ಕಾಡಾನೆ ದಾಳಿ: ಬಂಡೆ ಏರಿ ಪಾರಾದ ರೈತ

KannadaprabhaNewsNetwork | Published : Dec 31, 2023 1:30 AM

ಸಾರಾಂಶ

ಕನಕಪುರ: ಕಾಡಾನೆ ದಾಳಿಯಲ್ಲಿ ಸಮಯ ಪ್ರಜ್ಞೆಯಿಂದ ಇಬ್ಬರು ರೈತರು ಪ್ರಾಣಪಾಯದಿಂದ ಪಾರಾಗಿರುವ ಅಚ್ಚರಿಯ ಘಟನೆಯೊಂದು ಬೆಟ್ಟೇಗೌಡನ ದೊಡ್ಡಿಯಲ್ಲಿ ನಡೆದಿದೆ.

ಕನಕಪುರ: ಕಾಡಾನೆ ದಾಳಿಯಲ್ಲಿ ಸಮಯ ಪ್ರಜ್ಞೆಯಿಂದ ಇಬ್ಬರು ರೈತರು ಪ್ರಾಣಪಾಯದಿಂದ ಪಾರಾಗಿರುವ ಅಚ್ಚರಿಯ ಘಟನೆಯೊಂದು ಬೆಟ್ಟೇಗೌಡನ ದೊಡ್ಡಿಯಲ್ಲಿ ನಡೆದಿದೆ.

ತಾಲೂಕಿನ ಬೆಟ್ಟೇಗೌಡನದೊಡ್ಡಿ ಗ್ರಾಮದ ಬೆಟ್ಟೇಗೌಡ ಮತ್ತು ಕೆಂಪೇಗೌಡ ರೈತರು ಕಾಡಾನೆ ದಾಳಿಯಿಂದ ಪಾರಾದವರು. ಶುಕ್ರವಾರ ಬೆಳಗ್ಗೆ ಈ ರೈತರಿಬ್ಬರು ದ್ವಿಚಕ್ರ ವಾಹನದಲ್ಲಿ ತಮ್ಮ ಜಮೀನಿನ ಕಡೆಗೆ ಹೊರಟಿದ್ದ ವೇಳೆ ಹಠಾತ್ತನೆ ಎದುರಾದ ಕಾಡಾನೆ ಹಿಂಡು ರೈತರ ಮೇಲೆ ಏಕಾಏಕಿ ದಾಳಿಗೆ ಮುಂದಾಗಿವೆ. ರೈತರು ದ್ವಿಚಕ್ರ ವಾಹನವನ್ನು ಬಿಟ್ಟು ಓಡಿ ಹೋಗಿ ದೊಡ್ಡ ಬಂಡೆಯೊಂದನ್ನು ಏರಿಬಿಟ್ಟಿದ್ದಾರೆ. ಕಾಡಾನೆಗಳ ಹಿಂಡು ರೈತರ ದ್ವಿಚಕ್ರ ವಾಹನದ ಮೇಲೆ ಸವಾರಿ ಮಾಡಿ ಅಲ್ಲಿಂದ ಹೊರಟಿವೆ. ದ್ವಿಚಕ್ರವಾಹನ ಜಖಂಗೊಂಡಿದ್ದು, ರೈತರು ಆನೆಗಳು ಅಲ್ಲಿಂದ ಕಾಲ್ಕಿತ್ತ ಬಳಿಕ ಬಂಡೆ ಇಳಿದು ಬಂದಿದ್ದಾರೆ.

ಗುರುವಾರ ರಾತ್ರಿ ಮೂಗೂರು ಕಾವೇರಿ ವನ್ಯಜೀವಿ ಧಾಮದಿಂದ ಸಾಲಬನ್ನಿ, ಹಣ ಕಡಬೂರು, ಅರಕೆರೆ, ಹರಗಾಡು ಗ್ರಾಮಗಳ ಮೂಲಕ ಬೆಟ್ಟೇಗೌಡನ ದೊಡ್ಡಿ ಹಾಗೂ ಕೆಬ್ಬಳ್ಳಿ ಗ್ರಾಮದ ಸುತ್ತಮುತ್ತಲಿನ ಜಮೀನಿಗೆ 35ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ದಾಂಗುಡಿ ಇಟ್ಟಿವೆ. ಸುತ್ತಮುತ್ತಲ ಗ್ರಾಮಗಳ ಜಮೀನಿನಲ್ಲಿದ್ದ ಟೊಮೆಟೋ, ಹುರುಳಿ, ರಾಗಿ ಸೇರಿದಂತೆ ಅನೇಕ ಕೃಷಿ ಬೆಳೆಗಳನ್ನು ಒಂದೇ ರಾತ್ರಿ ತುಳಿದು ತಿಂದು ನಾಶ ಮಾಡಿವೆ.

ರೈತ ಕೆಂಪೇಗೌಡರ ಒಂದೆಕರೆ ಜಮೀನಿನಲ್ಲಿ ಬೆಳೆದಿದ್ದ ರಾಗಿ ಬೆಳೆ ತುಳಿದು ತಿಂದು ನಾಶ ಮಾಡಿವೆ. ಕೆಬ್ಬಳ್ಳಿ ಗ್ರಾಮದ ಚಿಕ್ಕಣ್ಣನ ಜೋಳ, ಭತ್ತದ ಬೆಳೆ, ನಂಜುಂಡೇಗೌಡರ ಟೊಮೆಟೋ, ಪುಟ್ಟಸ್ವಾಮಿಗೌಡರ ಹುರುಳಿ ಬೆಳೆ, ತೆಂಗಿನ ಸಸಿಗಳನ್ನು ಕಿತ್ತು ಚಲ್ಲಾಪಿಲ್ಲಿ ಮಾಡಿವೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಕಾಡಾನೆಗಳ ಹಿಂಡನ್ನು ಅರಕೆರೆ, ಅರಗಾಡು, ಹಣಕಡಬೂರು ಕಡೆಯಿಂದ ಅರಣ್ಯಕ್ಕೆ ಹಿಮ್ಮೆಟ್ಟಿಸಿದ್ದಾರೆ. ಕಾಡಾನೆ ಹಾವಳಿಗೆ ಕಡಿವಾಣ ಹಾಕಿ, ಬೆಷ್ನಷ್ಟಕ್ಕೆ ಸೂಕ್ತ ಪರಿಹಾರ ಕೊಡುವಂತೆ ರೈತರು ಆಗ್ರಹಿಸಿದ್ದಾರೆ.(ಫೋಟೋಗಳು ಅಗತ್ಯವಿದ್ದರೆ ಸಣ್ಣದಾಗಿ ಬಳಸಿ)

ಕೆ ಕೆ ಪಿ ಸುದ್ದಿ 01(1):

ಕಾಡಾನೆ ದಾಳಿಗೆ ಟೊಮೇಟೊ ಬೆಳೆ ನಾಶ.

ಕೆ ಕೆ ಪಿ ಸುದ್ದಿ 1 (2):

ಕಾಡಾನೆಗಳು ಜಖಂಗೊಳಿಸಿರುವ ದ್ವಿಚಕ್ರ ವಾಹನ.

Share this article