ಯಲ್ಲಾಪುರ: ತಾಲೂಕಿನ ಮಾವಿನಮನೆ ಅರಣ್ಯ ಪ್ರದೇಶದಲ್ಲಿ ಅತಿಕ್ರಮಣವನ್ನು ಅರಣ್ಯ ಇಲಾಖೆ ಸಿಬ್ಬಂದಿ ನೇತೃತ್ವದಲ್ಲಿ ತೆರವು ಮಾಡಲಾಯಿತು.
ಇದರ ಹೊರತಾಗಿ ಇದೀಗ ಪುನಃ ಅದೇ ಅರಣ್ಯ ಸರ್ವೇ ನಂಬರ್ ೫೩೯ರಲ್ಲಿ ಅರಣ್ಯ ಪ್ರದೇಶದಲ್ಲಿ ಹೊಸತಾಗಿ ಅತಿಕ್ರಮಣ ಮಾಡಿ, ಕಟ್ಟಡ ಕಟ್ಟಲು ಪ್ರಯತ್ನ ಮಾಡಿದ ಸಮಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತಡೆದು, ಈ ಜಾಗದ ಕುರಿತಾಗಿ ಯಾವುದಾದರೂ ದಾಖಲೆಗಳಿದ್ದರೆ ತಂದು ಸಲ್ಲಿಸುವಂತೆ ತಿಳಿಸಿ ೨ ದಿನ ಕಾಲಾವಕಾಶ ನೀಡಿದ್ದರು.
ಆದರೆ ಅವರು ೨ ದಿನಗಳಲ್ಲಿ ಯಾವುದೇ ದಾಖಲೆಗಳನ್ನು ಸಲ್ಲಿಸಿರದ ಹಿನ್ನೆಲೆ ನೂತನ ಅತಿಕ್ರಮಣವನ್ನು ಖುಲ್ಲಾಪಡಿಸಲು ಅರಣ್ಯ ಇಲಾಖೆ ಸಿಬ್ಬಂದಿ, ಕಾನೂನು ಕ್ರಮ ಕೈಗೊಂಡಿದ್ದಾರೆಂದು ಇಡಗುಂದಿ ವಲಯದ ವಲಯಾರಣ್ಯಾಧಿಕಾರಿ ಶಿಲ್ಪಾ ನಾಯ್ಕ ತಿಳಿಸಿದ್ದಾರೆ. ಈ ಅತಿಕ್ರಮಣವನ್ನು ಖುಲ್ಲಾಪಡಿಸಲು ಅರಣ್ಯ ಇಲಾಖೆ ಕೈಗೊಂಡ ಕಾನೂನು ಕ್ರಮದ ಕುರಿತಾಗಿ ವಿವಿಧ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಗಳ ಬಗ್ಗೆ ಅವರು ಈ ಸ್ಪಷ್ಟನೆ ನೀಡಿದ್ದಾರೆ.