ಕನ್ನಡಪ್ರಭ ವಾರ್ತೆ ಪಾಂಡವಪುರ
ಚುನಾವಣೆಯಲ್ಲಿ 10 ಸ್ಥಾನಗಳ ಪೈಕಿ 9 ಸ್ಥಾನಗಳಲ್ಲಿ ರೈತಸಂಘ ಬೆಂಬಲಿತರು ಗೆಲುವು ದಾಖಲಿಸಿದ್ದಾರೆ. 2022ರಿಂದ ಸೂಪರ್ ಸೀಡ್ ನಲ್ಲಿದ್ದ ನಾರಾಯಣಪುರ ಡೇರಿ ನಿರ್ದೇಶಕ ಸ್ಥಾನಗಳಿಗೆ ನಡೆಗೆ ಚುನಾವಣೆಯಲ್ಲಿ ರೈತ ಸಂಘದ ಬೆಂಬಲಿತರಾದ ಎನ್.ಬಿ.ಅನಿಲ್ ಕುಮಾರ್, ಮರಿಗೌಡ, ಎನ್.ವಿ.ರವಿ, ಎನ್.ಎಸ್.ಸೋಮು, ಯೋಗೇಶ್, ಕೃಷ್ಣೇಗೌಡ, ನಯನ, ಮಂಜುಳಾ, ರಾಧಮ್ಮ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ದಯಾನಂದ ಅವರು ಚುನಾಯಿತರಾದರು.
ಉಳಿದಂತೆ ಪರಿಶಿಷ್ಟ ಪಂಗಡದಿಂದ ಶಾರದಮ್ಮ ಅವಿರೋಧ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಹೇಮಲತಾ ಕಾರ್ಯ ನಿರ್ವಹಿಸಿದರು. ಈ ವೇಳೆ ರೈತಸಂಘದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.ವಿಜೇತ ನಿರ್ದೇಶಕರನ್ನು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಭಿನಂದಿಸಿ ಮಾತನಾಡಿ, ಸಹಕಾರಿ ಕ್ಷೇತ್ರವನ್ನು ಉತ್ತಮವಾಗಿ ನಡೆಸಿಕೊಂಡು ಹೋಗಬೇಕು. ಪ್ರತಿಯೊಬ್ಬ ನಿರ್ದೇಶಕರು ಸಹಕಾರ ಕ್ಷೇತ್ರದ ಉನ್ನತಿಗೆ ಶ್ರಮಿಸಬೇಕು ಎಂದರು.
ನಾರಾಯಣಪುರ ಡೇರಿ ಸೂಪರ್ ಸೀಡ್ ಆಗಿತ್ತು. ತನಿಖೆ ವರದಿ ಬಂದ ನಂತರ ಚುನಾವಣೆ ನಡೆದು 9 ಮಂದಿ ರೈತಸಂಘದ ಬೆಂಬಲಿತರು ಗೆಲುವು ಸಾಧಿಸಿದ್ದಾರೆ. ಎಲ್ಲರನ್ನು ಅಭಿನಂದಿಸುತ್ತೇನೆ ಎಂದರು.ರೈತಸಂಘದ ಯುವ ಮುಖಂಡ ರಘುಕುಮಾರ್ ಮಾತನಾಡಿ, ರೈತಸಂಘದ ಬೆಂಬಲಿತರು ಇದೇ ಪ್ರಥಮ ಬಾರಿಗೆ ಗೆಲುವು ಸಾಧಿಸಿದ್ದಾರೆ. ಇದು ಕಾರ್ಯಕರ್ತರ ಗೆಲುವಾಗಿದೆ. ಈ ಗೆಲುವಿಗೆ ಕಾರಣರಾದ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಲಾಗುವುದು ಎಂದರು. ಜತೆಗೆ ಮುಂಬರುವ ವಿಧಾನಸಭೆ ಹಾಗೂ ಸ್ಥಳೀಯ ಚುನಾವಣೆಗಳಿಗೆ ಡೇರಿ ಚುನಾವಣೆಯು ಗೆಲುವಿನ ದಿಕ್ಸೂಚಿಯಾಗಲಿದೆ ಎಂದರು.
ಈ ವೇಳೆ ಯಜಮಾನರಾದ ಎಸ್.ಸ್ವಾಮಿ, ಗ್ರಾಪಂ ಸದಸ್ಯರಾದ ಶಿವಕುಮಾರ್, ದೊಡ್ಡನರಸಶೆಟ್ಟಿ, ರೈತಸಂಘ ಮುಖಂಡರಾದ ಎನ್.ಎಸ್.ಪುಟ್ಟಸ್ವಾಮಿಗೌಡ, ಎನ್.ಬಿ.ಪುಟ್ಟರಾಜೇಗೌಡ,ಎನ್.ಎಸ್.ರಘುಕುಮಾರ್, ಮನುಕುಮಾರ್, ನಾಗರಾಜು, ಸೋಮು, ವರದರಾಜು, ವೆಂಕಟಪ್ಪ, ಗುಣೇಂದ್ರ, ಎನ್.ಎಸ್.ಗಂಗಾಧರ, ಹೋಟೆಲ್ ಮಹೇಂದ್ರ, ಎನ್.ವಿ.ಗೋಪಾಲ್, ಜವರಯ್ಯ, ಮಂಜುನಾಥ್, ಬ್ಯಾಂಕ್ ಸುನೀಲ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಗವಿ ಜವರಯ್ಯ, ರಮೇಶ್, ಚಂದನ್, ದಿಲೀಪ, ಗ್ರಾಮಸ್ಥರು, ಯುವಕರು ಇತರರಿದ್ದರು.