ಕನ್ನಡಪ್ರಭ ವಾರ್ತೆ ಇಳಕಲ್ಲ
ರಾಜ್ಯ ಸಿದ್ದರಾಮಯ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಧರ್ಮಸ್ಥಳ ಬುರುಡೆ ಪ್ರಕರಣ, ಜಾತಿ ಜನಗಣತಿ , ಆರ್.ಎಸ್.ಎಸ್ ಬ್ಯಾನ್ ವಿಚಾರಗಳನ್ನು ಮುಂದೆ ಬಿಟ್ಟು ಜನರ ಗಮನ ಬೇರೆಡೆಗೆ ಸೆಳೆಯುವ ಕೆಲಸ ಮಾಡುತ್ತಿದೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆರೋಪಿಸಿದರು.ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನೂರು ವರ್ಷಗಳಿಂದ ಆರ್.ಎಸ್.ಎಸ್ ಸಂಘಟನೆ ದೇಶದ ಮೂಲೆ ಮೂಲೆಗಳಲ್ಲಿ ಪಥಸಂಚಲನ ನಡೆಸುತ್ತಿದ್ದು, ರಾಷ್ಟ್ರೀಯತೆ, ದೇಶಾಭಿಮಾನ ಮೂಡಿಸುವ ಕೆಲಸ ಮಾಡುತ್ತಿದೆ. ದೇಶದಲ್ಲಿ ಭೂಕಂಪ, ಸುನಾಮಿ ಸೇರಿದಂತೆ ಪ್ರಕೃತಿ ವಿಕೋಪಗಳು ನಡೆದಾಗ ಅಲ್ಲಿ ಮೊದಲು ನಿಲ್ಲುವುದೇ ರಾಷ್ಟ್ರೀಯ ಸ್ವಯಂ ಸೇವಕರು. ಆದರೆ ಸಚಿವ ಪ್ರಿಯಾಂಕ್ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಆರ್.ಎಸ್.ಎಸ್ ಬ್ಯಾನ್ ಮಾಡುವ ವಿಚಾರ ಮುಂದಿಟ್ಟಿದ್ದು, ಜೊತೆಗೆ ಬೇರೆ ಬೇರೆ ಸಂಘಟನೆಗಳಿಗೆ ಪ್ರಚೋದಿಸಿ ಅಡೆತಡೆ ಮಾಡುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ ಎಂದು ಕಿಡಿಕಾರಿದರು, ಅಭಿವೃದ್ಧಿ ಮರೆಮಾಚಲು ಸರ್ಕಾರ ಇಂತಹ ಕಾರ್ಯಗಳಿಗೆ ಕೈ ಹಾಕಿದೆ. ಇದಕ್ಕೆ ತಕ್ಕ ಪಾಠ ಜನರು ಕಲಿಸಲಿದ್ದಾರೆ ಎಂದು ಟೀಕಿಸಿದರು.ಹಿಂದೆ, ನೆಹರು, ಇಂದಿರಾ ಗಾಂಧಿ ಇದ್ದಾಗ ಆರ್.ಆರ್.ಎಸ್ ಬ್ಯಾನ್ ಮಾಡುಲು ಆಗಿಲ್ಲ ಎಂದು ಹೇಳುತ್ತ ಇಂತಹ ಕೆಲಸಗಳಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಕಾಲಹರಣ ಮಾಡುವುದು ಬಿಟ್ಟು ತನ್ನ ಮತಕ್ಷೇತ್ರ ಹಾಗೂ ಈ ರಾಜ್ಯದ ಅಭಿವೃದ್ಧಿಗೆ ಸಮಯ ಕೊಡಲಿ ಎಂದು ಹೇಳಿದರು.
ತಾಲೂಕಿನಲ್ಲಿ ಎಲ್ಲಾದರೂ ಅಕ್ರಮ ಮರಳುಗಾರಿಕೆ ನೆಡೆದರೆ ಇವತ್ತೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಇಂತಹ ಜಂಬದ ಮಾತುಗಳನ್ನಾಡುವ ವಿಜಯಾನಂದ ಕಾಶಪ್ಪನವರ ತಮ್ಮದೇ ಪಕ್ಷದ ಮುಖಂಡ ಪೋಚಾಪುರ ಗ್ರಾಮದ ಸಂಗನಗೌಡ ಎಂಬ ವ್ಯಕ್ತಿ ಅಕ್ರಮ ಮರಳುಗಾರಿಕೆ ವಿರುದ್ಧ ದೂರು ನೀಡಲು ಹೋದಾಗ ಅವರ ಮೇಲೆ ಹಲ್ಲೆಯಾಗಿದೆ. ಹಲ್ಲೆಯಾದ ವ್ಯಕ್ತಿ ಶಾಸಕ ವಿಜಯಾನಂದ ಕಾಶಪ್ಪನವರ, ಕಾಂಗ್ರೆಸ್ ಮುಖಂಡ ಮಹಾಂತೇಶ ನರಗುಂದ ವಿರುದ್ಧ ದೂರು ನೀಡಿದ್ದಾನೆ. ಆದರೆ ಇಲ್ಲಿ ಶಾಸಕ ಕಾಶಪ್ಪನವರ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದಾನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಇಡೀ ಮತಕ್ಷೇತ್ರದಾದ್ಯಂತ ರಸ್ತೆ ಗುಂಡಿಗಳು ನಿರ್ಮಾಣವಾಗಿದ್ದು. ಮತಕ್ಷೇತ್ರದಾದ್ಯಂತ ಅಕ್ರಮ ಮರಳುಗಾರಿಕೆ, ಇಸ್ಪೀಟ್ ಅಡ್ಡೆಗಳು ತಲೆ ಎತ್ತಿ ನಿಂತಿವೆ ಎಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಗ್ರಾಮೀಣ ಅಧ್ಯಕ್ಷ ಮಹಾಂತಗೌಡ ಪಾಟೀಲ, ಮಹಾಂತಪ್ಪ ಚನ್ನಿ, ಮಂಜುನಾಥ ಶೇಟ್ಟರ ಇತರರು ಉಪಸ್ಥಿತರಿದ್ದರು.