ಕಾಡಿನ ಕೆರೆ ಒಡೆದು ಕಾಫಿ ತೋಟಕ್ಕೆ ಅಪಾರ ಹಾನಿ

KannadaprabhaNewsNetwork |  
Published : Jul 24, 2025, 12:47 AM IST
೨೩ಬಿಹೆಚ್‌ಆರ್ ೨: ಬಾಳೆಹೊನ್ನೂರು ಸಮೀಪದ ಹೊನ್ನೇಕೊಪ್ಪದಲ್ಲಿ ಕಾಡಿನ ಕೆರೆ ಒಡೆದು ಸಮೀಪದ ತೋಟಕ್ಕೆ ಬಂದು ಬಿದ್ದಿರುವ ಕಲ್ಲಿನ ರಾಶಿ. | Kannada Prabha

ಸಾರಾಂಶ

ಬಾಳೆಹೊನ್ನೂರು, ಕಾಡಿನಲ್ಲಿ ಅರಣ್ಯ ಇಲಾಖೆಯವರು ನಿರ್ಮಿಸಿದ್ದ ಬೃಹತ್ ಕೆರೆ ಒಡೆದು ಕಾಫಿ ತೋಟಕ್ಕೆ ಹಾನಿಯಾದ ಘಟನೆ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಸಮೀಪದ ಹೊನ್ನೇಕೊಪ್ಪ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಹೊನ್ನೇಕೊಪ್ಪದ ವಿಠ್ಠಲ್ ರೈ ಎಂಬುವರ ಕಾಫಿ ತೋಟ ಜಲಾವೃತ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಕಾಡಿನಲ್ಲಿ ಅರಣ್ಯ ಇಲಾಖೆಯವರು ನಿರ್ಮಿಸಿದ್ದ ಬೃಹತ್ ಕೆರೆ ಒಡೆದು ಕಾಫಿ ತೋಟಕ್ಕೆ ಹಾನಿಯಾದ ಘಟನೆ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಸಮೀಪದ ಹೊನ್ನೇಕೊಪ್ಪ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.ಹೊನ್ನೇಕೊಪ್ಪದ ವಿಠ್ಠಲ್ ರೈ ಎಂಬುವರ ಕಾಫಿ ತೋಟಕ್ಕೆ ಕೆರೆ ಒಡೆದು ಹಾನಿಯಾಗಿದೆ. ಹೊನ್ನೇಕೊಪ್ಪ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಅರಣ್ಯ ಇಲಾಖೆಯವರು ಒಂದು ಎಕರೆಗೂ ಹೆಚ್ಚು ವಿಸ್ತೀರ್ಣದ ಕೆರೆಯನ್ನು ಕಾಡು ಪ್ರಾಣಿಗಳು ನೀರು ಕುಡಿಯಲೆಂದು ನಿರ್ಮಿಸಿದ್ದರು.ಈ ಬಾರಿ ಅವಧಿಗೆ ಮುನ್ನವೇ ಮಲೆನಾಡು ಭಾಗದಲ್ಲಿ ಮಳೆ ಆರಂಭಗೊಂಡಿದ್ದು, ಕಳೆದ ಕೆಲ ತಿಂಗಳ ಹಿಂದೆಯೇ ಕೆರೆ ನೀರಿನಿಂದ ತುಂಬಿತ್ತು. ಕಳೆದ ಎರಡ್ಮೂರು ತಿಂಗಳಿನಿಂದಲೂ ಮಳೆ ನಿರಂತರವಾಗಿ ಬರುತ್ತಿರುವ ಕಾರಣ ಕೆರೆಯಲ್ಲಿ ನೀರು ಹೆಚ್ಚಾಗಿ ಹೊರ ಹೋಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದಲ್ಲದೇ ಕೆರೆ ತೂಬಿಗೆ ಕಸ, ಕಡ್ಡಿ ಕಟ್ಟಿ ಹೆಚ್ಚಾದ ನೀರು ಹೊರ ಹೋಗುತ್ತಿರಲಿಲ್ಲ.ಮಂಗಳವಾರ ರಾತ್ರಿ ಹತ್ತು ಗಂಟೆ ವೇಳೆಗೆ ಕೆರೆ ದಂಡೆ ಒಡೆದಿದ್ದು, ಕೆರೆಯಲ್ಲಿದ್ದ ಸಂಪೂರ್ಣ ನೀರು ಸಮೀಪದ ವಿಠ್ಠಲ್ ರೈ ಅವರ ತೋಟಕ್ಕೆ ನುಗ್ಗಿದೆ. ತೋಟ ಜಲಾವೃತಗೊಂಡಿದೆ. ಇದರೊಂದಿಗೆ ನೀರು ಹರಿಯುವ ರಭಸಕ್ಕೆ ಕೆರೆ ಸುತ್ತಲಿನ ದೊಡ್ಡ ದೊಡ್ಡ ಗಾತ್ರದ ಹತ್ತಾರು ಲೋಡುಗಳಷ್ಟು ಕಲ್ಲಿನ ರಾಶಿ ಸಹ ತೋಟದೊಳಗೆ ಬಂದು ನಿಂತಿದೆ. ನೀರು ಹರಿದಿರುವ ಜಾಗದಲ್ಲಿ ನೀರಿನ ರಭಸಕ್ಕೆ ದೊಡ್ಡ ಹೊಂಡಗಳು ಸಹ ಬಿದ್ದು, ತೋಟದ ಕಾಫಿ ಗಿಡಗಳು ಬುಡ ಸಮೇತ ಕಿತ್ತು ಹಾನಿಯಾಗಿದೆ.

ಮಂಗಳವಾರ ಸಂಜೆ ವೇಳೆಗೆ ತೋಟಕ್ಕೆ ತೆರಳಿ ನೋಡಿಕೊಂಡು ಬಂದಿದ್ದ ವಿಠ್ಠಲ್ ರೈ ಅವರು ಬುಧವಾರ ಬೆಳಗಿನ ವೇಳೆಗೆ ತೋಟ ಜಲಾವೃತಗೊಂಡಿರುವುದನ್ನು ನೋಡಿ ಆತಂಕಗೊಂಡಿದ್ದಾರೆ. ಕಷ್ಟಪಟ್ಟು ಬೆಳೆಸಿದ ತೋಟಕ್ಕೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ಇದರಿಂದ ಬೇಸರವಾಗಿದೆ. ದೊಡ್ಡ ಕಲ್ಲುಗಳನ್ನು ಸ್ಥಳಾಂತರಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ಅರಣ್ಯ ಇಲಾಖೆಯವರು ಅವೈಜ್ಞಾನಿಕವಾಗಿ ಕೆರೆ ನಿರ್ಮಿಸಿರುವುದೇ ಅನಾಹುತಕ್ಕೆ ಕಾರಣ. ಇಷ್ಟು ದೊಡ್ಡ ಘಟನೆ ನಡೆದು ಲಕ್ಷಾಂತರ ರು. ನಷ್ಟವಾದರೂ ಸಹ ಇದುವರೆಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ನಮಗೆ ಆದ ನಷ್ಟಕ್ಕೆ ಪರಿಹಾರ ಯಾರಲ್ಲಿ ಕೇಳುವುದು ಎಂದು ತೋಟದ ಮಾಲೀಕರ ಮಗ ಚಂದ್ರಶೇಖರ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

೨೩ಬಿಹೆಚ್‌ಆರ್ ೨:

ಬಾಳೆಹೊನ್ನೂರು ಸಮೀಪದ ಹೊನ್ನೇಕೊಪ್ಪದಲ್ಲಿ ಕಾಡಿನ ಕೆರೆ ಒಡೆದು ಸಮೀಪದ ತೋಟಕ್ಕೆ ಬಂದು ಬಿದ್ದಿರುವ ಕಲ್ಲಿನ ರಾಶಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ