ಅರಣ್ಯ ಅತಿಕ್ರಮಣದಾರರ ಒಕ್ಕಲೆಬ್ಬಿಸಿದರೆ ಹೋರಾಟ: ಶಾಂತಾರಾಮ ನಾಯಕ

KannadaprabhaNewsNetwork |  
Published : Aug 12, 2024, 01:12 AM IST
ಅರಣ್ಯ ಅತಿಕ್ರಮಣದಾರರ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಶಾಂತಾರಾಮ ನಾಯಕ ಮಾತನಾಡಿದರು. | Kannada Prabha

ಸಾರಾಂಶ

ಶಿರೂರು ಮತ್ತು ವಯನಾಡ್ ಭೂಕುಸಿತವನ್ನು ಉದಾಹರಿಸಿ ಅತಿಕ್ರಮಣ ತೆರವಿಗೆ ಆದೇಶಿಸಿದ್ದಾರೆ. ಆದರೆ ಬಡ ಅತಿಕ್ರಮಣದಾರರ ಸಾಗುವಳಿಯಿಂದ ಭೂಕುಸಿತವಾಗಿಲ್ಲ. ಬೃಹತ್ ಕಂಪನಿಗಳ ಕಾಮಗಾರಿಗಳಿಂದ ಈ ಘಟನೆ ನಡೆದಿರುವುದು.

ಅಂಕೋಲಾ: ತಲೆತಲಾಂತರಗಳಿಂದ ಅರಣ್ಯಭೂಮಿಯಲ್ಲಿ ವಾಸವಾಗಿರುವ ರೈತರು, ಕೂಲಿಕಾರರು, ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾದರೆ ಅಶಾಂತಿಗೆ ಕಾರಣವಾಗುವುದು. ಈ ಕುರಿತು ಎಚ್ಚರದಿಂದ ಅರಣ್ಯ ಹಕ್ಕು ನೀಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಆಗ್ರಹಿಸಿದರು.ಅರಣ್ಯ ಅತಿಕ್ರಮಣಾದರರ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದ ಅರಣ್ಯ ಸಚಿವರು ಅಧಿಕಾರಕ್ಕೆ ಬಂದು ಒಂದೂವರೆ ವರ್ಷದಲ್ಲೇ ಅರಣ್ಯ ಅತಿಕ್ರಮಣ ತೆರವುಗೊಳಿಸುವ ಬಗ್ಗೆ 4 ಸುತ್ತೋಲೆ ಹೊರಡಿಸಿದ್ದಾರೆ. ಆ. 2ರಂದು ಹೊರಡಿಸಿದ ಇತ್ತೀಚಿನ ಸುತ್ತೋಲೆಯಲ್ಲಿ ತೋಟ, ಮನೆ, ಸಾಗುವಳಿ ಭೂಮಿ ಇತ್ಯಾದಿ ತೆರವುಗೊಳಿಸಲು ಆದೇಶಿಸಿದ್ದಾರೆ. ಆದರೆ ಅರಣ್ಯ ಕಾಯ್ದೆಯಂತೆ ಅರ್ಜಿ ಹಾಕಿಕೊಂಡವರ ಬಗ್ಗೆ, ಅವರ ಹಕ್ಕನ್ನು ಮಾನ್ಯ ಮಾಡುವ ಬಗ್ಗೆ ಕಾಳಜಿ ವಹಿಸಿ ಯಾವುದೇ ಸುತ್ತೋಲೆ ಹೊರಡಿಸಿಲ್ಲ ಎಂದರು. ಶಿರೂರು ಮತ್ತು ವಯನಾಡ್ ಭೂಕುಸಿತವನ್ನು ಉದಾಹರಿಸಿ ಅತಿಕ್ರಮಣ ತೆರವಿಗೆ ಆದೇಶಿಸಿದ್ದಾರೆ. ಆದರೆ ಬಡ ಅತಿಕ್ರಮಣದಾರರ ಸಾಗುವಳಿಯಿಂದ ಭೂಕುಸಿತವಾಗಿಲ್ಲ. ಬೃಹತ್ ಕಂಪನಿಗಳ ಕಾಮಗಾರಿಗಳಿಂದ ಈ ಘಟನೆ ನಡೆದಿರುವುದು. ಇದನ್ನು ಬಳಸಿಕೊಂಡು ಬಡ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸಿದರೆ ತೀವ್ರ ಹೋರಾಟ ಮಾಡಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.ಕಳೆದ ವಿಧಾನಸಭಾ ಅಧಿವೇಶನದಲ್ಲಿ ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ(ಅರಣ್ಯ ಹಕ್ಕುಗಳ ಮಾನ್ಯತೆ) ಕಾಯ್ದೆ 2006ಕ್ಕೆ ತಿದ್ದುಪಡಿ ತರಬೇಕೆಂದು ಕೇಂದ್ರ ಸರ್ಕಾರವನ್ನು ಕೋರುವ ನಿರ್ಣಯವನ್ನು ಕೈಗೊಂಡಿದ್ದನ್ನು ಸ್ವಾಗತಿಸಿದರು.

ಅರಣ್ಯ ಭೂಮಿ ಹಕ್ಕಿಗಾಗಿ ದಶಕಗಳಿಂದ ಈ ತಿದ್ದುಪಡಿಗೆ ಕೇಂದ್ರ ಸರ್ಕಾರವನ್ನು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸುತ್ತಿತ್ತು. ಇದು ನಮ್ಮ ಹೋರಾಟಕ್ಕೆ ಸಿಕ್ಕ ಮನ್ನಣೆಯಾಗಿದೆ. ಭೂಮಿ ಹೋರಾಟದ ವಿಷಯಕ್ಕೆ ಈ ಮೂಲಕ ಬಲ ಬಂದಂತಾಗಿದೆ. 3 ತಲೆಮಾರು ಅಥವಾ 75 ವರ್ಷಗಳ ಕಾಲ ಅವರ ಪೂರ್ವಜರು ಅರಣ್ಯದಲ್ಲೆ ಇದ್ದರು ಎಂಬುದನ್ನು ಸಾಬೀತುಪಡಿಸಲು ಸಾಕ್ಷ್ಯವನ್ನು ಸಲ್ಲಿಸಬೇಕಾಗುತ್ತದೆ. ಇದು ಕಾರ್ಯಸಾಧುವಲ್ಲದ ನಿಯಮ. ಆದ್ದರಿಂದ ಕೇಂದ್ರ ಸರ್ಕಾರ ಈ ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದು ಹಲವು ದಶಕಗಳಿಂದ ಇತ್ಯರ್ಥ ಆಗದೇ ಉಳಿದ ಪ್ರಕರಣಗಳನ್ನು ಮುಗಿಸಲು ಕ್ರಮ ಕೈಗೊಳ್ಳಬೇಕು. ತಿದ್ದುಪಡಿಗೆ ಅನುಮತಿ ನೀಡುವಂತೆ ಅರಣ್ಯ ಅತಿಕ್ರಮಣದಾರ ರೈತರಿಂದ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸುವ ಅಭಿಯಾನವನ್ನು ನಡೆಸಲು ತೀರ್ಮಾನಿಸಿದೆ ಎಂದರು.

ಅತಿ ಮಳೆಯಿಂದ ರೈತರಿಗೆ ತೀವ್ರ ಹಾನಿಯಾಗಿದ್ದು, ಸರ್ಕಾರ ಅವುಗಳನ್ನು ಗುರುತಿಸಿ ಬೆಳೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಕಾರ್ಯದರ್ಶಿ ಶ್ಯಾಮನಾಥ ನಾಯ್ಕ ಕದ್ರಾ, ಜಿಲ್ಲಾ ಉಪಾಧ್ಯಕ್ಷ ತಿಮ್ಮಪ್ಪ ಗೌಡ, ಜಿಲ್ಲಾ ಸಮಿತಿ ಸದಸ್ಯ ರಮಾನಂದ ನಾಯಕ ಅಚವೆ, ತಾಲೂಕು ಅಧ್ಯಕ್ಷ ಗೌರೀಶ ನಾಯಕ, ಕಾರ್ಯದರ್ಶಿ ಸಂತೋಷ ನಾಯ್ಕ, ಪದಾಧಿಕಾರಿಗಳಾದ ಮಾದೇವ ಗೌಡ, ಉದಯ ನಾಯ್ಕ ಬೇಲೇಕೇರಿ, ಗಣೇಶ ಪಟಗಾರ, ವೆಂಕಟರಮಣ ಗೌಡ, ಶಿವರಾಮ ಪಟಗಾರ, ರಾಜಗೋಪಾಲ ಶೇಟ್, ರಾಜು ಗೌಡ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದು 2028ರವರೆಗೂ ಸಿಎಂ, ಇಳಿಸಲು ಆಗೋಲ್ಲ: ಜಮೀರ್‌
ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ