ಬಸ್ಸಿಗೆ ಕಾಯುತ್ತಿದ್ದ ಮಹಿಳೆ ಮೇಲೆ ಕಾಡಾನೆ ದಾಳಿ: ಗಂಭೀರ ಗಾಯ

KannadaprabhaNewsNetwork |  
Published : Dec 14, 2024, 12:47 AM ISTUpdated : Dec 14, 2024, 12:48 AM IST
ಚಿತ್ರ : 13ಎಂಡಿಕೆ3 : ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಗಾಯಲು ಮಹಿಳೆಯ ಅರೋಗ್ಯವನ್ನು ಸಂಕೇತ್ ಪೂವಯ್ಯ ವಿಚಾರಿಸಿದರು | Kannada Prabha

ಸಾರಾಂಶ

ರಸ್ತೆಯಲ್ಲಿ ವಾಹನದಲ್ಲಿ ತೆರಳುತ್ತಿದ್ದವರು ಗಾಯಗೊಂಡು ಬಿದ್ದಿದ್ದ ಶಾರದಾ ಅವರನ್ನು ಕಂಡು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಪೇಟೆಗೆ ತೆರಳಲೆಂದು ರಸ್ತೆ ಬದಿ ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆ ಮೇಲೆ ಏಕಾಏಕಿ ಕಾಡಾನೆ ದಾಳಿ ನಡೆಸಿದ್ದು, ಪಕ್ಕೆಲುಬು, ಎಡಕಾಲಿಗೆ ಗಂಭೀರ ಗಾಯಗಳೊಂದಿಗೆ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಕಟಗೇರಿ ಗ್ರಾಮದ ಪೌತಿ ಪೂವಣ್ಣ ಅವರ ಪತ್ನಿ ಶಾರದಾ (75) ಕಾಡಾನೆ ದಾಳಿ ದಾಳಿಗೆ ತುತ್ತಾದವರು. ಶುಕ್ರವಾರ ಬೆಳಗ್ಗೆ ಪರೆಕಟಗೇರಿ ರಸ್ತೆ ಬದಿ ಬಸ್ಸಿಗಾಗಿ ಕಾಯುತ್ತ ಶಾರದಾ ಒಬ್ಬರೇ ನಿಂತಿದ್ದರು. ಈ ವೇಳೆ ದಿಢೀರ್‌ ಪ್ರತ್ಯಕ್ಷವಾದ ಕಾಡಾನೆ ಮಹಿಳೆಯತ್ತ ಬಂದಿದೆ. ಕಾಡಾನೆಯಿಂದ ತಪ್ಪಿಸಿಕೊಳ್ಳಲು ಸುಮಾರು 30 ಮೀಟರ್‌ನಷ್ಟು ಶಾರದಾ ಓಡಿದ್ದು ನೆಲಕ್ಕೆ ಬಿದ್ದಿದ್ದಾರೆ. ಬಿದ್ದ ಅವರನ್ನು ಕಾಡಾನೆಯು ತುಳಿದುಕೊಂಡು ಮುಂದಕ್ಕೆ ತೆರಳಿದೆ. ಕಾಡಾನೆ ತುಳಿತಕ್ಕೆ ಮಹಿಳೆಯ ಎಡ ಕಾಲು ಹಾಗೂ ಪಕ್ಕೆಲುಬಿಗೆ ತುಂಬಾ ಪೆಟ್ಟಾಗಿದೆ.

ರಸ್ತೆಯಲ್ಲಿ ವಾಹನದಲ್ಲಿ ತೆರಳುತ್ತಿದ್ದವರು ಗಾಯಗೊಂಡು ಬಿದ್ದಿದ್ದ ಶಾರದಾ ಅವರನ್ನು ಕಂಡು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.ಜಿಲ್ಲಾಸ್ಪತ್ರೆಗೆ ಸಂಕೇತ್ ಪೂವಯ್ಯ ಭೇಟಿ: ವಿಷಯ ತಿಳಿದು ರಾಜ್ಯ ವನ್ಯಜೀವಿ ಸಂರಕ್ಷಣಾ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಹಿಳೆಯ ಆರೋಗ್ಯ ವಿಚಾರಿಸಿದರು. ಸ್ಕ್ಯಾನಿಂಗ್ ವರದಿ ಬಂದ ನಂತರ ವೈದ್ಯರ ಸಲಹೆಯಂತೆ ಜಿಲ್ಲಾಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡುವ ಅಥವಾ ಹೆಚ್ಚಿನ ಚಿಕಿತ್ಸೆ ಅಗತ್ಯವಾದರೆ ಬೇರೆ ಆಸ್ಪತ್ರೆಗೆ ದಾಖಲಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಹೆಚ್ಚಿನ ಚಿಕಿತ್ಸೆ ಅಗತ್ಯವಾದರೆ ಅರಣ್ಯ ಇಲಾಖೆ ವತಿಯಿಂದ ಮೈಸೂರು ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ವೆಚ್ಚ ಭರಿಸಲಾಗುವುದು ನೀಡಲಾಗುವುದು ಎಂದು ಅವರು ತಿಳಿಸಿದರು. ಪರಕಟಗೇರಿಯಲ್ಲಿ ಕಾಣಿಸಿಕೊಂಡಿರುವ ಕಾಡಾನೆಯನ್ನು ಅರಣ್ಯಕ್ಕೆ ಅಟ್ಟಲು ಶನಿವಾರ ಕಾರ್ಯಾಚರಣೆ ನಡೆಸಲು ಶ್ರೀಮಂಗಲ ವನ್ಯಜೀವಿ ವಿಭಾಗದ ವಲಯ ಅರಣ್ಯ ಅಧಿಕಾರಿ ಅರವಿಂದ್ ಅವರಿಗೆ ಸೂಚನೆ ನೀಡಿರುವುದಾಗಿ ಸಂಕೇತ್ ಪೂವಯ್ಯ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ