ಕನ್ನಡಪ್ರಭ ವಾರ್ತೆ ತುಮಕೂರುನಗರದ ಅಂತರಸನಹಳ್ಳಿ ಹೂವು, ಹಣ್ಣು, ತರಕಾರಿ ಮಾರುಕಟ್ಟೆಯ ಅವ್ಯವಸ್ಥೆ ಸರಿಪಡಿಸಿ, ಸ್ವಚ್ಛತೆ ಕಾಪಾಡಿ ಅಗತ್ಯ ಸೌಕರ್ಯ ಒದಗಿಸಿ ನಾಗರೀಕರಿಗೆ ನೆರವಾಗಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎನ್.ಅರುಣ್‌ಕುಮಾರ್ ನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜಗೆ ಬುಧವಾರ ಮನವಿ ಮಾಡಿದರು.
ಮಾರುಕಟ್ಟೆ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸದ ಗುಡ್ಡೆಗಳು ಕಂಡು ಬರುತ್ತವೆ. ಮಾರುಕಟ್ಟೆಯೊಳಗೆ ವಾಹನಗಳ ಸಂಚಾರ ನಿರ್ಬಂಧವಿದ್ದರೂ ನಿಯಂತ್ರಣವಿಲ್ಲ, ಅಡ್ಡದಿಡ್ಡಿ ವಾಹನಗಳನ್ನು ನಿಲ್ಲಿಸುವುದರಿಂದ ವ್ಯಾಪಾರಿಗಳಿಗೆ, ಗ್ರಾಹಕರಿಗೆ ತೊಂದರೆಯಾಗುತ್ತದೆ. ಇಲ್ಲಿ ಸಾರ್ವಜನಿಕ ಶೌಚಾಲಯವಿದ್ದರೂ ಬಳಸದೆ ಬಯಲಿನಲ್ಲೇ ಮಲ, ಮೂತ್ರ ವಿಸರ್ಜನೆ ಮಾಡುವುದರಿಂದ ದುರ್ವಾಸನೆ ಹೆಚ್ಚಾಗಿದೆ ಎಂದು ಹೇಳಿದರು.
ನಿತ್ಯ ಸಾವಿರಾರು ಜನ ಬಂದು ಹೋಗುತ್ತಾರೆ. ಮಾರುಕಟ್ಟೆಯ ಈ ದುರಾವಸ್ಥೆ, ಕಲುಶಿತ ವಾತಾವರಣದಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ. ಸಂಬಂಧಿಸಿದ ಅಧಿಕಾರಿಗಳು ಈ ಕೂಡಲೇ ಇಲ್ಲಿನ ಸಮಸ್ಯೆಗಳನ್ನು ನಿವಾರಿಸಿ, ಮಾರುಕಟ್ಟೆಯಲ್ಲಿ ಸ್ವಚ್ಛತೆ, ಸುವ್ಯವಸ್ಥಿತ ವಾತಾವರಣ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.ಮುಖಂಡರಾದ ಅಶೋಕ್ ಕನ್ನಡಿಗ, ಟಿ.ಸ್ವಾಮಿ, ಲಕ್ಷಮ್ಮ, ಅಶ್ವಿನಿ, ಸಿದ್ದಿಕ್ ಖಾನ್, ಮೋಸಸ್, ಮುರ್ತಜ, ದೇವರಾಜು, ಶ್ರೀನಿವಾಸ್, ಯಶಸ್, ಸುಭಾನ್ ಖಾನ್ ಹಾಜರಿದ್ದರು.