ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗ ಮಧುಸೂದನ್ ಅವರ ಆದೇಶ ಅನ್ವಯ, ಅಚ್ಚನಹಳ್ಳಿ ಗ್ರಾಮದ ಅನಿಲ್ ಕುಮಾರ್ ಅವರು ಅರಣ್ಯ ಭೂಮಿಯನ್ನು ಅತಿಕ್ರಮಿಸಿರುವ ಹಿನ್ನೆಲೆಯಲ್ಲಿ 64ಎ ಪ್ರಕರಣ ದಾಖಲಿಸಿಕೊಂಡು, ಅದರ ಮುಂದುವರಿದ ಕ್ರಮವಾಗಿ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು. ಒತ್ತುವರಿಯಾಗಿದ್ದ ಪ್ರದೇಶದಲ್ಲಿ ಬೆಳೆಸಲಾಗಿದ್ದ ಕಾಫಿ, ಅಡಿಕೆ, ಮೆಣಸು ಹಾಗೂ ಬಾಳೆ ಬೆಳೆಗಳಿದ್ದ ಸುಮಾರು 10 ಎಕರೆ ಅರಣ್ಯ ಭೂಮಿಯನ್ನು ಅಧಿಕಾರಿಗಳು ಹದ್ದುಬಸ್ತು ಗುರುತಿಸಿ ಅಧಿಕೃತವಾಗಿ ಇಲಾಖೆ ವಶಕ್ಕೆ ಪಡೆದರು.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅವರ ಆದೇಶದ ಮೇರೆಗೆ ದಾಖಲಿಸಲಾದ 64ಎ ಪ್ರಕರಣದ ಅನ್ವಯ ಸಕಲೇಶಪುರ ಅರಣ್ಯ ಇಲಾಖೆ ಅಧಿಕಾರಿಗಳು ಸೆಕ್ಷನ್ - 4ರ ಮರಗಡಿ ಸರ್ವೆ ನಂ. 54ರಲ್ಲಿ ಒತ್ತುವರಿಯಾಗಿದ್ದ ಸುಮಾರು 10 ಎಕರೆ ಅರಣ್ಯ ಭೂಮಿಯನ್ನು ತೆರವುಗೊಳಿಸಿ ಇಲಾಖೆ ವಶಕ್ಕೆ ಪಡೆದರು.ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗ ಮಧುಸೂದನ್ ಅವರ ಆದೇಶ ಅನ್ವಯ, ಅಚ್ಚನಹಳ್ಳಿ ಗ್ರಾಮದ ಅನಿಲ್ ಕುಮಾರ್ ಅವರು ಅರಣ್ಯ ಭೂಮಿಯನ್ನು ಅತಿಕ್ರಮಿಸಿರುವ ಹಿನ್ನೆಲೆಯಲ್ಲಿ 64ಎ ಪ್ರಕರಣ ದಾಖಲಿಸಿಕೊಂಡು, ಅದರ ಮುಂದುವರಿದ ಕ್ರಮವಾಗಿ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು. ಒತ್ತುವರಿಯಾಗಿದ್ದ ಪ್ರದೇಶದಲ್ಲಿ ಬೆಳೆಸಲಾಗಿದ್ದ ಕಾಫಿ, ಅಡಿಕೆ, ಮೆಣಸು ಹಾಗೂ ಬಾಳೆ ಬೆಳೆಗಳಿದ್ದ ಸುಮಾರು 10 ಎಕರೆ ಅರಣ್ಯ ಭೂಮಿಯನ್ನು ಅಧಿಕಾರಿಗಳು ಹದ್ದುಬಸ್ತು ಗುರುತಿಸಿ ಅಧಿಕೃತವಾಗಿ ಇಲಾಖೆ ವಶಕ್ಕೆ ಪಡೆದರು.ಬೆಳ್ಳಂಬೆಳಗ್ಗೆ ನಡೆದ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಎಚ್. ಆರ್. ಹೇಮಂತ್ ಕುಮಾರ್ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಅರ್ಜುನ್, ಮಂಜುನಾಥ್, ಮಹದೇವ್ ಹಾಗೂ ಧನಂಜಯ್, ಗಸ್ತು ಅರಣ್ಯ ಪಾಲಕರಾದ ಉಮೇಶ್, ಯೋಗೇಶ್, ದೇವರಾಜ್, ದೇವೇಂದ್ರ ಮತ್ತು ಕುಮಾರ್, ಆರ್‌ಆರ್‌ಟಿ ಸಿಬ್ಬಂದಿಯಾದ ಸೋಮಶೇಖರ್, ಮದನ್ ಹಾಗೂ ಸುಧೀಶ್ ಭಾಗವಹಿಸಿದ್ದರು.ವಲಯ ಅರಣ್ಯಾಧಿಕಾರಿ ಎಚ್. ಆರ್. ಹೇಮಂತ್ ಕುಮಾರ್ ಮಾತನಾಡಿ, ಕಳೆದ ಎರಡು ವರ್ಷಗಳ ಅವಧಿಯಲ್ಲಿ ತಮ್ಮ ವಲಯ ವ್ಯಾಪ್ತಿಯಲ್ಲಿ ಸುಮಾರು 80 ಎಕರೆ ಅರಣ್ಯಭೂಮಿಯನ್ನು ಒತ್ತುವರಿಯಿಂದ ಮುಕ್ತಗೊಳಿಸಿ ಇಲಾಖೆ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿಯೂ ಅರಣ್ಯ ಭೂಮಿಯನ್ನು ಅತಿಕ್ರಮಿಸಿಕೊಂಡಿರುವ ಎಲ್ಲಾ ಪ್ರದೇಶಗಳನ್ನು ಗುರುತಿಸಿ, ಕಾನೂನುಬದ್ಧವಾಗಿ ಹಂತಹಂತವಾಗಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಹೇಳಿದರು.ಒಮ್ಮೆ ಭೂಮಿಯನ್ನು ಅರಣ್ಯ ಪ್ರದೇಶವೆಂದು ಅಧಿಸೂಚನೆ ಮಾಡಿ ಘೋಷಿಸಿದ ಬಳಿಕ ಅದನ್ನು ಬೇರೆ ಉದ್ದೇಶಕ್ಕೆ ಪರಿವರ್ತಿಸುವುದು ಕಾನೂನುಬದ್ಧವಾಗಿ ಅತ್ಯಂತ ಕಷ್ಟಕರವಾಗಿದೆ. ಆದ್ದರಿಂದ ಅರಣ್ಯಭೂಮಿಯನ್ನು ಅತಿಕ್ರಮಿಸಿರುವವರು ಸ್ವಯಂಪ್ರೇರಿತವಾಗಿ ತೆರವುಗೊಳಿಸುವುದು ಸೂಕ್ತ ಎಂದು ಮನವಿ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.