ಅಂಕೋಲಾ: ಅರಣ್ಯವಾಸಿಗಳಿಗೆ ಅರಣ್ಯ ಭೂಮಿ ಹಕ್ಕು ನೀಡುವುದು ಭಿಕ್ಷೆ ಅಥವಾ ದಾನವಲ್ಲ, ಸಂವಿಧಾನಬದ್ಧ ಹಕ್ಕು. ಇಚ್ಛಾಶಕ್ತಿ ಕೊರತೆಯಿಂದ ಅರಣ್ಯವಾಸಿಗಳು ಭೂಮಿ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.ಭಾನುವಾರ ಜೈ ಹಿಂದ ರಂಗಮಂದಿರದಲ್ಲಿ ಅರಣ್ಯವಾಸಿಗಳ ಬೆಂಗಳೂರು ಚಲೋ ಕಾರ್ಯಕ್ರಮದ ಅರಣ್ಯವಾಸಿಗಳ ಪೂರ್ವಬಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ನಿರಂತರ 33 ವರ್ಷ ಹೋರಾಟ ಸಂಘಟನೆ ಮೂಲಕ ಅರಣ್ಯಭೂಮಿ ಹಕ್ಕಿಗಾಗಿ ಜನಾಂದೋಲನ ಜರುಗಿದರೂ ಸಹಿತ ಅರಣ್ಯವಾಸಿಗಳಿಗೆ ಭೂಮಿ ಹಕ್ಕು ದೊರಕದಂತಾಗಿದೆ ಎಂದರು.ಜಿಲ್ಲಾ ಪ್ರಧಾನ ಸಂಚಾಲಕ ಜೆ.ಎಂ. ಶೆಟ್ಟಿ ಮಾತನಾಡಿ, ಅರಣ್ಯ ಭೂಮಿ ಹಕ್ಕು ಅರಣ್ಯವಾಸಿಗಳಿಗೆ ಒದಗಿಸದಿದ್ದಲ್ಲಿ ಜಿಲ್ಲೆಯು ನಿರಾಶ್ರಿತರ ಜಿಲ್ಲೆಯಾಗುವುದು. ಸರ್ಕಾರ ಗಂಭೀರವಾಗಿ ಚಿಂತಿಸಬೇಕು ಹಾಗೂ ಕಸ್ತೂರಿ ರಂಗನ ವರದಿಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ತಿರಸ್ಕರಿಸಬೇಕೆಂದು ಆಗ್ರಹಿಸಿದರು.ಸಾಮಾಜಿಕ ಚಿಂತಕ ಆರ್.ವಿ. ನಾಯಕ ಮಾತನಾಡಿ, ಅರಣ್ಯ ಹಕ್ಕು ಕಾಯಿದೆ ಅನುಷ್ಠಾನ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಕಾನೂನು ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ವಿಫಲವಾಗದಂತೆ ಲಕ್ಷವಹಿಸಬೇಕೆಂದರು.ಅಚವೆ ಗ್ರಾಪಂ ಅಧ್ಯಕ್ಷ ಬಾಲಚಂದ್ರ ಶೆಟ್ಟಿ, ಜಿಲ್ಲಾ ಸಂಚಾಲಕ ರಾಜೇಶ ಮಿತ್ರಾ ನಾಯ್ಕ, ಹಿರಿಯ ವಕೀಲ ಉಮೇಶ ನಾಯ್ಕ, ಪಾಂಡುರಂಗ ಗೌಡ, ತಾಲೂಕು ಅಧ್ಯಕ್ಷ ರಮಾನಂದ ನಾಯ್ಕ, ಉದಯ ನಾಯ್ಕ ಮಾತನಾಡಿದರು.ರೇಣುಕಾ ಸಿದ್ದಿ ಡೋಂಗ್ರಿ, ವೆಂಕಟರಮಣ ಕೆ. ನಾಯ್ಕ, ರಾಮಚಂದ್ರ ತಾಡೇಲ್, ಸಂದೇಶ ನಾಯ್ಕ ಬ್ರಹ್ಮೂರು ಉಪಸ್ಥಿತರಿದ್ದರು. ತಾಲೂಕು ಸಂಚಾಲಕ ಅರವಿಂದ ಗೌಡ ವಂದಿಸಿದರು.