ಕನ್ನಡಪ್ರಭ ವಾರ್ತೆ ಕೆ.ಆರ್. ನಗರಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿರುವ ಮಲೆ ಮಹದೇಶ್ವರ ದೇವಾಲಯದ 54ನೇ ವರ್ಷದ ಉತ್ಸವ ಸೋಮವಾರ ಅತ್ಯಂತ ವೈಭವದಿಂದ ನಡೆಯಿತು. ಉತ್ಸವಕ್ಕೆ ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜ ಶ್ರೀಗಳು, ಕರ್ಪೂರವಳ್ಳಿ ಜಂಗಮ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬೆಟ್ಟದಪುರ ವಿರಕ್ತ ಮಠದ ಚನ್ನವೀರದೇಶಿಕೇಂದ್ರ ಸ್ವಾಮೀಜಿ, ಲಾಳನಹಳ್ಳಿ ಮಠದ ಶರಣೆ ಜಯದೇವಿ ತಾಯಿ ಮತ್ತು ಅರಕೆರೆ ವಿರಕ್ತ ಮಠದ ಸಿದ್ದೇಶ್ವರ ಸ್ವಾಮಿಗಳು ಚಾಲನೆ ನೀಡಿದರು. ಉತ್ಸವದಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅರಣ್ಯ ಸಚಿವ, ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಈಶ್ವರ ಬಿ. ಖಂಡ್ರೆ ನಮ್ಮ ಪ್ರಾಚೀನ ಸಂಸ್ಕೃತಿ, ಸಂಪ್ರದಾಯಗಳ ಉಳಿವಿಗೆ ಜಾತ್ರೆ, ಉತ್ಸವ, ಧಾರ್ಮಿಕ ಮಹೋತ್ಸವಗಳು ಸಾಕ್ಷಿಯಾಗಿವೆ ಎಂದರು. ಕಾರ್ತಿಕ ಮಾಸ ಬೆಳಕಿನ ಹಬ್ಬವಾಗಿದ್ದು, ಅದು ನಮ್ಮಲ್ಲಿ ಇರುವ ಅಜ್ಞಾನವೆಂಬ ಅಂಧಕಾರವನ್ನು ತೊಡೆದು ಹಾಕಿ, ಸುಜ್ಞಾನದ ಬೆಳಕನ್ನು ಹಚ್ಚುವ ಮಾಸವಾಗಿದ್ದು, ಈ ಸಮಯದಲ್ಲಿ ವಿವಿಧ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ, ಅರ್ಚನೆ, ಲಕ್ಷ ದೀಪೋತ್ಸವ ಮತ್ತು ಉತ್ಸವಗಳು ನಡೆದು ಧಾರ್ಮಿಕ ವಿಚಾರಗಳ ವಿನಿಮಯಗಳ ಮೂಲಕ ಸಹಬಾಳ್ವೆಯ ಮಹತ್ವ ಸಾರುತ್ತವೆ ಎಂದು ಹೇಳಿದರು.ಶಾಸಕ ಡಿ. ರವಿಶಂಕರ್ ಮಾತನಾಡಿ, ಇಲ್ಲಿನ ಬಸವೇಶ್ವರ ಬಡಾವಣೆಯಲ್ಲಿ ನಡೆಯುವ ಕಡೆ ಕಾರ್ತಿಕ ಸೋಮವಾರದ ಮಹದೇಶ್ವರಸ್ವಾಮಿಯ ಉತ್ಸವಕ್ಕೆ ದಶಕಗಳ ಇತಿಹಾಸವಿದ್ದು, ಪ್ರತಿ ವರ್ಷ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪೂಜೆ ಸಲ್ಲಿಸುತ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲರೂ ಸೇರಿ ಉತ್ಸವವನ್ನು ಮತ್ತಷ್ಟು ವೈಭವದಿಂದ ಆಚರಿಸೋಣ ಎಂದರು. ಉತ್ಸವದ ಅಂಗವಾಗಿ ಮುಂಜಾನೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತಲ್ಲದೆ ದೇವಾಲಯದ ಒಳಾಂಗಣವನ್ನು ಬಗೆಗೆಯ ಹೂಗಳಿಂದ ವಿಶೇಷವಾಗಿ ಅಲಂಕಾರ ಮಾಡುವುದರ ಜತೆಗೆ ಮಹದೇಶ್ವರಸ್ವಾಮಿಗೆ ಪುಷ್ಪಾಲಂಕಾರ ಮಾಡಲಾಗಿತ್ತು. ಈ ಸಂಧರ್ಭದಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ದೇವಾಲಯದ ಬಳಿಯಿಂದ ಹೊರಟ ಮಲೆ ಮಹದೇಶ್ವರ ಸ್ವಾಮಿಯ ಮುತ್ತಿನ ಪಲ್ಲಕ್ಕಿ ಉತ್ಸವ ಬಸವೇಶ್ವರ ಬಡಾವಣೆ, ಮೈಸೂರು-ಹಾಸನ ಮುಖ್ಯ ರಸ್ತೆ, ಬಜಾರ್ ರಸ್ತೆ, 7ನೇ ರಸ್ತೆಯ ಮೂಲಕ ದೇವಾಲಯದವರೆಗೆ ಸಾವಿರಾರು ಮಂದಿ ಭಕ್ತರ ಜಯಘೋಷದ ನಡುವೆ ನಡೆಯಿತು. ಮೆರವಣಿಗೆಯಲ್ಲಿ ನಂದಿಧ್ವಜ, ನಾಸಿಕ್ ಬ್ಯಾಂಡ್, ಪೂಜಾ ಕುಣಿತ, ವೀರಭದ್ರಕುಣಿತ, ತಮಟೆಪ್ರದರ್ಶನ, ಚಂಡೆಮೇಳ, ಮಂಗಳವಾದ್ಯ, ಕಂಸಾಳೆ, ವೀರಗಾಸೆ, ಹುಲಿವೇಷ, ಡೊಳ್ಳುಕುಣಿತ, ಗೊಂಬೆಕುಣಿತ, ಯಕ್ಷಗಾನ ಮತ್ತು ಕೀಲುಕುದುರೆ, ಕಲಾವಿದರು ಎಲ್ಲರ ಗಮನ ಸೆಳೆದರು. ಸಂಜೆ ಬಸವೇಶ್ವರ ದೇವಾಲಯದ ಮುಂಬಾಗ ಕೊಂಡೋತ್ಸವ ನಡೆಯಿತು. ನಂತರ ಶಿವಾನುಭವ ಕಲ್ಯಾಣ ಮಂಟಪದ ಆವರಣದಲ್ಲಿ ಪಟಾಕಿ ಪ್ರದರ್ಶನ ನಡೆಸಿ ದೇವೀರಮ್ಮ ಶಿಶುವಿಹಾರದ ಮೈದಾನದಲ್ಲಿ ಸಾಲುಪಂಕ್ತಿ ಅನ್ನದಾಸೋಹ ನಡೆಯಿತು. ಕೆ.ಆರ್. ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು. ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಮಹೇಶ್, ನವ ನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ. ರಮೇಶ್ ಕುಮಾರ್, ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ ಮತ್ತು ಉತ್ಸವ ಸಮಿತಿಯ ಅಧ್ಯಕ್ಷ ಬೋಜರಾಜು, ಗೌರವಾಧ್ಯಕ್ಷ ಆರ್.ಎಚ್. ನಟರಾಜು, ಉಪಾಧ್ಯಕ್ಷ ಕೆ.ಎಸ್. ಸೋಮೇಶ್, ಕಾರ್ಯದರ್ಶಿ ಕೆ.ಬಿ. ಮಂಜುನಾಥ್, ಖಜಾಂಚಿ ಎ.ಎಸ್. ಗಣೇಶ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ. ಶಿವಣ್ಣ, ಪುರಸಭೆ ಸದಸ್ಯರಾದ ಮಂಜುಳ ಚಿಕ್ಕವೀರು, ತೋಂಟದಾರ್ಯ, ವೀಣಾ ವೃಷಬೇಂದ್ರ, ಕೆ.ಪಿ. ಪ್ರಭುಶಂಕರ್, ನಟರಾಜು, ಮಾಜಿ ಅಧ್ಯಕ್ಷ ಹರ್ಷಲತಾ ಶ್ರೀಕಾಂತ್, ವೀರಶೈವ ಮುಖಂಡ ಶಿವಣ್ಣ ಮತ್ತು ಸಮಿತಿಯ ಪದಾಧಿಕಾರಿಗಳು ಇದ್ದರು.