ಕನ್ನಡಪ್ರಭ ವಾರ್ತೆ ಹಾಸನ
ಅರಣ್ಯ ರಕ್ಷಣೆ ಅಂದರೆ ಕೇವಲ ಮರಗಳನ್ನು ಕಾಯುವುದಲ್ಲ, ಪ್ರಕೃತಿಯ ಸಮತೋಲನವನ್ನು ಕಾಪಾಡುವುದು. ಇದು ಮಾನವನ ಅತ್ಯಂತ ಮಹತ್ವದ ಕರ್ತವ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೇಮಾವತಿ ತಿಳಿಸಿದರು.ನಗರದ ಬಿ.ಎಂ. ರಸ್ತೆ, ಡೇರಿ ವೃತ್ತದ ಬಳಿ ಇರುವ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಅರಣ್ಯ ಇಲಾಖೆಯ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರಾದ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿದರು. ಕಾಡು ಕೇವಲ ಮರಗಳ ಸಮೂಹವಲ್ಲ. ಅದು ವನ್ಯಜೀವಿಗಳ ಜೀವಾಳ. ಆದರೆ ಇತ್ತೀಚಿನ ದಿನಗಳಲ್ಲಿ ಮಾನವ ತನ್ನ ವೈಯಕ್ತಿಕ ಹಿತಾಸಕ್ತಿಗಾಗಿ ಅರಣ್ಯವನ್ನು ನಾಶ ಮಾಡುವ ಕೆಲಸಕ್ಕೆ ಮುಂದಾಗಿದ್ದಾನೆ. ಪ್ರಕೃತಿಯ ಸಂಪತ್ತನ್ನು ಹಾಳು ಮಾಡುವ ಈ ಪ್ರವೃತ್ತಿಗೆ ತಡೆಯೊಡ್ಡುವುದು ಈಗ ಅತ್ಯವಶ್ಯಕವಾಗಿದೆ ಎಂದು ಎಚ್ಚರಿಸಿದರು. ಅರಣ್ಯ ರಕ್ಷಣೆಯ ಪಥದಲ್ಲಿ ಸಾವಿರಾರು ಅರಣ್ಯ ರಕ್ಷಕರು ತಮ್ಮ ಪ್ರಾಣಗಳನ್ನು ಅರ್ಪಿಸಿದ್ದಾರೆ. ಅರಣ್ಯ ರಕ್ಷಕ ಶ್ರೀನಿವಾಸ್ ಅವರನ್ನು ಕಾಡುಗಳ್ಳ ವೀರಪ್ಪನ್ ಹತ್ಯೆ ಮಾಡಿದ ಘಟನೆ ಎಲ್ಲರಿಗೂ ಸ್ಮರಣೀಯ. ಆ ನಂತರದಿಂದ ಅರಣ್ಯ ಅಧಿಕಾರಿಗಳು, ಸಿಬ್ಬಂದಿ ಎದುರಿಸುವ ಅಪಾಯಗಳು, ಸವಾಲುಗಳು ಎಲ್ಲರಿಗೂ ಅರ್ಥವಾಗಿವೆ. ತಮ್ಮ ಪ್ರಾಣವನ್ನು ಪಣಕ್ಕಿಟ್ಟು ವನ್ಯಜೀವಿಗಳನ್ನು ರಕ್ಷಿಸುವ ಕಾರ್ಯದಲ್ಲಿ ಬಲಿಯಾದವರ ತ್ಯಾಗವನ್ನು ಮರೆಯದೆ ಅವರಿಗೆ ನಮನ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಅವರು ಹೇಳಿದರು. ಅರಣ್ಯ ರಕ್ಷಣೆಯ ಹಾದಿಯಲ್ಲಿ ವೀರ ಮರಣ ಹೊಂದಿದವರ ಕುಟುಂಬಗಳನ್ನೂ ಗೌರವಿಸುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳಲ್ಲಿ ಅವರನ್ನು ಆಹ್ವಾನಿಸಿ ಗೌರವ ಸಲ್ಲಿಸಬೇಕು ಹಾಗೂ ಸಮಾಜದ ಧರ್ಮ ಎಂದರು. ಈ ದೇಶದ ಸಂಪತ್ತಿನಲ್ಲಿ ಅರಣ್ಯ ಸಂಪತ್ತು ಅತ್ಯಂತ ಅಮೂಲ್ಯವಾದದ್ದು. ಅದನ್ನು ರಕ್ಷಿಸುವ ಕಾರ್ಯದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಮುಂಚೂಣಿಯಲ್ಲಿದ್ದಾರೆ. ಅವರ ತ್ಯಾಗ, ಶ್ರಮಗಳಿಗೆ ಸಮಾಜ ಸದಾ ಕೃತಜ್ಞರಾಗಿರಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಮಾತನಾಡಿ, ದೇಶವನ್ನು ರಕ್ಷಿಸುವಲ್ಲಿ ಸೈನಿಕರು ಯಾವ ರೀತಿಯ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಾರೋ, ಅದೇ ರೀತಿಯಾಗಿ ಅರಣ್ಯವನ್ನು ರಕ್ಷಿಸುವ ಜವಾಬ್ದಾರಿ ಅರಣ್ಯ ರಕ್ಷಕರ ಮೇಲಿದೆ. ಪ್ರಕೃತಿಯ ಸಮತೋಲನ ಕಾಯ್ದುಕೊಳ್ಳಲು ಅರಣ್ಯದ ಪಾತ್ರ ಅತ್ಯಂತ ಮುಖ್ಯ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮಟ್ಟಿಗೆ ಅರಣ್ಯ ಸಂರಕ್ಷಣೆಗೆ ಸಹಕರಿಸಬೇಕು ಎಂದು ಕರೆ ನೀಡಿದರು. ಹಾಸನ ಜಿಲ್ಲೆಯಲ್ಲಿ ಈಗ ಕೇವಲ ೧೨ ಪರ್ಸೆಂಟ್ ಅರಣ್ಯ ಜಾಗ ಮಾತ್ರ ಉಳಿದಿದೆ. ಇದನ್ನು ರಕ್ಷಣೆ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಅಪಾಯ ತಪ್ಪದು. ಅರಣ್ಯ ಇಲಾಖೆಯ ಕೆಳಹಂತದ ಸಿಬ್ಬಂದಿ ಮಳೆ, ಚಳಿ, ಬಿಸಿಲೆನ್ನದೆ ವನ್ಯಜೀವಿಗಳೊಂದಿಗೆ ಪಾಳು ತಟ್ಟುತ್ತಾ ಮಾಡುವ ಸೇವೆಗೆ ಬೆಲೆ ಕಟ್ಟಲಾಗುವುದಿಲ್ಲ. ಅವರ ನಡೆ ನಿಜಕ್ಕೂ ಶ್ಲಾಘನೀಯ ಎಂದು ಕೊಂಡಾಡಿದರು. ಇದೇ ವೇಳೆ ಹುತಾತ್ಮರಾದವರಿಗೆ ಎರಡು ನಿಮಿಷ ಮೌನ ಆಚರಿಸಿ ಪುಷ್ಪವನ್ನು ಅರ್ಪಿಸಿ ಗೌರವ ಸೂಚಿಸಿದರು.ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಕೆ. ದಾಕ್ಷಾಯಿಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತ್, ಜಿಲ್ಲಾಪಂಚಾಯತ್ ಸಿಇಒ ಪೂರ್ಣಿಮಾ, ಅರಣ್ಯ ಸಂರಕ್ಷಣಾಧಿಕಾರಿ ಏಳು ಕುಂಡಲವಾಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್ ಹಾಗೂ ಅನೇಕ ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು.