ಗದಗ: ಜಿಲ್ಲೆಯ ಪ್ರಸಿದ್ಧ ಐತಿಹಾಸಿಕ ತಾಣ ಲಕ್ಕುಂಡಿ ಈಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದು, ಭಾನುವಾರ ಮತ್ತು ಸೋಮವಾರ ವಿದೇಶಿ ತಜ್ಞರ ಭೇಟಿಯ ಮೂಲಕ ಗಮನ ಸೆಳೆಯುತ್ತಿದ್ದು, ಇತ್ತ ಉತ್ಖನನ ಕಾರ್ಯವೂ ಮುಂದುವರಿಯಿತು.
ಡೆಕ್ಕನ್ ಹೆರಿಟೇಜ್ ಫೌಂಡೇಶನ್‌ನ ಮುಖ್ಯಸ್ಥರಾದ ಡಾ. ಹೆಲೆನ್ ನೇತೃತ್ವದ ತಜ್ಞರ ತಂಡ ಲಕ್ಕುಂಡಿಗೆ ಭೇಟಿ ನೀಡಿ, ಇಲ್ಲಿನ ಪ್ರಾಚ್ಯಾವಶೇಷಗಳು ಹಾಗೂ ದೇವಸ್ಥಾನಗಳ ವಾಸ್ತುಶಿಲ್ಪವನ್ನು ಕೂಲಂಕಷವಾಗಿ ಪರಿಶೀಲಿಸಿತು. ಸುಮಾರು 3 ಎಕರೆ ಜಾಗದಲ್ಲಿ ಹರಡಿರುವ ಬಯಲು ವಸ್ತು ಸಂಗ್ರಹಾಲಯವನ್ನು ಅತ್ಯಾಧುನಿಕ ಹಾಗೂ ಪ್ರವಾಸಿಸ್ನೇಹಿಯನ್ನಾಗಿ ರೂಪಿಸಲು ಈ ತಂಡ ಯೋಜನೆ ಸಿದ್ಧಪಡಿಸುತ್ತಿದೆ.
ನೂತನ ಯೋಜನೆ: ರಾಜ್ಯ ಸರ್ಕಾರವು ಲಕ್ಕುಂಡಿ ಅಭಿವೃದ್ಧಿಗೆ ₹2.25 ಕೋಟಿ ಅನುದಾನ ಮೀಸಲಿಟ್ಟಿದ್ದು, ವಿದೇಶಿ ಸಂಸ್ಥೆಯು ಸರ್ಕಾರದ ಟೆಂಡರ್ ಪಡೆದು ಈ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆ. ಶೀಘ್ರದಲ್ಲೇ ಈ ತಂಡವು ಸಮಗ್ರ ಪ್ರೊಜೆಕ್ಟ್ ರಿಪೋರ್ಟ್ ಸಿದ್ಧಪಡಿಸಲಿದೆ. ಪ್ರವಾಸಿಗರಿಗೆ ನೆರವಾಗಲು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಶೇಷ ಗೈಡ್ ಬುಕ್ ಸಿದ್ಧಪಡಿಸುವ ಜವಾಬ್ದಾರಿಯನ್ನು ಫೌಂಡೇಶನ್ ನಿರ್ವಹಿಸಲಿದ್ದು, ಇದರಿಂದಾಗಿ ಲಕ್ಕುಂಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಮೆರುಗು ದೊರೆಯಲಿದೆ.15ನೇ ದಿನದ ಉತ್ಖನನ: ಇನ್ನೊಂದೆಡೆ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ನಡೆಯುತ್ತಿರುವ ಉತ್ಖನನವು ಸೋಮವಾರ 15ನೇ ದಿನಕ್ಕೆ ಕಾಲಿಟ್ಟಿದೆ. ಈ ಪ್ರಕ್ರಿಯೆಯಲ್ಲಿ ಇದುವರೆಗೆ 40ಕ್ಕೂ ಹೆಚ್ಚು ಅಪರೂಪದ ಪ್ರಾಚೀನ ಪ್ರಾಚ್ಯಾವಶೇಷಗಳು ಪತ್ತೆಯಾಗಿವೆ. ವಿಶೇಷವಾಗಿ ಪಚ್ಚೆ ಹರಳುಗಳು, ಪ್ರಾಚೀನ ಮೂಳೆಗಳು, ನಾಗರ ಕಲ್ಲುಗಳು ಹಾಗೂ ವಿವಿಧ ಪೀಠಗಳು ಲಭ್ಯವಾಗಿದ್ದು, ಭೂಮಿಯ ಆಳದಲ್ಲಿ ಇನ್ನೂ ಅನೇಕ ರಹಸ್ಯಗಳು ಅಡಗಿರುವ ನಿರೀಕ್ಷೆ ಇದ್ದು, ಮುಂಬರುವ ದಿನಗಳಲ್ಲಿ ನಡೆಯುವ ಉತ್ಖನನ ಹೆಚ್ಚು ಮಹತ್ವ ಪಡೆಯಲಿದೆ.