ಕಾರ್ಯಾಚರಣೆ । ಸೀಗೆ ಹೆಸರಿನ ಆನೆ ಹಿಡಿಯಲು ನಡೆಯುತ್ತಿದ್ದ ಕಾರ್ಯ
ತಾಲೂಕಿನ ಹಾಡ್ಯ ಗ್ರಾಮದ ಸಮೀಪ ಶನಿವಾರ ನಡೆದ ಸೀಗೆ ಹೆಸರಿನ ಕಾಡಾನೆ ಸೆರೆ ಕಾರ್ಯಾಚರಣೆ ವಿಫಲಗೊಂಡಿದೆ.
ಬೇಲೂರು-ಸಕಲೇಶಪುರ ತಾಲೂಕಿನ ಎಲ್ಲೆಡೆ ಸಂಚರಿಸುತ್ತ ವಿಪರೀತ ಹಾನಿಗೆ ಕಾರಣವಾಗಿದ್ದ ಸೀಗೆ ಹೆಸರಿನ ಆನೆ ಮಾನವರಿಗೆ ಮಾರಕ ಎಂಬ ವರದಿ ಸರ್ಕಾರಕ್ಕೆ ತಲುಪಿದ್ದರಿಂದ ಇತರೆ ನಾಲ್ಕು ಕಾಡಾನೆಗಳೊಂದಿಗೆ ಈ ಕಾಡಾನೆಯನ್ನು ಸೆರೆಹಿಡಿಯಲು ಸರ್ಕಾರ ಅನುಮತಿ ನೀಡಿತ್ತು.ಬೇಲೂರು ತಾಲೂಕಿನ ಅರೇಹಳ್ಳಿ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದ ಈ ಕಾಡಾನೆಯನ್ನು ಹಿಡಿಯಲು ದುಬಾರೆಯಿಂದ ಐದು ಕಾಡಾನೆಗಳೊಂದಿಗೆ ಅರೇಹಳ್ಳಿ ತಲುಪಿದ್ದ ಅರಣ್ಯ ಇಲಾಖೆಯ ನೌಕರರು ಕರಡಿ ಹೆಸರಿನ ಕಾಡಾನೆ ಸೆರೆ ಹಿಡಿದು ಸೀಗೆ ಹೆಸರಿನ ಕಾಡಾನೆ ಸೆರೆಗೆ ಮುಂದಾಗಿದ್ದರು. ಆದರೆ, ಈ ವೇಳೆಗೆ ಸಕಲೇಶಪುರ ತಾಲೂಕಿಗೆ ಆಗಮಿಸಿದ್ದ ಕಾಡಾನೆಯಿಂದಾಗಿ ಕಾರ್ಯಚರಣೆಯನ್ನು ಒಂದು ದಿನ ಸ್ಥಗಿತಗೊಳಿಸಿದ್ದ ಅರಣ್ಯಾಧಿಕಾರಿಗಳು ಕಾಡಾನೆ ಇರುವ ಪ್ರದೇಶವನ್ನು ನಿಖರವಾಗಿ ಗುರುತಿಸಿ ಮೊದಲ ದಿನ ಕಾರ್ಯಚರಣೆ ನಡೆಸಿದ ಪ್ರದೇಶದಿಂದ ಭೀಮ, ಹರ್ಷ, ಮಹೇಂದ್ರ ಹಾಗೂ ಅಶ್ವತ್ಥಾಮ ಹೆಸರಿನ ಸಾಕಾನೆಗಳನ್ನು ಹೆತ್ತೂರು ಹೋಬಳಿಯ ಹಾಡ್ಯ ಗ್ರಾಮಕ್ಕೆ ಕರೆತಂದರೆ, ದುಬಾರೆ ಅರಣ್ಯಕ್ಕೆ ಕರಡಿ ಕಾಡಾನೆ ಬೀಡಲು ತೆರಳಿದ್ದ ಅಭಿಮನ್ಯು, ಪ್ರಶಾಂತ, ಸುಗ್ರೀವ ಎಂಬ ಕಾಡಾನೆಗಳು ಶನಿವಾರ ಮಧ್ಯಾಹ್ನ ೩ ಗಂಟೆಗೆ ಹಾಡ್ಯ ಗ್ರಾಮಕ್ಕೆ ಬಂದಿಳಿದಿದ್ದವು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವರೂಪ್, ವಲಯ ಅರಣ್ಯಾಧಿಕಾರಿ ಶೀಲ್ಪಾ ಸೇರಿದಂತೆ ಹಲವು ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.