಕ್ಷರಯ್ಯ, ಮಂಜು, ನಾಗೇಗೌಡ, ಸೇರಿದಂತೆ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.