ಸಂಭ್ರಮದಲ್ಲಿ ಮಿಂದೆದ್ದ ಗ್ರಾಮಸ್ಥರು. ಕಂಡಕ್ಟರ್, ಡ್ರೈವರ್ ಗೆ ಸನ್ಮಾನ
ಕನ್ನಡಪ್ರಭ ವಾರ್ತೆ ತುರುವೇಕೆರೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದರೂ ಸಹ ತಮ್ಮೂರಿಗೆ ಬಸ್ ನ ವ್ಯವಸ್ಥೆಯೇ ಇರಲಿಲ್ಲ. ಇಲ್ಲಿಯ ನಿವಾಸಿಗಳು, ವಿದ್ಯಾರ್ಥಿಗಳು ಸುಮಾರು ಒಂದೆರೆಡು ಕಿಮೀ ದೂರ ನಡೆದುಕೊಂಡು ಹೋಗಿ ಬಸ್ ಹತ್ತಬೇಕಿತ್ತು. ಕೆ ಎಸ್ ಆರ್ ಟಿ ಸಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮಾಡಿಕೊಂಡಿದ್ದ ಮನವಿಗಳೆಲ್ಲಾ ಪ್ರಯೋಜನಕ್ಕೆ ಬಾರದಂತಾಗಿದ್ದವು.ಇದು ತಾಲೂಕಿನ ಕೆ.ಮೇಲನಹಳ್ಳಿಯ ಜನರ ಗೋಳಾಗಿತ್ತು. ಈ ಗ್ರಾಮದ ಕಾಂಗ್ರೆಸ್ ಮುಖಂಡ, ಸಿ.ಎಸ್. ಪುರ ಬ್ಲಾಕ್ ಎಸ್ಸಿ ಘಟಕದ ಅಧ್ಯಕ್ಷ ಎಂ.ಕೆ.ಮಂಜಯ್ಯ ಮತ್ತು ಮಧುಸೂಧನ್ ತಮ್ಮ ಗ್ರಾಮದ ಜನರು ಪಡುತ್ತಿರುವ ಸಂಕಟವನ್ನು ತಮ್ಮ ಪಕ್ಷದ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಗುಡ್ಡೇನಹಳ್ಳಿ ಪ್ರಸನ್ನಕುಮಾರ್ ರವರ ಗಮನಕ್ಕೂ ತಂದರು. ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಸಭೆ ವೇಳೆ ಗುಡ್ಡೇನಹಳ್ಳಿ ಪ್ರಸನ್ನ ಕುಮಾರ್, ಕೆ ಎಸ್ ಆರ್ ಟಿ ಸಿ ನಿಗಮದ ಅಧ್ಯಕ್ಷರಾಗಿರುವ ಶಾಸಕ ಗುಬ್ಬಿ ಶ್ರೀನಿವಾಸ್ ಹಾಗೂ ಜಿಲ್ಲಾ ಸಂಚಾರ ನಿಗಮದ ಅಧಿಕಾರಿಗಳಾದ ಚಂದ್ರಶೇಖರ್ ರವರ ಗಮನಕ್ಕೆ ತಂದು ಕೂಡಲೇ ಕೆ.ಮೇಲನಹಳ್ಳಿಗೆ ಬಸ್ ಸಂಚಾರದ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.
ಸಂಭ್ರಮಾಚರಣೆ: ಒತ್ತಡಕ್ಕೆ ಮಣಿದು ಕೆ ಎಸ್ ಆರ್ ಟಿ ಸಿ ಮೇಲಾಧಿಕಾರಿಗಳ ಸೂಚನೆ ಮೇರೆಗೆ ಕೆ ಎಸ್ ಆರ್ ಟಿ ಸಿ ಬಸ್ ಕೆ.ಮೇಲನಹಳ್ಳಿ ಗ್ರಾಮಕ್ಕೆ ಬಂದೇ ಬಿಟ್ಟಿತು. ಬಸ್ ಬಂದ ಖುಷಿಗೆ ಗ್ರಾಮಸ್ಥರು ಬಸ್ ಬರುವ ಹಾದಿಯನ್ನು ಸ್ವಚ್ಛಗೊಳಿಸಿ, ರಂಗೋಲಿ ಹಾಕಿದರು. ಗ್ರಾಮದ ದೇವಾಲಯ ಮತ್ತು ಪ್ರಮುಖ ಬೀದಿಗಳನ್ನು ತಳಿರು ತೋರಣಗಳಿಂದ ಅಲಂಕರಿಸಿದರು. ಬಸ್ಸನ್ನೂ ಅಲಂಕರಿಸಿದರು. ಪಟಾಕಿ ಸಿಡಿಸಿದರು. ಬಸ್ ನ ಡ್ರೈವರ್ ಮತ್ತು ಕಂಡಕ್ಟರ್ ರಿಗೆ ಶಾಲು, ಹಾರ ಹಾಕಿ ಸನ್ಮಾನಿಸಿದರು. ಗ್ರಾಮದ ಜನರಿಗೆಲ್ಲಾ ಸಿಹಿ ಹಂಚಿ ಸಂಭ್ರಮಿಸಿದರು.ತಮ್ಮ ಗ್ರಾಮಕ್ಕೆ ಬಸ್ ಬರಲು ಕಾರಣೀಭೂತರಾಗಿದ್ದ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಗುಡ್ಡೇನಹಳ್ಳಿ ಪ್ರಸನ್ನಕುಮಾರ್, ಎಂ.ಕೆ. ಮಂಜಯ್ಯ, ಮಧುಸೂಧನ್, ಮುಖಂಡ ಗುಡ್ಡೇನಹಳ್ಳಿ ನಂಜುಂಡಪ್ಪರವರನ್ನು ಗೌರವಿಸಲಾಯಿತು. ಅಧಿಕಾರಿಗಳಿಗೂ ಜಯಕಾರ ಹಾಕಿದರು. ಸ್ವಾತಂತ್ರ್ಯಾ ನಂತರ ತಮ್ಮ ಗ್ರಾಮಕ್ಕೆ ಬಸ್ ಬಂದದ್ದು ಗ್ರಾಮಸ್ಥರಿಗೆ ಹರ್ಷ ತಂದಿತ್ತು.
ಸದ್ಯ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಕೆ.ಮೇಲನಹಳ್ಳಿಗೆ ಬೆಳಗ್ಗೆ 7.30 ಗಂಟೆಗೆ ಬಸ್ ಬಿಡಲಾಗಿದೆ. ತದ ನಂತರದ ದಿನಗಳಲ್ಲಿ ಸಾಯಂಕಾಲದ ವೇಳೆಯೂ ಬಸ್ ಆ ಗ್ರಾಮಕ್ಕೆ ತೆರಳಲು ವ್ಯವಸ್ಥೆ ಮಾಡಲಾಗುವುದು ಎಂದು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಗುಡ್ಡೇನಹಳ್ಳಿ ಪ್ರಸನ್ನ ಕುಮಾರ್ ಭರವಸೆ ನೀಡಿದ್ದಾರೆ.