ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಬಳಿ ಕಳೆದ ನಾಲ್ಕೈದು ದಿನಗಳಿಂದಲೂ ವ್ಯಾಪಕ ಪೊಲೀಸ್ ಭದ್ರತೆ, ಸಿಸಿ ಕ್ಯಾಮೆರಾ ಕಣ್ಗಾವಲಿನ ಜೊತೆಗೆ ದೇವಸ್ಥಾನದ ಸುತ್ತಲಿನ 200 ಮೀಟರು ಪ್ರದೇಶದಲ್ಲಿ ಪ್ರಾಣಿ ಬಲಿ ನಿಷೇಧಿಸಿ, ಹಿರಿಯ ಅಧಿಕಾರಿಗಳೇ ಸ್ಥಳದಲ್ಲೇ ಮೊಕ್ಕಾಂ ಹೂಡಿ, ಕೋಣ ಬಲಿ ತಡೆಯಲು ಇನ್ನಿಲ್ಲದ ಪ್ರಯತ್ನ ಮಾಡಿದರು. ಆದರೆ, ಮತ್ತೊಂದು ಕಡೆ ಹಿಂದಿನಿಂದಲೂ ಬಂದ ಆಚರಣೆ ಏನಾಗಬೇಕಿತ್ತೋ ಅದು ಆಯಿತು ಎಂದು ತಿಳಿದು ಬಂದಿದೆ.
ದುಗ್ಗಮ್ಮನಿಗೆ ಕೋಣ ಬಲಿ ಕೊಡದೇ ಜಾತ್ರೆಯಂತೂ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮೈಯೆಲ್ಲಾ ಕಣ್ಣಾಗಿಸಿ, ದೇವಸ್ಥಾನದ ಪ್ರದೇಶದಲ್ಲಿ ಕಣ್ಗಾವಲಿಟ್ಟಿತ್ತು. ಎಂದಿನಂತೆ ವಾಹನವೊಂದರಲ್ಲಿ ದೇವಿಯ ಕೋಣವನ್ನು ಸುತ್ತಾಡಿಸಿ, ಕಡೆಗೆ ಬುಧವಾರ ಬೆಳಗಿನ ಜಾವ 3.30ರ ವೇಳೆ ವೀರ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದ ಬಳಿ ಪಶು ವೈದ್ಯಕೀಯ ಆಸ್ಪತ್ರೆ ಹಿಂಭಾಗ ದೈವಜ್ಞ ಕಲ್ಯಾಣ ಮಂಟಪದ ಬಳಿ ಇದೇ ಮೊದಲ ಬಾರಿಗೆ ಕೋಣ ವಧೆ ಮಾಡಲಾಯಿತು ಎನ್ನಲಾಗಿದೆ.ಕಟ್ಟುಮಸ್ತಾದ ಇಬ್ಬರು ಮಬ್ಬುಗತ್ತಲಲ್ಲಿ ನೂರಾರು ಜನರ ಮಧ್ಯೆ ಭಕ್ತಿಯ ಉನ್ಮಾದದಲ್ಲಿ ಒಂದು, ಎರಡು, ಮೂರು ಹೀಗೆ ಎಣಿಸುತ್ತಾ ಬಲವಾದ ಆಯುಧಗಳಿಂದ 11 ಹೊಡೆತಕ್ಕೆ ಕೋಣದ ರುಂಡ ಮುಂಡವನ್ನು ಬೇರ್ಪಡಿಸಿ, ಹರ್ಷೋದ್ಘಾರ ದೊಂದಿಗೆ ಬಂದಷ್ಟೇ ವೇಗದಲ್ಲಿ ‘ದುಗ್ಗಮ್ಮ ನಿನ್ನಾಲ್ಕು ಉಧೋ ಉಧೋ ’ಎಂಬುದಾಗಿ ಹರ್ಷೋದ್ಘಾರದೊಂದಿಗೆ ಅಲ್ಲಿಂದ ಸ್ಥಳ ಖಾಲಿ ಮಾಡಿದರು. ಅತ್ತ ದೇವಸ್ಥಾನದ ಬಳಿ ಇದ್ದವರು ಕೋಣ ಅಲ್ಲಿದೆ, ಇಲ್ಲಿದೆಯೆಂಬುದಾಗಿ ಸುದ್ದಿ ಹರಡುತ್ತಲೇ ಇತ್ತು. ಅಷ್ಟರಲ್ಲಿ 11 ಹೊಡೆತಕ್ಕೆ ಬಿತ್ತು ಎಂಬ ಮಾತು ಕೇಳುವುದರೊಂದಿಗೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತಲ್ಲದೇ, ದುಗ್ಗಮ್ಮನ ಜಾತ್ರೆಗೆ ವಿಧ್ಯುಕ್ತ ಚಾಲನೆ ದೊರೆತಂತಾಯಿತು.ಬಲಿ ತಡೆಗೆ ಆಡಳಿತ ಯಂತ್ರ ಕಳೆದ ರಾತ್ರಿಯಿಂದಲೂ ಮೈಯೆಲ್ಲಾ ಕಣ್ಣಾಗಿಸಿಕೊಂಡು, ಕಾಯುತ್ತಿತ್ತು. ಸಮವಸ್ತ್ರಧಾರಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಜೊತೆಗೆ ಮಫ್ತಿಯಲ್ಲಿದ್ದ ಪೊಲೀಸರು ಸಹ ಗುಂಪುಗಳಲ್ಲಿ ಚದುರಿಸಿದ್ದರುದೇವಸ್ಥಾನ ಸುತ್ತಮುತ್ತ, 200 ಮೀಟರ್ ಪರಿಧಿ ವ್ಯಾಪ್ತಿಯಲ್ಲಿ ಎಲ್ಲಿಯೂ ಕೋಣವಾಗಲೀ, ಕುರಿ ಇತರೆ ಪ್ರಾಣಿಗಳಾಗಲೀ ಸುಳಿಯದಂತೆ ಕಟ್ಟೆಚ್ಚರ ವಹಿಸಿದ್ದರು. ಆದರೆ, ಅತ್ತ ದೈವಜ್ಞ ಕಲ್ಯಾಣ ಮಂಟಪದ ಬಳಿ ನಿರ್ಜನ ಪ್ರದೇಶದ ಮಬ್ಬುಗತ್ತಲಿನಲ್ಲಿ 11 ಹೊಡೆತಕ್ಕೆ ಕೋಣ ತಲೆ ತೆಗೆದು, ಆಚರಣೆಯನ್ನು ಮುಗಿಸಿದ ಭಕ್ತರು ಜಯಕಾರ ಹಾಕುತ್ತಾ ಮುಂದಿನ ಕಾರ್ಯಕ್ಕೆ ಅನುವು ಮಾಡಿಕೊಟ್ಟರು. ಕೋಣನ ಬಲಿ ನೀಡಿದರಷ್ಟೇ ದೇವಿ ಕೃಪೆ ತೋರುತ್ತಾಳೆಂಬ ನಂಬಿಕೆ ಇಲ್ಲಿ ಬಲವಾಗಿದೆ.
ಬಲಿ ಆಚರಣೆ ಮುಗಿಯುತ್ತಿದ್ದಂತೆ ಚರಗ ಚೆಲ್ಲುವ ಪ್ರಕ್ರಿಯೆ ಶುರುವಾಯಿತು. ಜೋಳ ಇತರೆ ಧಾನ್ಯಗಳಿಗೆ ಬಲಿಯಾದ ಕೋಣದ ರಕ್ತ ಬೆರೆಸಿ, ಊರಿನ ಎಷ್ಟ ದಿಕ್ಕಿಗೂ ಪುಟ್ಟಿಗಳನ್ನು ತುಂಬಿಕೊಂಡು, ಚರಗ ಚೆಲ್ಲುವ ಪ್ರಕ್ರಿಯೆ ನಡೆಯಿತು. ಯಾವಾಗ ಕೋಣ ಬಲಿ, ಚರಗ ಚೆಲ್ಲುವ ಕಾರ್ಯ ಶುರುವಾಯಿತೋ, ಜನರು ಸಹ ಕೈಗೆ ಸಿಕ್ಕಷ್ಟು, ತಮ್ಮ ತಲೆ ಮೇಲೆ ಬಿದ್ದಷ್ಟು ಚರಕ ಜೋಪಾನ ವಾಗಿಟ್ಟುಕೊಂಡು, ಹರ್ಷೋದ್ಘಾರದೊಂದಿಗೆ ದುಗ್ಗಮ್ಮನಿಗೆ ಜಯಕಾರ ಹಾಕುತ್ತಾ ತಮ್ಮ ಮನಗೆಳಿಗೆ ಮರಳಿದರು.ದುಗ್ಗಮ್ಮ ಜಾತ್ರೆ ಅಂದ್ರೆ ಸುಮ್ನೆ ಅಲ್ಲ, ಖರ್ಚೇನೂ ಕಡಿಮೆ ಇಲ್ಲ!
ದಾವಣಗೆರೆ: ರಾಜ್ಯದ ಪ್ರಮುಖ ಜಾತ್ರೆಗಳಲ್ಲೊಂದಾದ ದಾವಣಗೆರೆ ದುಗ್ಗಮ್ಮನ ಜಾತ್ರೆಗೆ ಲಕ್ಷಾಂತರ ಪ್ರಾಣಿಗಳ ರಕ್ತದೋಕುಳಿ ಚರಂಡಿ, ಒಳ ಚರಂಡಿಗಳ ಮೂಲಕ ಹರಿಯುವ ಜೊತೆಗೆ ನೂರಾರು ಕೋಟಿ ರು.ಗಳ ವಹಿವಾಟಿನ ಮೂಲಕವೂ ಗಮನ ಸೆಳೆಯುತ್ತದೆ.ಮಧ್ಯ ಕರ್ನಾಟಕದ ಪ್ರಮುಖ ಶಕ್ತಿ ದೇವತೆಯೆಂದೇ ಆರಾಧಿಸಲ್ಪಡುವ ದುಗ್ಗಮ್ಮನ ಜಾತ್ರೆಗೆ ಏನೆಲ್ಲವೆಂದರೂ ನೂರಾರು ಕೋಣಗಳು, ಖಾರದ ಅಡುಗೆ ಮಾಡುವವರ ಮನೆಗೆ ಕನಿಷ್ಟ 1ರಿಂದ ಐದಾರು ಕುರಿಗಳು, ಅಸಂಖ್ಯಾತ ಕೋಳಿಗಳ ವಧೆ ಯಾಗುತ್ತದೆ. ಒಂದು ಕುರಿಗೆ ಕನಿಷ್ಟ 15 ಸಾವಿರರಿಂದ 50-60 ಸಾವಿರ ರು.ವರೆಗೆ ಮಾರಾಟವಾಗಿದೆ.