ನಕಲಿ ಔಷಧ ಪೂರೈಕೆ ತನಿಖೆಗೆ ಒತ್ತಾಯ

KannadaprabhaNewsNetwork |  
Published : Dec 09, 2024, 12:49 AM IST

ಸಾರಾಂಶ

ರಾಜ್ಯದ ವಿವಿಧೆಡೆ ಗರ್ಭಿಣಿ, ಬಾಣಂತಿಯರು, ನವಜಾತ ಶಿಶುಗಳ ಸಾವುಗಳು ಸಂಭ‍ವಿಸುತ್ತಿದ್ದರೂ, ನಕಲಿ ಔಷಧಿ ಪೂರೈಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಸಚಿವ ದಿನೇಶ ಗುಂಡೂರಾವ್, ಶರಣು ಪ್ರಕಾಶ ಪಾಟೀಲ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆರಾಜ್ಯದ ವಿವಿಧೆಡೆ ಗರ್ಭಿಣಿ, ಬಾಣಂತಿಯರು, ನವಜಾತ ಶಿಶುಗಳ ಸಾವುಗಳು ಸಂಭ‍ವಿಸುತ್ತಿದ್ದರೂ, ನಕಲಿ ಔಷಧಿ ಪೂರೈಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಸಚಿವ ದಿನೇಶ ಗುಂಡೂರಾವ್, ಶರಣು ಪ್ರಕಾಶ ಪಾಟೀಲ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯೊಂದರಲ್ಲೇ ಕಳೆದ 7 ತಿಂಗಳಲ್ಲಿ 135 ನವಜಾತ ಶಿಶುಗಳು ಸಾವನ್ನಪ್ಪಿದ್ದು, ರಾಜ್ಯದಲ್ಲಿ ಸುಮಾರು 300 ಬಾಣಂತಿಯರ ಸಾವು ಸಂಭವಿಸಿದೆ. ಇಷ್ಟೆಲ್ಲಾ ಲೋಪದೋಷವಿದ್ದರೂ ಹಾಸನ ಸಮಾವೇಶದಲ್ಲಿ ತಮ್ಮನ್ನು ತಾವೇ ವೈಭ‍ವೀಕರಿಸಿಕೊಳ್ಳುವ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ ಎಂದರು. ಶಿಶು, ಬಾಣಂತಿಯರ ಸಾವುಗಳು ಸಂಭವಿಸುತ್ತಿದ್ದರೂ ಸಚಿವರಾದವರು ಆಸ್ಪತ್ರೆಗಳಿಗೆ ಭೇಟಿ ನೀಡಿ, ಪರಿಶೀಲಿಸುವ ಕೆಲಸ ಮಾಡುತ್ತಿಲ್ಲ. ದಾವಣಗೆರೆ ಜಿಲ್ಲಾ ಆಸ್ಪತ್ರೆಗೂ ಯಾವೊಬ್ಬ ಮಂತ್ರಿಗಳೂ ಭೇಟಿ ನೀಡಿಲ್ಲ, ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ಮಾಡಿಲ್ಲ. ನಕಲಿ ಔಷಧಿ ಪೂರೈಕೆಯೇ ಅಮಾಯಕ ಹೆಣ್ಣು ಮಕ್ಕಳ ಸಾವಿಗೆ ಕಾರಣ‍ವಾಗಿದೆ. ನಕಲಿ ಔಷಧದ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. ನಕಲಿ ಔಷಧವನ್ನು ಆಸ್ಪತ್ರೆಗಳಿಗೆ ಯಾರು ಪೂರೈಸಿದ್ದಾರೆಂಬ ಬಗ್ಗೆ ತನಿಖೆಯಾಗಬೇಕು. ತಕ್ಷಣವೇ ದಿನೇಶ ಗುಂಡೂರಾವ್‌, ಶರಣು ಪ್ರಕಾಶ ಪಾಟೀಲ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ, ತನಿಖೆಗೆ ಅವಕಾಶ ಮಾಡಿಕೊಡಬೇಕು. ದಾವಣಗೆರೆ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಗರ್ಭಿಣಿ, ಬಾಣಂತಿಯರು, ಕೂಸುಗಳ ಸಾವಿನ ಪ್ರಕರಣವನ್ನು ಸರ್ಕಾರ ಲಘುವಾಗಿ ಪರಿಗಣಿಸದೇ, ತನಿಖೆಗೆ ಮುಂದಾಗಲಿ ಎಂದು ಹೇಳಿದರು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಮ್ಮ ಕುರ್ಚಿ ಭದ್ರವಾಗಿಲ್ಲವೆಂಬ ಅರಿವಿದೆ. ಭ್ರಷ್ಟಾಚಾರದಿಂದಾಗಿಯೇ ತಮ್ಮ ಸ್ಥಾನ ಕಳೆದುಕೊಳ್ಳುವ ವಿಚಾರವಂತೂ ಸ್ವತಃ ಸಿದ್ದರಾಮಯ್ಯ ನವರಿಗೆ ಅರಿವಿದೆ ಎಂದರು. ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ, ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದೂ ಅಷ್ಟೇ ಸತ್ಯ. ವಾಲ್ಮೀಕಿ ನಿಗಮ, ಮುಡಾ ಸೇರಿದಂತೆ ಕಾಂಗ್ರೆಸ್ ಸರ್ಕಾರವು ಬರೀ ಹಗರಣಗಳಲ್ಲೇ ಮುಳುಗಿ ಹೋಗಿದೆ. ಇದೀಗ ಮುಖ್ಯಮಂತ್ರಿ ಕುರ್ಚಿಗೆ ಭ್ರಷ್ಟಾಚಾರದ ಬೇರು ವ್ಯಾಪಿಸಿವೆ. ಮುಡಾ ಸೈಟ್‌ ಹಗರಣಗಲ್ಲಿ ಸಿದ್ದರಾಮಯ್ಯನವರು ಸಿಎಂ ಕುರ್ಚಿ ಕಳೆದುಕೊಳ್ಳುವುದೂ ಅಷ್ಟೇ ನಿಜ. ಕಾಂಗ್ರೆಸ್ ಅಧಿಕಾರ ಶೇರಿಂಗ್ ಆಗಿದೆ ಎಂದು ಅವರು ಹೇಳಿದರು. ಕಾಂಗ್ರೆಸ್ ಸರ್ಕಾರವು ಹಾಸನದಲ್ಲಿ ಸಮಾವೇಶ ಮಾಡಿದೆ. ಸಿದ್ದರಾಮಯ್ಯ ತಮ್ಮ ರಾಜಕೀಯದ ಕೊನೆಯ ದಿನಗಳೆನ್ನುವ ಮೂಲಕ ಕುರ್ಚಿ ಗ್ಯಾರಂಟಿ ಇಲ್ಲವೆಂಬ ಸುಳಿವವನ್ನು ಹೊರ ಹಾಕಿದ್ದಾರೆ. ಮತ್ತೊಂದು ಕಡೆ ಮತಾಂಧ ಜಮೀರ್ ಅಹಮ್ಮದ್ ಸೂಚನೆ ಮೇರೆ ಸಾರ್ವಜನಿಕರು, ರೈತರು, ಮಠ ಮಂದಿರಗಳ ಆಸ್ತಿ, ಜಮೀನು, ಜಾಗವನ್ನು ವಕ್ಫ್ ಮಂಡಳಿಗೆ ಸೇರಿಸಿದ್ದಾರೆ ಎಂದು ರೇಣುಕಾಚಾರ್ಯ ದೂರಿದರು. ಪಕ್ಷದ ಮುಖಂಡರಾದ ಪಿ.ಸಿ. ಶ್ರೀನಿವಾಸ ಭಟ್, ರಾಜು ವೀರಣ್ಣ, ಪ್ರವೀಣ ಜಾಧವ್, ಧನುಷ್ ರೆಡ್ಡಿ, ಮಂಜು, ರಾಜು, ಬಸವರಾಜ ಇತರರು ಇದ್ದರು. ಯತ್ನಾಳ್ ಬಗ್ಗೆ ರೇಣು ಮೆದು ಧೋರಣೆ!ಬಿಜೆಪಿ ವರಿಷ್ಟರ ಮುಂದೆ ಎಲ್ಲವನ್ನೂ ಹೇಳಿದ್ದೇವೆ. ಈಗ ಮತ್ತೆ ಪರ, ವಿರೋಧ ಚರ್ಚೆಗಳೇ ಬೇಡ. ಅದರ ಬಗ್ಗೆ ನಾವು ಏನನ್ನೂ ಹೇಳುವುದಿಲ್ಲ ಎನ್ನುವ ಮೂಲಕ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್‌ ಬಗ್ಗೆ ಮೆದು ಧೋರಣೆ ತಾಳಿದರು. ಅನವಶ್ಯಕ ಚರ್ಚಿಸಿ ನಮ್ಮ ರಾಜ್ಯ, ರಾಷ್ಟ್ರೀಯ ನಾಯಕರಿಗೆ ಮುಜುಗರವನ್ನುಂಟು ಮಾಡುವ ಕೆಲಸ ಮಾಡುವುದಿಲ್ಲ. ಮಾಧ್ಯಮಗಳ ಮುಂದೆ ನಾನು ಯಾವುದನ್ನೂ ಬಹಿರಂಗವಾಗಿ ಮಾತನಾಡುವುದಿಲ್ಲ. ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ನಾವ್ಯಾರೂ ಅಲ್ಲ. ಪರ ವಿರೋಧ ಮಾತನಾಡಿದರೆ, ತಪ್ಪು ಸಂದೇಶ ಹೋಗುತ್ತದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದರು.........................(ಫೋಟೋ ಬರಲಿದೆ)........................(ಫೋಟೋ ಬರಲಿದೆ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!