ಅರಣ್ಯ-ವನ್ಯಜೀವಿಗಳು ಮುಂದಿನ ಪೀಳಿಗೆಗೆ ಅನಿವಾರ್ಯ: ಶಾಸಕ ಎಚ್.ಎಂ.ಗಣೇಶ್

KannadaprabhaNewsNetwork | Published : Aug 6, 2024 12:41 AM

ಸಾರಾಂಶ

ಅರಣ್ಯ ಹಾಗೂ ವನ್ಯಜೀವಿಗಳು ಮುಂದಿನ ಪೀಳಿಗೆಗೆ ಅನಿವಾರ್ಯ ಹಾಗಾಗಿ ಅರಣ್ಯ ಸಂರಕ್ಷಣೆ ನಮ್ಮೆಲ್ಲರ ದೊಡ್ಡ ಜವಾಬ್ದಾರಿ ಎಂದು ಶಾಸಕ ಹಾಗೂ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು. ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಫಾರಿ ಕ್ಯಾಂಪಸ್‌ನಲ್ಲಿ ಬಂಡೀಪುರ ಅರಣ್ಯ ಇಲಾಖೆ ಅಯೋಜಿಸಿದ್ದ ವಿಶ್ವ ಹುಲಿ ಮತ್ತು ಆನೆ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಅರಣ್ಯ ಹಾಗೂ ವನ್ಯಜೀವಿಗಳು ಮುಂದಿನ ಪೀಳಿಗೆಗೆ ಅನಿವಾರ್ಯ ಹಾಗಾಗಿ ಅರಣ್ಯ ಸಂರಕ್ಷಣೆ ನಮ್ಮೆಲ್ಲರ ದೊಡ್ಡ ಜವಾಬ್ದಾರಿ ಎಂದು ಶಾಸಕ ಹಾಗೂ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.

ತಾಲೂಕಿನ ಬಂಡೀಪುರ ಸಫಾರಿ ಕ್ಯಾಂಪಸ್‌ನಲ್ಲಿ ಬಂಡೀಪುರ ಅರಣ್ಯ ಇಲಾಖೆ ಅಯೋಜಿಸಿದ್ದ ವಿಶ್ವ ಹುಲಿ ಮತ್ತು ಆನೆ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಡು, ವನ್ಯಜೀವಿಗಳ ಸಂರಕ್ಷಣೆಯ ಜೊತೆಗೆ ಹುಲಿ ಸಂರಕ್ಷಿತ ಪ್ರದೇಶದ ಜನರ ರಕ್ಷಣೆಯೂ ಮುಖ್ಯ ಎಂದರು.

ರಾಜ್ಯದಲ್ಲಷ್ಟೆ ಅಲ್ಲ, ಇಡೀ ದೇಶದಲ್ಲಿ ಕಾಡು ಕಡಿಮೆ ಆಗುತ್ತಿದೆ. ಕಾಡು ಉಳಿಸಿ ಬೆಳೆಸುವ ಕೆಲಸ ಅಗಬೇಕು ಎನ್ನುವ ಕಾರಣದಿಂದಲೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಐದು ಲಕ್ಷ ಸಸಿ ನೆಟ್ಟು ಪೋಷಿಸಲು ಮುಂದಾಗಿದ್ದಾರೆ. ಈ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಪ್ರಸ್ತುತ ಮಾನವ ಪ್ರಾಣಿ ಸಂಘರ್ಷ ಹೆಚ್ಚಾಗುತ್ತಿದೆ, ನಗರ ಪ್ರದೇಶಕ್ಕೆ ವನ್ಯಜೀವಿ ದಾಳಿ ಇಡುತ್ತಿವೆ. ಮಾನವ, ಪ್ರಾಣಿ ಸಂಘರ್ಷ ತಡೆಯಲು ಸರ್ಕಾರಗಳು ಯೋಜನೆ ರೂಪಿಸುತ್ತಿವೆ ಆದರೂ ಮಾನವ ಪ್ರಾಣಿ ಸಂಘರ್ಷ ಕಡಿಮೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪರಿಸರ ಉಳಿಸಲು ಕೆಲಸ ಕೇವಲ ಅರಣ್ಯ ಇಲಾಖೆಯಿಂದ ಸಾಧ್ಯವಿಲ್ಲ. ಸಾರ್ವಜನಿಕರು, ಕಾಡಂಚಿನ ಪ್ರದೇಶದ ಜನರು ಸಹಕಾರ ಬೇಕು. ವನ್ಯಜೀವಿಗಳ ಸ್ವಚ್ಛಂಧ ವಿಹಾರಕ್ಕೆ ಜನರು ತಡೆ ಹಾಕಬೇಡಿ ಎಂದರು. ಬಂಡೀಪುರದ ಓಂಕಾರ ವಲಯದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿವೆ. ಹಾವಳಿ ತಡೆಗೆ ರೇಲ್ವೆ ಬ್ಯಾರಿಕೇಡ್, ಆನೆ ಕಂದಕ ನಿರ್ಮಾಣಕ್ಕೆ ಅನುದಾನ ಪ್ರಸ್ತಾವನೆ ಸಲ್ಲಿಸಲಾಗಿದೆ, ಮಾನವ ಪ್ರಾಣಿ ಸಂಘರ್ಷ ತಡೆಯಲು ಹೆಚ್ಚಿನ ಅನುದಾನ ಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಗ್ರಾಪಂ ಅಧ್ಯಕ್ಷೆ ರಾಜಮ್ಮ.ಆರ್, ಗ್ರಾಪಂ ಉಪಾಧ್ಯಕ್ಷ ನಾಗರಾಜು, ಡಿಸಿಎಫ್ ಕೆ.ಪರಮೇಶ್, ಎಸಿಎಫ್‌ಗಳಾದ ಸುರೇಶ್, ಸತೀಶ್, ಜಿ.ರವೀಂದ್ರ, ಆರ್‌ಎಫ್‌ಒಗಳಾದ ಎನ್.ಪಿ.ನವೀನ್ ಕುಮಾರ್, ಬಿ.ಎಂ.ಮಲ್ಲೇಶ್, ಕೆ.ಪಿ.ಸತೀಶ್ ಕುಮಾರ್, ಎಚ್.ಎಂ.ಮಂಜುನಾಥ್, ದೀಪಾ, ಪುನೀತ್ ಕುಮಾರ್, ಕೆ.ಆರ್.ನಾರಾಯಣ್ ಸೇರಿದಂತೆ ನೂರಾರು ಮಂದಿ ಇದ್ದರು.

ನಮ್ಮ ಪುಣ್ಯ ನಮ್ಮಲ್ಲಿ ಶುದ್ಧ ಗಾಳಿ ಸಿಗ್ತಿದೆ: ನಗರ ಪ್ರದೇಶಗಳಲ್ಲಿ ದುಡ್ಡ ಕೊಟ್ಟು ಆಕ್ಸಿಜನ್‌ ಬಾರ್‌ ಹೋಗ್ತಾರೆ. ನಗರ ಪ್ರದೇಶಗಳಲ್ಲಿ ಶುದ್ಧ ಗಾಳಿಗೆ ಜನ ದುಡ್ಡು ಕೊಟ್ಟು ಸೇವಿಸಿದರೆ ಬಂಡೀಪುರದಲ್ಲಿ ಪುಕ್ಸಟ್ಟೆ ಶುದ್ಧ ಗಾಳಿ ಸಿಗುತ್ತಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು. ಕಾಡು ಬೇಕೇ ಬೇಕು, ನಾವು ಕಾಡು ಉಳಿಸದಿದ್ದರೆ ಮುಂದಿನ ಪೀಳಿಗೆಗೆ ಭಾರೀ ಅನಾಹುತ ಎದುರಿಸಬೇಕಾಗುತ್ತದೆ. ಆದ್ದರಿಂದ ಕಾಡು, ಪ್ರಾಣಿ, ಜನರು ಹಾಗೂ ಕಾಡಿನ ಸಿಬ್ಬಂದಿಗಳ ರಕ್ಷಣೆಯೂ ಮುಖ್ಯ ಎಂದರು.

ಎಲ್ಲರೂ ಅರಣ್ಯ ಇಲಾಖೆಗೆ ಎಲ್ಲರು ಕೈ ಜೋಡಿಸಿ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ದೇಶದಲ್ಲಿ ಹುಲಿ ಸಂಖ್ಯೆಯಲ್ಲಿ ನಂಬರ್‌ ಓನ್‌ ಆಗಬೇಕು ಎಂದರೆ ಎಲ್ಲರೂ ಅರಣ್ಯ ಇಲಾಖೆಗೆ ಎಲ್ಲರು ಕೈ ಜೋಡಿಸಬೇಕು ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಪ್ರಭಾಕರನ್‌ ಮನವಿ ಮಾಡಿದರು.

ವಿಶ್ವ ಆನೆ ಮತ್ತು ಹುಲಿ ದಿನಾಚರಣೆ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಹುಲಿ ಸಂಖ್ಯೆಯಲ್ಲಿ ದೇಶದಲ್ಲಿ ಬಂಡೀಪುರ 2ನೇ ಸ್ಥಾನದಲ್ಲಿದೆ. ಟಿಆರ್‌ಎಂನಲ್ಲೂ 53 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ 2ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಆನೆ ಸಂಖ್ಯೆಯಲ್ಲಿ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ. ದೇಶದಲ್ಲಿ 6600 ಆನೆಗಳಿದ್ದರೆ, ಬಂಡೀಪುರದಲ್ಲಿ 1114 ಆನೆಗಳಿವೆ. ಹುಲಿ, ಆನೆ ಹೆಚ್ಚಳದಲ್ಲಿ ಒಬ್ಬರು, ಇಬ್ಬರ ಸಾಧನೆಯಲ್ಲ 50 ವರ್ಷದಲ್ಲಿ ಕೆಲಸ ನಿರ್ವಹಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾಧನೆ ಎಂದರು.ಎಲಿಫೆಂಟ್‌ ಟಾಸ್ಕ್‌ ಪೋರ್ಸ್‌ ಉದ್ಘಾಟನೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎಲಿಫೆಂಟ್‌ ಟಾಸ್ಕ್‌ ಪೋರ್ಸ್‌ಗೆ ಶಾಸಕ ಹಾಗೂ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಎಚ್.ಎಂ.ಗಣೇಶ್‌ ಪ್ರಸಾದ್‌ ಅಧಿಕೃತವಾಗಿ ಉದ್ಘಾಟಿಸಿದರು. ಬಂಡೀಪುರ ಸಫಾರಿ ಕ್ಯಾಂಪಸ್‌ನ ಆವರಣದಲ್ಲಿ ಸೋಮವಾರ ನಡೆದ ವಿಶ್ವ ಹುಲಿ ಮತ್ತು ಆನೆ ದಿನಾಚರಣೆ ಸಮಾರಂಭದಲ್ಲಿ ಎಲಿಫೆಂಟ್‌ ಟಾಸ್ಕ್‌ ಪೋರ್ಸ್‌ ಚಾಲನೆ ನೀಡಿದ್ದೇನೆ ಎಂದರು.

ಇದೇ ವೇಳೆ ವಿಶ್ವ ಆನೆ ದಿನಾಚರಣೆ ಪ್ರಯುಕ್ತ ಇಲಾಖೆಯ ಸಾಕಾನೆಗಳಿಗೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅವರು ವಿಶೇಷ ಆಹಾರವನ್ನು ತಿನ್ನಿಸಿ, ಖುಷಿ ಪಟ್ಟು ಆನೆಗೊಳೊಂದಿಗೆ ಪೋಸ್‌ ನೀಡಿದರು.

ಸನ್ಮಾನಿಸಿದ ಶಾಸಕ

ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಸನ್ಮಾನಿಸಿ ಅಭಿನಂದಿಸಿ ನೆನಪಿನ ಕಾಣಿಕೆ ನೀಡಿದರು.

ಪರಿಹಾರ ವಿತರಣೆ

ವನ್ಯಜೀವಿಗಳ ದಾಳಿಗೆ ಸಿಲುಕಿ ಸಾವನ್ನಪ್ಪಿದ ಹಾಗೂ ಗಾಯಗೊಂಡವರಿಗೆ ಪರಿಹಾರದ ಚೆಕ್‌ನ್ನು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಫಲಾನುಭವಿಗಳಿಗೆ ಹಸ್ತಾಂತರಿಸಿದ ಬಳಿಕ ವಿವಿಧ ಫಲಾನುಭವಿಗಳಿಗೆ ಅರಣ್ಯ ಇಲಾಖೆಯ ಸೌಲಭ್ಯಗಳನ್ನು ವಿತರಿಸಿದರು.

Share this article