ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಶೀಘ್ರ ಭತ್ತ ಮತ್ತು ರಾಗಿ ಖರೀದಿ ಕೇಂದ್ರ ತೆರೆಯುವುದು, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಬಿಡುಗಡೆ, ರೈತ ಪಹಣಿಯಲ್ಲಿ ನಮೂದಾಗಿರುವ ವಕ್ಫ್ ಹೆಸರನ್ನು ತೆಗೆದು ಹಾಕುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ರಾಜ್ಯ ರೈತ ಸಂಘದ ಕಾರ್ಯಕರ್ತರು ಪತ್ರಿಭಟನೆ ನಡೆಸಿದರು.ಪಟ್ಟಣದ ತಾಲೂಕು ಕಚೇರಿ ಎದುರು ಜಮಾವಣೆಗೊಂಡ ಕಾರ್ಯಕರ್ತರು ಸರ್ಕಾರ ಹಾಗೂ ತಾಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.
ರೈತರ ಪಂಪ್‌ಸೆಟ್‌ಗಳಿಗೆ ಸರಬರಾಜು ಮಾಡುತ್ತಿರುವ ವಿದ್ಯುತನ್ನು ಹಗಲು ವೇಳೆ 10 ಗಂಟೆಗಳ ಕಾಲ ಸರಬರಾಜು ಮಾಡಲು ಕ್ರಮ ವಹಿಸಬೇಕು. ಈ ಹಿಂದಿನ ಮಾದರಿಯಲ್ಲೇ ಹೊಸದಾಗಿ ಕೊಳವೆ ಬಾವಿ ಕೊರೆಸುವ ರೈತರಿಗೆ ವಿದ್ಯುತ್ ಸರಬರಾಜು ಮಾಡಬೇಕು. ಸರ್ಕಾರಿ ಜಮೀನು ಮತ್ತು ಅರಣ್ಯ ಭೂಮಿಯನ್ನು ಖಾಸಗಿಯವರು ಒತ್ತುವರಿ ಮಾಡುತ್ತಿದ್ದು, ಸರ್ಕಾರ ಕೂಡಲೇ ತಡೆಗಟ್ಟಬೇಕು. ಜೊತೆಗೆ ತಾಲೂಕಿನ ಕರೀಘಟ್ಟ ಗ್ರಾಮದ ಸರ್ವೇ ನಂ. 15ರಲ್ಲಿ ರಸ್ತೆ ಸೇರಿಸಿ ದುರಸ್ತಿ ಮಾಡಿರುವುದನ್ನು ಕೂಡಲೇ ರದ್ದುಪಡಿಸಿ ರೈತರು ತಿರುಗಾಡಲು ಎಂದಿನಂತೆ ರಸ್ತೆ ನಿರ್ಮಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಕಳೆದ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ಬಾಕಿಯನ್ನು ಕೂಡಲೇ ಪಾವತಿಸಲು ಕ್ರಮ ವಹಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ರೈತರು ಹಾಗೂ ಸಾರ್ವಜನಿಕರಿಗೆ ಕೆಲಸ, ಕಾರ್ಯಗಳು ವಿಳಂಭವಾಗುತ್ತಿದ್ದು, ಈ ಬಗ್ಗೆ ತಾಲೂಕು ಆಡಳಿತ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು. ನಮ್ಮೆಲ್ಲಾ ಬೇಡಿಕೆಗಳು ಶೀಘ್ರ ಈಡೇರದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸಂಘಟನೆ ಜಿಲ್ಲಾಧ್ಯಕ್ಷ ಕೆಂಪೂಗೌಡ, ತಾಲೂಕು ಅಧ್ಯಕ್ಷ ಮರಳಗಾಲ ಕೃಷ್ಣೇಗೌಡ, ದೊಡ್ಡಪಾಳ್ಯ ಜಯರಾಂ, ಪಾಂಡು, ಕಡತನಾಳು ಬಾಲಣ್ಣ, ಪಾಲಹಳ್ಳಿ ರಾಮೇಗೌಡ, ಪುರಷೋತ್ತಮ, ಚಂದ್ರು, ಪಿಲಿಪ್ಸ್, ದಲಿತ ಸಂಘಟನೆ ಕುಬೇರಪ್ಪ, ರವಿಚಂದ್ರ, ಕುಮಾರ್, ಪ್ರಿಯಾ ರಮೇಶ್, ಶಂಕರೇಗೌಡ, ಶ್ರೀಕಂಠು, ಬಿ.ಎಸ್ ರಮೇಶ್, ಡಿ.ಎಂ ರವಿ, ನಾಗೇಂಧ್ರಸ್ವಾಮಿ, ಮೇಳಾಪುರ ಸ್ವಾಮೀಗೌಡ, ಪಾಲಹಳ್ಳಿ ರಮೇಶ್ ಸೇರಿ ನೂರಾರು ರೈತ ಸಂಘಟನೆ ಕಾರ್ಯಕರ್ತರು ಹಾಜರಿದ್ದರು.