ಕಾಡಿಗೆ ಬೆಂಕಿ: ಕೆಲವರಿಂದ ಅರಣ್ಯ ಭೂಮಿ ಕಬಳಿಸುವ ಹುನ್ನಾರ

KannadaprabhaNewsNetwork | Published : Mar 18, 2024 1:52 AM

ಸಾರಾಂಶ

ಸೊರಬ ತಾಲೂಕಿನ ಚಂದ್ರಗುತ್ತಿ ಹೋಬಳಿ ಹೊಳೆಮರೂರು ಗ್ರಾಮದಲ್ಲಿ ಅರಣ್ಯ ಭೂಮಿಯನ್ನು ಸರ್ಕಾರಿ ಬಂಜರು ಜಮೀನು ಎಂದು ಪರಿವರ್ತಿಸಿ ಮಂಜೂರಾತಿಗೆ ಮುಂದಾಗಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಸುಮಾರು ೮ ಎಕರೆ ಅರಣ್ಯ ಸಂಪೂರ್ಣ ನಾಶವಾಗಿದೆ. ಇದಕ್ಕೆ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಕುಮ್ಮಕ್ಕು ಇದೆ ಎನ್ನುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಸೊರಬ

ತಾಲೂಕಿನ ಚಂದ್ರಗುತ್ತಿ ಹೋಬಳಿ ಹೊಳೆಮರೂರು ಗ್ರಾಮದಲ್ಲಿ ಅರಣ್ಯ ಭೂಮಿಯನ್ನು ಸರ್ಕಾರಿ ಬಂಜರು ಜಮೀನು ಎಂದು ಪರಿವರ್ತಿಸಿ ಮಂಜೂರಾತಿಗೆ ಮುಂದಾಗಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಸುಮಾರು ೮ ಎಕರೆ ಅರಣ್ಯ ಸಂಪೂರ್ಣ ನಾಶವಾಗಿದೆ. ಇದಕ್ಕೆ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಕುಮ್ಮಕ್ಕು ಇದೆ ಎನ್ನುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮದ ಸರ್ವೆ ನಂ.೧೨೧ರ ೧೨ ಎಕರೆ ವಿಸ್ತೀರ್ಣದ ಸರ್ಕಾರಿ ಬಂಜರು ಜಾಗದಲ್ಲಿ ಯಥೇಚ್ಛವಾಗಿ ಬೃಹತ್ ಮರ-ಗಿಡಗಳು ಬೆಳೆದಿವೆ. ಆದರೆ ಕೆಲವು ಕಿಡಿಗೇಡಿಗಳು ಅರಣ್ಯ ಇಲಾಖೆಯೊಂದಿಗೆ ಶಾಮೀಲಾಗಿ ಸುಮಾರು ೮ ಎಕರೆ ಬಂಜರು ಅರಣ್ಯಕ್ಕೆ ಬೆಂಕಿ ಇಡಲಾಗಿದೆ, ಕೊಡಲಿ ಏಟು ನೀಡಿ ಬಯಲು ಪ್ರದೇಶವಾಗಿ ಪರಿವರ್ತಿಸಲಾಗಿದೆ. ಈ ಭೂಮಿಯನ್ನು ಮಂಜೂರು ಮಾಡುವಂತೆ ಕೆಲವು ರಾಜಕಾರಣಿಗಳು ಕಂದಾಯ ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದು, ಅಧಿಕಾರಿಗಳು ಮಂಜೂರಾತಿಗೆ ಮುಂದಾಗಿದ್ದಾರೆ ಎಂದು ಗ್ರಾಮಸ್ಥರ ಕೆರಳಿಸಿದೆ.

ಪಕ್ಕದ ಸ.ನಂ.೧೨೦ ರಲ್ಲಿ ದಟ್ಟಾರಣ್ಯ ಹಾಗೂ ಸ.ನಂ.೪೧ರಲ್ಲಿ ೪೩೦ ಎಕರೆ ಅರಣ್ಯ ಪ್ರದೇಶವಿದೆ. ಈ ಕಾಡಿಗೂ ದುಷ್ಕೃತ್ಯದ ಪರಿಣಾಮ ಬೀರಲಿದೆ. ಅರಣ್ಯ ಕಡಿತಲೆ ರಾತ್ರಿ ಹೊತ್ತಲ್ಲಿ ಹಲವು ದಿನಗಳಿಂದ ನಡೆಯುತ್ತಿದ್ದು, ಗ್ರಾಮದಿಂದ ಬಹಳಷ್ಟು ದೂರ ಇದ್ದ ಕಾರಣ ಗಮನಕ್ಕೆ ಬಂದಿಲ್ಲ. ಇದರಲ್ಲಿ ಅನೇಕರ ಕೈವಾಡವಿದ್ದು, ಇಲಾಖೆ ತನಿಖೆ ನಡೆಸಬೇಕು. ಅರಣ್ಯ ಜಾಗ ಮಂಜೂರು ಮಾಡಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಎನ್‌ಒಸಿ ನೀಡಿಲ್ಲ- ಅಧಿಕಾರಿಗಳು:

ಸೊರಬ ವಲಯ ಅರಣ್ಯಾಧಿಕಾರಿ ಜಾವೇದ್ ಬಾಷಾ ಅಂಗಡಿ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು. ಜಮೀನು ಮಂಜೂರಾತಿಗೆ ಎನ್‌ಒಸಿ ನೀಡಿಲ್ಲ. ಯಾವುದೇ ಕಾರಣಕ್ಕೂ ಅರಣ್ಯ ಅತಿಕ್ರಮಣಕ್ಕೆ ಅವಕಾಶ ನೀಡಲ್ಲ. ಇಂಥ ಘಟನೆಗಳ ಬಗ್ಗೆ ತಕ್ಷಣ ಗಮನಕ್ಕೆ ತರಬೇಕು. ಸಿಬ್ಬಂದಿ ಕೊರತೆ ಇರುವುದರಿಂದ ಅರಣ್ಯ ರಕ್ಷಣೆ ಕಠಿಣವಾಗಿದೆ ಎಂದರು.

- - - ಕೋಟ್ಹೊಳೆಮರೂರು ಸರ್ವೆ ನಂ.೧೨೧ರ ಅರಣ್ಯ ಬಂಜರು ಭೂಮಿ ಯಾರಿಗೂ ಮಂಜೂರು ಮಾಡಿಲ್ಲ. ೮ ಎಕರೆ ಕಾಡು ಪ್ರದೇಶ ಮರ ಕಡಿತಲೆಯಾದ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು

- ರಮೇಶ್‌, ಗ್ರಾಮ ಲೆಕ್ಕಿಗ, ಕಂದಾಯ ಇಲಾಖೆ, ಚಂದ್ರಗುತ್ತಿ ಉಸ್ತುವಾರಿ ಸಚಿವರ ಸ್ವಕ್ಷೇತ್ರದಲ್ಲಿ ಮೇಲಿಂದ ಮೇಲೆ ಪರಿಸರದ ಮೇಲೆ ಪ್ರಹಾರ ನಡೆಯುತ್ತಿದೆ. ಕಳ್ಳ ದಂಧೆಗಾಗಿ ಕಾಡುಪ್ರಾಣಿಗಳ ಹತ್ಯೆ, ಬಗರ್‌ಹುಕುಂಗಾಗಿ ಅರಣ್ಯ ನಾಶ ಭಯವಿಲ್ಲದೇ ನಡೆಯುತ್ತಿದೆ. ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಕುಮ್ಮಕ್ಕಿಲ್ಲದೆ ಈ ಕೃತ್ಯ ನಡೆದಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಒತ್ತಡಗಳಿಗೆ ಮಣಿದು ಅರಣ್ಯ ನಾಶಕ್ಕೆ ಕಾರಣವಾದರೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ

- ಸುಬ್ರಹ್ಮಣ್ಯ, ಚಂದ್ರಶೇಖರ ಗೌಡ, ಗ್ರಾಮಸ್ಥರು - - - -೧೭ಕೆಪಿಸೊರಬ೦೨: ಹೊಳೆಮರೂರು ಬಳಿ ಬಂಜರು ಅರಣ್ಯ ಪ್ರದೇಶ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ಗ್ರಾಮಸ್ಥರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

Share this article