ಕನ್ನಡಪ್ರಭ ವಾರ್ತೆ ಹುಣಸೂರು
ಪಟ್ಟಣದ ಹನುಮಂತೋತ್ಸವ ಸಮಿತಿ ಮತ್ತು ಹಿಂದೂಪರ ಸಂಘಟನೆಗಳು ಆಯೋಜಿಸಿರುವ ಮೂರು ದಿನಗಳ ಕಾಲ ಆಯೋಜನೆಗೊಂಡಿರುವ 30ನೇ ವರ್ಷದ ಹನುಮ ಜಯಂತಿ ಅಂಗವಾಗಿ ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಆಂಜನೇಯಸ್ವಾಮಿಯ ಬೃಹತ್ ಮೂರ್ತಿಯ ಪ್ರತಿಷ್ಠಾಪನೆ ನಡೆಸುವ ಮೂಲಕ ಜಯಂತ್ಯುತ್ಸವಕ್ಕೆ ಚಾಲನೆ ನೀಡಲಾಯಿತು.ಪಟ್ಟಣದಲ್ಲಿ ಶುಕ್ರವಾರ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಬೃಹದಾಕಾರದ ಆಂಜನೇಯಸ್ವಾಮಿ ದೇವರ ಮೂರ್ತಿಗೆ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಡೆಸಿದ ನಂತರ ದೇವಾಲಯದಿಂದ ಮುನೇಶ್ವರ ಕಾವಲ್ ಮೈದಾನದವರೆಗೆ ಮೆರವಣಿಗೆ ಮೂಲಕ ಆಂಜನೇಯಸ್ವಾಮಿ, ಸೀತಾ ಮಾತೆಯನ್ನೊಳಗೊಂಡ ಶ್ರೀರಾಮ ಲಕ್ಷ್ಮಣರ ಪಂಚಲೋಹದ ಮೂರ್ತಿಯೊಂದಿಗೆ ಕರೆ ತರಲಾಯಿತು. ಮೆರವಣಿಗೆಯು ದೇವಾಲಯದಿಂದ ಮೈಸೂರು-ಹುಣಸೂರು ಮುಖ್ಯರಸ್ತೆಯ ಕಲ್ಪತರು ವೃತ್ತ, ಸರಸ್ವತಿಪುರಂ ಮೂಲಕ ವಿಶ್ವೇಶ್ವರಯ್ಯ ವೃತ್ತ, ಗಣೇಶನಗುಡಿ ಬೀದಿ, ಬ್ರಾಹ್ಮಣರ ಬೀದಿಯಿಂದ ಮುನೇಶ್ವರ ಕಾವಲ್ ಮೈದಾನದಲ್ಲಿ ತಂದು ಪ್ರತಿಷ್ಠಾಪಿಸಲಾಯಿತು. ಮೆರವಣಿಗೆ ಉದ್ದಕ್ಕೂ ಭಕ್ತರು ಮನೆಮನೆಯಲ್ಲಿ ಪೂಜೆ ಸಲ್ಲಿಸಿ ಕೃತಾರ್ಥತೆ ಅನುಭವಿಸಿದರು.
ದೇವಾಲಯದ ಆವರಣದಲ್ಲಿ ಮೆರವಣಿಗೆಗೆ ಗಾವಡಗೆರೆ ಶ್ರೀ ಗುರುಲಿಂಗ ಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮೀಜಿ ಚಾಲನೆ ನೀಡಿ ಮಾತನಾಡಿ, ಆಂಜನೇಯಸ್ವಾಮಿ ಜಯಂತಿ ತಾಲೂಕಿನ ಜನರ ಬದುಕಿಗೆ ಸಂತೋಷ, ಅಭಿವೃದ್ಧಿ ನೆಮ್ಮದಿಯ ಸಂಕೇತವಾಗಿ ನಡದುಕೊಂಡು ಬಂದಿದೆ. ಮೈಸೂರಿನ ನಾಡಹಬ್ಬ ದಸರಾ ಉತ್ಸವದಂತೆ ಹುಣಸೂರಿನ ಸಮಸ್ತ ಜನರು ಹನುಮ ಜಯಂತಿ ಆಚರಣೆ ಶ್ರದ್ಧಾಭಕ್ತಿಗಳಿಂದ ಆಚರಿಸುತ್ತಿದ್ದು, ಹನುಮನ ಆಶೀರ್ವಾದದೊಂದಿಗೆ ತಾಲೂಕಿನ ಸಮಸ್ತ ಜನರಿಗೆ ಶುಭವಾಗಲಿ ಎಂದು ಹಾರೈಸಿದರು.ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಮಾತನಾಡಿದರು. ಹನುಮಂತೋತ್ಸವ ಸಮಿತಿ ಅಧ್ಯಕ್ಷ ವಿ.ಎನ್. ದಾಸ್, ಬಿ.ಎಸ್. ಯೋಗಾನಂದಕುಮಾರ್, ಅನಿಲ್, ಅಪ್ಪಣ್ಣ, ಸುಬ್ಬರಾವ್, ಡಿ.ಕೆ. ಕುನ್ನೇಗೌಡ, ವರದರಾಜ ಪಿಳ್ಳೆ, ಕೃಷ್ಣ, ಕುಮಾರ್ ಇದ್ದರು.
------------------